ಆಪರೇಷನ್ ಕಮಲದಲ್ಲಿದ್ದ ಉದಯ್ ಕಾಂಗ್ರೆಸ್ ಸೇರ್ಪಡೆ
ಪೂರ್ವ ನಿಗದಿಯಂತೆ ಮದ್ದೂರು ಟಿಕೆಟ್ ಆಕಾಂಕ್ಷಿ, ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮಾಜ ಸೇವಕ ಕದಲೂರು ಉದಯ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಬೆಂಗಳೂರು(ಮಾ.14): ಬಿಜೆಪಿಯ ಪುಟ್ಟಣ್ಣ ಅವರು ವಿಧಾನ ಪರಿಷತ್ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಸೋಮವಾರ ನಿಗದಿಯಾಗಿದ್ದ ಪುಟ್ಟಣ್ಣ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಮುಂದೂಡಲಾಗಿದೆ.
ಇದೇ ಕಾರ್ಯಕ್ರಮದಲ್ಲಿ ಪೂರ್ವ ನಿಗದಿಯಂತೆ ಮದ್ದೂರು ಟಿಕೆಟ್ ಆಕಾಂಕ್ಷಿ, ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮಾಜ ಸೇವಕ ಕದಲೂರು ಉದಯ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಉದಯ್ ಗೌಡ ಮೈತ್ರಿ ಸರ್ಕಾರ ಪತನದ ವೇಳೆ ಪ್ರಮುಖ ಪಾತ್ರ ವಹಿಸಿದ್ದರು ಎನ್ನುತ್ತಾರೆ. ರಾಜಕಾರಣದಲ್ಲಿ ಇವೆಲ್ಲವೂ ಆಗುತ್ತಿರುತ್ತವೆ. ನಮ್ಮ ಪಕ್ಷದಲ್ಲಿದ್ದವರು ಬೇರೆ ಕಡೆ ಹೋಗಿಲ್ಲವೇ? ಇದೂ ಕೂಡ ಹಾಗೆ. ನನಗೂ ಕುಮಾರಸ್ವಾಮಿಗೆ ಸಾಕಷ್ಟು ಭಿನ್ನಾಭಿಪ್ರಾಯ ಇದ್ದವು. ಹೈಕಮಾಂಡ್ ಹೇಳಿದಾಗ ಇಬ್ಬರು ತಬ್ಬಾಡಿಕೊಂಡಿಲ್ಲವೇ? ಹಾಗೆ ಇವರೂ ತಬ್ಬಾಡಿಕೊಳ್ಳುತ್ತಾರೆ ಬಿಡಿ ಎಂದು ಹೇಳಿದರು.
ಅರುಣ್ ಸೋಮಣ್ಣನ ಕೈ ಹಿಡಿದ ಬಿಜೆಪಿ: ಕಾಂಗ್ರೆಸ್‌ಗೆ ಕೈಕೊಟ್ಟ ಸಚಿವ ವಿ.ಸೋಮಣ್ಣ
ಕಾಂಗ್ರೆಸ್ ಸೇರ್ಪಡೆಯಾಗುವ ಸಲುವಾಗಿ ಪುಟ್ಟಣ್ಣ ಬಿಜೆಪಿಯ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಪಕ್ಷ ಸೇರ್ಪಡೆ ಬಗ್ಗೆ ಘೋಷಿಸಿದ್ದರು. ಅವರ ಪಕ್ಷ ಸೇರ್ಪಡೆಗೆ ಅಧಿಕೃತವಾಗಿ ಸೋಮವಾರ ದಿನಾಂಕ ನಿಗದಿಯಾಗಿತ್ತು. ಆದರೆ ರಾಜೀನಾಮೆ ಅಂಗೀಕಾರ ಆಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಂದೂಡಲಾಗಿದೆ.
ಉದಯ್ ‘ಕೈ’ ಪಕ್ಷ ಸೇರ್ಪಡೆ:
ಕದಲೂರು ಉದಯ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಉದಯ್ (ಉದಯ್ ಗೌಡ) ಅವರು ಸೋಮವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಮದ್ದೂರು ಟಿಕೆಟ್ ಆಕಾಂಕ್ಷಿ ಆಗಿರುವ ಅವರು ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉದಯ್ ಅವರಿಗೆ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಎಚ್‌ಡಿಕೆ-ನಾನು ತಬ್ಬಿಕೊಂಡಿಲ್ಲವೇ:
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಉದಯ್ ಗೌಡ ಮೈತ್ರಿ ಸರ್ಕಾರ ಪತನದ ವೇಳೆ ಪ್ರಮುಖ ಪಾತ್ರ ವಹಿಸಿದ್ದರು ಎನ್ನುತ್ತಾರೆ. ರಾಜಕಾರಣದಲ್ಲಿ ಇವೆಲ್ಲವೂ ಆಗುತ್ತಿರುತ್ತವೆ. ನಮ್ಮ ಪಕ್ಷದಲ್ಲಿದ್ದವರು ಬೇರೆ ಕಡೆ ಹೋಗಿಲ್ಲವೇ? ಇದೂ ಕೂಡ ಹಾಗೆ. ನನಗೂ ಕುಮಾರಸ್ವಾಮಿಗೆ ಸಾಕಷ್ಟು ಭಿನ್ನಾಭಿಪ್ರಾಯ ಇದ್ದವು. ಹೈಕಮಾಂಡ್ ಹೇಳಿದಾಗ ಇಬ್ಬರು ತಬ್ಬಾಡಿಕೊಂಡಿಲ್ಲವೇ? ಹಾಗೆ ಇವರೂ ತಬ್ಬಾಡಿಕೊಳ್ಳುತ್ತಾರೆ ಬಿಡಿ ಎಂದು ಹೇಳಿದರು.
ಮದ್ದೂರು ಎಸ್.ಎಂ. ಕೃಷ್ಣ, ಮಾದೇಗೌಡರಂತಹ ಬಹಳ ದೊಡ್ಡ ನಾಯಕರನ್ನು ಕೊಟ್ಟ ಪವಿತ್ರ ಕ್ಷೇತ್ರ. ಪ್ರಜ್ಞಾವಂತ ರೈತರಿರುವ ಕ್ಷೇತ್ರ. ಹಿಂದೆ ನಮ್ಮದೇ ಕೆಲ ತಪ್ಪುಗಳಿಂದ ಕ್ಷೇತ್ರ ಕಳೆದುಕೊಂಡಿದ್ದೆವು. ಇದೀಗ ನಾಯಕರೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. ಉದಯ್ ಗೌಡ ಮದ್ದೂರಿನಲ್ಲಿ ಸ್ವಂತ ಶಕ್ತಿ ಬೆಳೆಸಿಕೊಂಡಿದ್ದಾರೆ. ಜೆಡಿಎಸ್ ಹಾಗೂ ತಮ್ಮಣ್ಣ ಅವರನ್ನು ಸೋಲಿಸಬೇಕಿದೆ. ಅದೊಂದೇ ಉದ್ದೇಶ ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಶಾಸಕ ನರೇಂದ್ರ ಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಮಧು ಮಾದೇಗೌಡ, ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಹಾಜರಿದ್ದರು.
ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವಾಗ್ದಾಳಿ
ಪುಟ್ಟಣ್ಣ ಸೇರ್ಪಡೆಗೆ ವಿರೋಧ
ಕಾಂಗ್ರೆಸ್ ಸೇರ್ಪಡೆಯಾಗಲಿರುವ ಪುಟ್ಟಣ್ಣ ರಾಜಾಜಿನಗರ ಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜಾಜಿನಗರ ಟಿಕೆಟ್ ಆಕಾಂಕ್ಷಿ ಮೂಲ ಕಾಂಗ್ರೆಸ್ಸಿಗರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾಗಿರುವ ರಘುವೀರ್‌ಗೌಡ, ಭವ್ಯಾ ನರಸಿಂಹ ಮೂರ್ತಿ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡಿ ಈಗಷ್ಟೇ ಸೇರ್ಪಡೆಯಾಗುತ್ತಿರುವ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಬಾರದು. ನಮ್ಮಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.
ಯಾರ ಬೆದರಿಕೆಗೂ ಪಕ್ಷ ಬಗ್ಗುವುದಿಲ್ಲ: ಡಿಕೆಶಿ
ಪುಟ್ಟಣ್ಣ ಅವರಿಗೆ ರಾಜಾಜಿನಗರ ಟಿಕೆಟ್ ನೀಡುತ್ತಿದ್ದೇವೆ ಎಂದು ಯಾರು ಹೇಳಿದರು? ಪಕ್ಷದ ಅನುಕೂಲಕ್ಕೆ ತಕ್ಕಂತೆ ಪಕ್ಷ ತೀರ್ಮಾನ ಮಾಡಲಿದೆ. ಯಾರ ಬೆದರಿಕೆಗೂ ಕಾಂಗ್ರೆಸ್ ಪಕ್ಷ ಬಗ್ಗುವುದಿಲ್ಲ. ಪಕ್ಷ ಈ ವಿಚಾರವಾಗಿ ಯಾವ ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.