ಶರಾವತಿ ಸೇತುವೆ ಉದ್ಘಾಟನೆ ಆಗಿರುವುದು ಸ್ವಾಗತ. ಆದರೆ, ಈ ಕಾರ್ಯಕ್ರಮಕ್ಕೆ ಬೇಕು ಅಂತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಡವಾಗಿ ಆಹ್ವಾನಿಸಲಾಗಿದೆ.
ಶಿವಮೊಗ್ಗ (ಜು.16): ಶರಾವತಿ ಸೇತುವೆ ಉದ್ಘಾಟನೆ ಆಗಿರುವುದು ಸ್ವಾಗತ. ಆದರೆ, ಈ ಕಾರ್ಯಕ್ರಮಕ್ಕೆ ಬೇಕು ಅಂತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಡವಾಗಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಅವರು ಕರೆ ಮಾಡಿ ಕಾರ್ಯಕ್ರಮಕ್ಕೆ ತೆರಳದಂತೆ ಸೂಚಿಸಿದ್ದರಿಂದ ನಾನು ಹಾಜರಾಗಿರಲಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ 3 ದಿನವಿದ್ದಾಗ ಸಿಎಂ ಅವರನ್ನು ಆಹ್ವಾನಿಸಲಾಗಿದೆ.
ಈ ಸೇತುವೆಯನ್ನು ನಾನೇ ಮಾಡಿದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಕೊಚ್ಚಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಹಣವೇ ಆಗಿರಬಹುದು. ಆದರೆ, ಇದರಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಯಾವುದೇ ಅಭಿವೃದ್ಧಿ ಯೋಜನೆಗಳು ಯಾರಪ್ಪನ ಮನೆಯಿಂದ ತಂದು ಮಾಡುವುದಿಲ್ಲ. ರಾಜ್ಯದ ಜನರು ಕಟ್ಟಿದ ತೆರಿಗೆ ಹಣವನ್ನು ಇದು ಒಳಗೊಂಡಿರುತ್ತದೆ. ನಾವು ಮಾಡಿದ್ದು ಎಂಬ ಅಹಂಕಾರದಿಂದ ಈ ರೀತಿ ವರ್ತಿಸಿದ್ದಾರೆ. ಇದು ಕೀಳುಮಟ್ಟದ ರಾಜಕಾರಣ ಎಂದು ಕಿಡಿಕಾರಿದರು.
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸರ್ಕಾರದ ಕೆಲವು ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಒಂದು ಸುತ್ತು ಶಾಸಕರನ್ನು ಭೇಟಿ ಮಾಡಿ ವಿಷಯ ಸಂಗ್ರಹಿಸಿದ್ದಾರೆ. ಮತ್ತೊಮ್ಮೆ ಸಚಿವರ ಜೊತೆ ಕೂಡ ಮಾತನಾಡುತ್ತಾರೆ. ನನ್ನನ್ನೂ ಮಾತನಾಡಿಸಿದ್ದು, ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆಂದು ಹೇಳಿದ್ದೇನೆ ಎಂದು ತಿಳಿಸಿದರು.
ಮಣ್ಣು ಮುಕ್ಕಿದ್ದಾರೆ: ಜೋಗ ಅಭಿವೃದ್ಧಿಗೆ ಹೆಚ್ಚಿನ ಹಣ ತಂದಿದ್ದು ನಾವು, ಸಂಸದ ಬಿ.ವೈ.ರಾಘವೇಂದ್ರ ಅವರಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೋಗ ಅಭಿವೃದ್ಧಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕನಸಾಗಿರಬಹುದು, ಅದನ್ನು ನನಸಾಗಿಸಿದ್ದು ನಾವು. ಬಿಜೆಪಿ ಅವಧಿಯಲ್ಲಿ 15 ಕೋಟಿ ರು. ಬಿಡುಗಡೆ ಆಗಿತ್ತು, ನಮ್ಮ ಅವಧಿಯಲ್ಲಿ 75 ಕೋಟಿ ರು. ಬಿಡುಗಡೆ ಆಗಿದೆ. ಒಟ್ಟು 140 ಕೋಟಿ ರು.ವೆಚ್ವದ ಕಾಮಗಾರಿ ನಡೆದಿದೆ ಎಂದರು.
ಮಿಸ್ಟರ್ ಬಸ್ ಸ್ಟ್ಯಾಂಡ್ ರಾಘುರವರೇ, ಕನಸು ಕಾಣೋದು ಮುಖ್ಯವಲ್ಲ. ನನಸು ಮಾಡುವಂತೆ ಕೆಲಸವಾಗಬೇಕು. ಕನ್ನಡಕ ಮೊದಲು 10 ಕೋಟಿ ಬಿಡುಗಡೆ ಮಾಡಿದ್ದು, ಆನಂತರ ನೀವು 5 ಕೋಟಿ ಬಿಡುಗಡೆ ಮಾಡಿದ್ದೀರಿ. ಉಳಿದ ಹಣವೆಲ್ಲಾ ನನಸು ಮಾಡಿದ್ದು ಗೋಪಾಲಕೃಷ್ಣ ಬೇಳೂರು. ಅಲ್ಲಿ ಕಮಲದ ಹೂವು ಮಾಡೋಕೆ ಹೊರಟಿದ್ದಿರಲ್ಲ, ಅದನ್ನ ಕಿತ್ತು ಬಿಸಾಕಿ, ಹೊಸ ಕೆಲಸ 160 ಕೋಟಿದು ಆಗಿದೆ. ಜೋಗ ಅಭಿವೃದ್ಧಿಗೆ 90 ಕೋಟಿ ನಾನೇ ಕೊಡಿಸಿದ್ದು ಎಂದು ಕುಟುಕಿದರು.
