ನೂರಕ್ಕೆ ನೂರು ಸಿದ್ದರಾಮಯ್ಯ ಹೆಸರನ್ನು ಕೆ.ಆರ್.ಎಸ್.ರಸ್ತೆಗೆ ಇಡ್ತಿವಿ: ಶಾಸಕ ಕೆ.ಹರೀಶ್ ಗೌಡ
ಸಿದ್ದರಾಮಯ್ಯ ಆರೋಗ್ಯ ಮಾರ್ಗ ಅಂತಾ ಹೆಸರು ಪ್ರಸ್ತಾಪಿಸಿದ್ದೆ ನಾನು, ನೂರಕ್ಕೆ ನೂರು ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಕೆ.ಆರ್.ಎಸ್. ರಸ್ತೆಗೆ ಇಡುತ್ತೇವೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಮೈಸೂರು (ಡಿ.27): ಸಿದ್ದರಾಮಯ್ಯ ಆರೋಗ್ಯ ಮಾರ್ಗ ಅಂತಾ ಹೆಸರು ಪ್ರಸ್ತಾಪಿಸಿದ್ದೆ ನಾನು, ನೂರಕ್ಕೆ ನೂರು ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಕೆ.ಆರ್.ಎಸ್. ರಸ್ತೆಗೆ ಇಡುತ್ತೇವೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಹೇಳಿದರು.ನಗರದ ಕೆ.ಆರ್.ಎಸ್. ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಇಡುವ ಜಟಾಪಟಿ ವಿಚಾರವಾಗಿ ಅವರು ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಆರೋಗ್ಯ ಮಾರ್ಗದ ವಿಚಾರವಾಗಿ ಹೊಟ್ಟೆಕಿಚ್ಚಿನಿಂದ ಕೆಲವರು ವಿರೋಧ ಮಾಡುತ್ತಿದ್ದಾರೆ. ಮಹಾರಾಜರ ನಂತರ ಮೈಸೂರಿಗೆ ಅತಿ ಹೆಚ್ಚು ಕೊಡುಗೆ ಕೊಟ್ಟವರು ಸಿದ್ದರಾಮಯ್ಯ. ಶಾಲಾ, ಕಾಲೇಜುಗಳ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ ವಿಚಾರದಲ್ಲಿ ಸಿದ್ದರಾಮಯ್ಯ ಕೊಡುಗೆ ಬಹಳ ದೊಡ್ಡದು ಎಂದರು.
ಪ್ರತಾಪ್ ಸಿಂಹ ಹೇಳಿದ್ದು ಖುಷಿಯಾಯ್ತು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಚೆನ್ನಾಗಿ ಸಿದ್ದರಾಮಯ್ಯ ಅವರ ಸಾಧನೆ ವಿವರಿಸಿದ್ದಾರೆ. ಮನಸ್ಸು ಶುದ್ದಿ ಇಲ್ಲದವರು ಮಾತ್ರ ಸಿದ್ದರಾಮಯ್ಯ ಹೆಸರು ವಿರೋಧಿಸುತ್ತಾರೆ.ಮಹಾತ್ಮ ಗಾಂಧಿ ಮೇಲೂ ಆರೋಪ ಮಾಡುತ್ತಾರೆ. ನಾಥೂರಾಮ್ ಗೂಡ್ಸೆ ಗಾಂಧಿ ಹತ್ಯೆ ಮಾಡಿದ್ದು ತಪ್ಪಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಇದು ಬಿಜೆಪಿ ಲಕ್ಷಣ ಎಂದು ಅವರು ಟೀಕಿಸಿದರು. ಸಿದ್ದರಾಮಯ್ಯ ಮೇಲೆ ಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ, ಕಾನೂನಾತ್ಮಕವಾಗಿಯೆ ಹೆಸರು ಇಡ್ತಿವಿ ಎಂದು ಅವರು ಸ್ಪಷ್ಟಪಡಿಸಿದರು.
ಕೇವಲ ಕಾಂಗ್ರೆಸ್ ಅಲ್ಲ, ಎಲ್ಲರ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ದರ್ಬಾರಿನಲ್ಲಿ ಕೈಗೊಂಡ ನಿರ್ಣಯ: ನಗರದ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರಿಡಲು ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ದರ್ಬಾರಿನಲ್ಲಿ ಕೈಗೊಂಡ ನಿರ್ಣಯ ನಿಜಕ್ಕೂ ಖಂಡನೀಯ ಎಂದು ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ.ಕಾ. ಪ್ರೇಮ್ ಕುಮಾರ್ ಹೇಳಿದ್ದಾರೆ. ಮೈಸೂರಿನ ಇತಿಹಾಸ ಅರಿಯದ ಭಟ್ಟಂಗಿ ಅಧಿಕಾರಿಗಳು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಕರೆಯಲು ಸಾಧ್ಯವಾಗದ ರೀತಿಯಲ್ಲಿರುವ ಅವೈಜ್ಞಾನಿಕ ಹೆಸರನ್ನು ನಾಮಕರಣ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.
ನಗರದ ಕೆ.ಆರ್.ಎಸ್. ರಸ್ತೆಗೆ ಹೋಗುವ ಮಾರ್ಗಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದು ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿದ್ದರು. ಕಾರಣ ಇಷ್ಟೆ ಚೆಲುವಜಾಮ್ಮಣಿ ಮತ್ತು ಕೃಷ್ಣರಾಜಮ್ಮಣ್ಣಿ ಅವರು ಈಗಿನ ಸಿಎಫ್ಟಿಆರ್ ಆವರಣದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದರು. ಇದಕ್ಕೆ ಮತ್ತೊಂದು ಹೆಸರು ಕೆಬ್ಬೆಕಟ್ಟೆ ಅರಮನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿ ಪ್ರಿನ್ಸೆಸ್ ಕೃಷ್ಣ ರಾಜಮ್ಮಣ್ಣಿ ಅವರು ಅಂದು ಕ್ಷಯರೋಗಕ್ಕೆ ತುತ್ತಾದರು.
ಅಂದಿನ ದಿನಗಳಲ್ಲಿ ಕ್ಷಯ ರೋಗ ಎಂಬುವುದು ಒಂದು ಮಾರಣಾಂತಿಕ ಸಾಂಕ್ರಾಮಿಕ ರೋಗವೆಂದು ಜನರ ಮನಸ್ಸಿನಲ್ಲಿತ್ತು. ಆದ್ದರಿಂದ ನಾಲ್ವಡಿರವರು ಸಾರ್ವಜನಿಕರ ಸಹಾಯದಿಂದ ಇಂದಿನ ಸ್ಯಾನಿಟೋರಿಯಂ ಆಸ್ಪತ್ರೆಯನ್ನು ಸುಮಾರು ನೂರು ಎಕರೆ ಮಧ್ಯದಲ್ಲಿ ಊರಾಚೆ ನಿರ್ಮಿಸಿದ್ದರು. ಈ ಆಸ್ಪತ್ರೆಗೆ ತಮ್ಮ ಅತ್ಯಂತ ಪ್ರೀತಿ ಪಾತ್ರರಾಗಿದ್ದ ಸಹೋದರಿ ಕೃಷ್ಣರಾಜಮ್ಮಣ್ಣಿಯವರ ಹೆಸರಿನಲ್ಲಿ ಪಿ.ಕೆ.ಸ್ಯಾನಿಟೋರಿಯಂ (ಪ್ರಿನ್ಸೆಸ್ ಕೃಷ್ಣರಾಜಮ್ಮಣ್ಣಿ ಸಾನಿಟೋರಿಯಂ) ಎಂದು ನಾಮಕರಣ ಮಾಡಿದರು.
ಈ ಆಸ್ಪತ್ರೆ ಕಟ್ಟಲು ಅಂದಿನ ಮೈಸೂರಿನ ದೊಡ್ಡ ದೊಡ್ಡ ಸಾಹುಕಾರರು ಅಪಾರ ಹಣವನ್ನು ದಾನ ಮಾಡಿದ್ದರು. ಈ ರಸ್ತೆಗೆ ದಾಸಪ್ಪ ವೃತ್ತದಿಂದ ಕುಂಬಾರಕೊಪ್ಪಲು ಗೇಟ್ ತನಕ ಪ್ರಿನ್ಸೆಸ್ ರಸ್ತೆ ಎಂದು ಸ್ವತಃ ನಾಲ್ವಡಿಯವರೇ ನಾಮಕರಣ ಮಾಡಿದರು ಎಂದಿದ್ದಾರೆ. ಮೊದಲ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಈಗಿನ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಕನಕದಾಸರ ಪ್ರತಿಮೆ ಪ್ರತಿಷ್ಠಾಪಿಸಲು ನಿವೃತ್ತ ಜಿಲ್ಲಾಧಿಕಾರಿಯೊಬ್ಬರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದಾಗ ಅದನ್ನು ನಯವಾಗಿ ತಿರಸ್ಕರಿಸಿ ಅಲ್ಲಿ ರಾಮಕೃಷ್ಣರ ಪ್ರತಿಮೆ ಸ್ಥಾಪಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.
ಕಾಂಗ್ರೆಸ್ ಗಾಂಧಿಗಿರಿಗೆ 100: ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ
ಹೊಸ ಬಡಾವಣೆಗೆ ಹೆಸರಿಡಲು ಆಕ್ಷೇಪಣೆ ಇಲ್ಲ: ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಗಾದಿಯನ್ನು ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಇಡಲು ಮೈಸೂರಿನ ಬಹುತೇಕ ನಾಗರೀಕರಿಗೆ ಯಾವುದೇ ಆಕ್ಷೇಪಣೆ ಇಲ್ಲ. ಮುಖ್ಯಮಂತ್ರಿಗಳು ಮೈಸೂರಿನ ಅಭಿವೃದ್ಧಿಗೆ ಅದರಲ್ಲೂ ಪ್ರಿನ್ಸಸ್ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆ, ಟ್ರಾಮಾ ಸೆಂಟರ್ ನಂತಹ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ತಮ್ಮ ಅಧಿಕಾರ ಅವಧಿಯಲ್ಲಿ ನಿರ್ಮಿಸಿದ್ದಾರೆ. ಆದ್ದರಿಂದ ಮೈಸೂರಿನ ಜನ ಅವರಿಗೆ ಋಣಿಗಳಾಗಿದ್ದಾರೆ. ಇಂತಹ ಔದಾರ್ಯವಿರುವ ಸಿದ್ದರಾಮಯ್ಯ ಅವರ ಕಾರ್ಯ ಸಾಧನೆಗೆ ಮೈಸೂರಿನ ಯಾವುದೇ ಹೊಸ ಬಡಾವಣೆಗಳಿಗೆ ಇವರ ಹೆಸರನ್ನು ಸೂಚಿಸುವುದು ಅಥವಾ ನಾಮಕರಣ ಮಾಡುವುದು ಸೂಕ್ತವೆಂದು ನಮ್ಮ ಮೈಸೂರು ರಕ್ಷಣಾ ವೇದಿಕೆಯ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಈ ಭರದಲ್ಲಿ ಇತಿಹಾಸವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡುವುದು ಸರ್ವಧ ಅಪರಾಧ ಎಂದು ಹೇಳಿದ್ದಾರೆ.