Asianet Suvarna News Asianet Suvarna News

ಸಿಎಂಗೊಂದು ಮಹತ್ವದ ಪತ್ರ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ..!

ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೆ  ರಾಜ್ಯ ಸರ್ಕಾರದ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

siddaramaiah Writes TO CM Yediyurappa about Karnataka Govt Hiked electricity-tariff rbj
Author
Bengaluru, First Published Nov 6, 2020, 3:26 PM IST

ಬೆಂಗಳೂರು (ನ.06): ರಾಜ್ಯದಲ್ಲಿ ವಿದ್ಯುತ್ ಹೆಚ್ಚಿಸಿದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದು, ಈ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಆರ್‌.ಆರ್.ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಿ ಅದೇಶ ಹೊರಡಿಸಿದೆ. ಇದರಿಂದ ಸಿದ್ದರಾಮಯ್ಯ ಅವರು ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಅದು ಈ ಕೆಳಗಿನಂತಿದೆ. 

 ಕೊರೋನಾದಿಂದ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡಿದೆ. ಜನ ಕೊಳ್ಳುವ ಶಕ್ತಿಯನ್ನ ಕಳೆದುಕೊಂಡಿದ್ದಾರೆ ಈಗ ರಾಜ್ಯದ ಜನರ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಇಂತಹ ಸಂದರ್ಭದಲ್ಲಿ ದರ ಏರಿಕೆ ಮಾಡಬಾರದು. ಕೊರೋನಾ ಮಾರಕ ದಾಳಿಗೆ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರ, ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ ಈ ಸಮಯದಲ್ಲಿ ಸರ್ಕಾರ ದರ ಏರಿಕೆ ಮಾಡಿದು ತಪ್ಪು" ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ವಾಣಿಜ್ಯ ಚಟುವಟಿಕೆಗಳ ವಿದ್ಯುತ್​ ದರವನ್ನು ಶೇ.25 ರಷ್ಟು ಹಾಗೂ ಗೃಹ ಬಳಕೆಯ ದರವನ್ನು ಶೇ.8.05 ರಷ್ಟರ ಏರಿಕೆ ಮಾಡಿದೆ.

ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ವಿದ್ಯುತ್​ ದರ ಹೆಚ್ಚಳ, ಎಷ್ಟು...?

ಈ ದರ ಏರಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು; ಅಗತ್ಯವಿದ್ದರೆ ವಿದ್ಯುತ್ ದರ ಇಳಿಕೆ ಮಾಡವ ಕುರಿತು ಸರ್ಕಾರಕ್ಕೆ ಸಲಹೆ ನೀಡಲು ಸಿದ್ದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದಿರುವ ಪತ್ರ ಈ ಕೆಳಕಂಡಂತೆ ಇದೆ.

"ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಮಾಡಿದ್ದ ಶಿಫಾರಸ್ಸುಗಳನ್ನು ಅಂಗೀಕರಿಸಿ ರಾಜ್ಯ ಸರ್ಕಾರವು ದಿನಾಂಕ 01.11.2020 ರಿಂದ ವಿದ್ಯುತ್ ದರಗಳನ್ನು ಏರಿಕೆ ಮಾಡಿದೆ. ಕೊರೋನಾ ಕಾರಣದಿಂದಾಗಿ ರಾಜ್ಯದಲ್ಲಿ ಉತ್ಪಾದನಾ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಜನ ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಜನರ ಬಳಿ ಹಣ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಧನದ ದರ ಮತ್ತು ವಿದ್ಯುತ್ ದರಗಳ ಏರಿಕೆಯಿಂದ ನೇರವಾಗಿ ಜನರ ಜೇಬಿಗೆ ಹೊರೆಯಾಗುವ ಪ್ರಮುಖ ಸಂಗತಿಗಳು. ಹಾಗೇ ನೋಡಿದರೆ ಈ ವರ್ಷ ದರಗಳನ್ನು ಕಡಿಮೆ ಮಾಡಬೇಕಾದ ಅಗತ್ಯವಿದೆ. ಪೆಟ್ರೋಲ್ ಡಿಸೇಲ್ ಮತ್ತು ವಿದ್ಯುಚ್ಛಕ್ತಿ ದರ ಕಡಿಮೆ ಮಾಡಿದರೆ ಮಾರುಕಟ್ಟೆಯಲ್ಲಿ ಆರ್ಥಿಕ ಚೈತನ್ಯ ಬರುತ್ತದೆ. ಆದರೆ ರಾಜ್ಯ ಸರ್ಕಾರ ವಿವೇಚನಾರಹಿತವಾಗಿ ವಿದ್ಯುಚ್ಛಕ್ತಿ ದರಗಳನ್ನು ಏರಿಸಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಶೇಕಡ 25 ರಷ್ಟು ಏರಿಕೆ ಮಾಡಲಾಗಿದೆ. ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯೂ ಸೇರಿ ಸರಾಸರಿ ಶೇ.17.15 ಏರಿಕೆ ಆಗಿದೆ. ಸಾರ್ವಜನಿಕ ಕುಡಿಯುವ ನೀರಿಗೆ ಸರಬರಾಜು ಮಾಡುವ ವಿದ್ಯುತ್ ಗರಿಷ್ಠ ರೂ. ಶೇ 5.20 ರಿಂದ ಶೇ 5.45ಕ್ಕೆ ಏರಿಕೆ ಮಾಡಲಾಗಿದೆ. ಗೃಹ ಬಳಕೆಗೆ ಗರಿಷ್ಠ ರೂ. ಶೇ 7.80 ರಿಂದ ಶೇ8.05ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ವಾಣಿಜ್ಯ ಬಳಕೆಗೆ ರೂ.ಶೇ 09.00 ರಿಂದ ಶೇ 09.25 ಗೆ ಏರಿಕೆ ಆಗಿದೆ. ಕೈಗಾರಿಕೆಗಳಲ್ಲಿ ರೂ.6.90 ರಿಂದ 7.20 ವರೆಗೆ ಏರಿಕೆ ಮಾಡಲಾಗಿದೆ. ಜನ ಕಷ್ಟಕಾಲದಲ್ಲಿರುವಾಗ ಇರುವಾಗ ಪೆಟ್ರೊಲ್, ಡಿಸೇಲ್ ಬೆಲೆ ವಿದ್ಯುತ್ ದರ ಏರಿಕೆ ಮಾಡುವುದು ವಿವೇಚನಾರಹಿತ ಆಡಳಿತ ಮಾದರಿಗೆ ಉದಾಹರಣೆಯಾಗುತ್ತದೆ.

ರಾಜ್ಯದಲ್ಲಿ ಸುಮಾರು 150 ರಿಂದ 200 ಮಿಲಿಯನ್ ಯುನಿಟ್‍ಗಳಷ್ಟು ವಿದ್ಯುಚ್ಚಕ್ತಿಗೆ ಬೇಡಿಕೆ ಇದೆ. ಇದರಲ್ಲಿ ಶೇ.40 ರಿಂದ 50 ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರ ಮತ್ತು ಪವನ ವಿದ್ಯುತ್ ಮೂಲಗಳಿಂದ ಉತ್ಪಾದನೆಯಾಗುತ್ತಿದೆ. ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳಿಗಿಂತ ಮೂರು ಪಟ್ಟು ಹೆಚ್ಚಿನ ವಿದ್ಯುತ್ತನ್ನು ನವೀಕರಿಸಿಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುತ್ತಿದೆ. ದೇಶದ ಅನೇಕ ರಾಜ್ಯಗಳು ಇನ್ನು ಕಲ್ಲಿದ್ದಲು ಆಧಾರಿಸಿದ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ. ಕೇಂದ್ರ ಸರ್ಕಾರದ ಎನ್.ಟಿ.ಪಿ.ಸಿ. ಘಟಕಗಳು ಕೂಡ ಕಲ್ಲಿದ್ದಲು ಆಧರಿಸಿದ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ.

ಕಾಂಗ್ರೆಸ್ ಸರ್ಕಾರವಿದ್ದಾಗ ಅಳವಡಿಸಿಕೊಂಡ ವಿದ್ಯುತ್ ನೀತಿಗಳಿಂದಾಗಿ ಕರ್ನಾಟಕ ರಾಜ್ಯವು ವಿದುಚ್ಛಕ್ತಿ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆಯನ್ನು ಸಾಧಿಸಿದೆ. ಅದಕ್ಕೂ ಮೊದಲು ಅನ್ಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಬಳಿ ವಿದ್ಯುತ್ ಗಾಗಿ ಮೊರೆ ಇಡಬೇಕಾದ ಪರಿಸ್ಥಿತಿ ಇತ್ತು.ರಾಜ್ಯದಲ್ಲಿ ಬೇಡಿಕೆ ಇರುವಷ್ಟು ವಿದ್ಯುತ್ತನ್ನು ಬಳಸಿಕೊಂಡು ಹೆಚ್ಚುವರಿ ವಿದ್ಯುತ್ತನ್ನು ಬೇರೆ ರಾಜ್ಯಗಳಿಗೆ ಮಾರಬಹುದಾದಷ್ಟು ಉತ್ಪಾದನೆ ಮಾಡುತ್ತಿದ್ದೇವೆ. ಕಳೆದ ಏಳೆಂಟು ತಿಂಗಳಿಂದೀಚೆಗೆ ರಾಯಚೂರಿನ ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕಗಳನ್ನು (ಆರ್.ಟಿ.ಪಿ.ಎಸ್) ರಾಜ್ಯ ಸರ್ಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ದುರಂತವೆಂದರೆ ಇದೇ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಪ್ರತಿ ಯುನಿಟ್‍ಗೆ 50 ಪೈಸೆಗಳನ್ನು ಹೆಚ್ಚಿಗೆ ನೀಡಿ ವಿದ್ಯುತ್ ಖರೀದಿ ಮಾಡುತ್ತಿದೆ.

ರಾಜ್ಯದಲ್ಲೂ ಕೂಡಾ ಪ್ರಮುಖ ಖಾಸಗಿ ವ್ಯಕ್ತಿಗಳು ವಿದ್ಯುತ್ತನ್ನು ಉತ್ಪಾಧಿಸುವ ಪ್ರಮಾಣ ಹೆಚ್ಚಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಜನರ ಹಣ ಸುಮಾರು 5 ರಿಂದ 6 ಸಾವಿರ ಕೋಟಿಗಳಷ್ಟು ಹಣವನ್ನು ಬೇಕಾಬಿಟ್ಟಿಯಾಗಿ ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ರಾಜ್ಯ ಸರ್ಕಾರವು ಬೆಸ್ಕಾಂಗೆ 3,361 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ರಾಜ್ಯದಉಳಿದ ಎಸ್ಕಾಂಗಳ ಕಥೆಯು ಇದೇ ರೀತಿ ಇದೆ.

ಈ ವರ್ಷ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಮತ್ತು ಯೆಥೇಚ್ಚವಾಗಿ ಸೌರ ಮತ್ತು ಪವನ ವಿದ್ಯುತ್ ಲಭಿಸುತ್ತಿದೆ. ಈ ಮೂಲಗಳಿಂದ ವಿದ್ಯುತ್ ಅನ್ನು ಪಡೆದು ಜನರಿಗೆ ಸರಬರಾಜು ಮಾಡಬಹುದಾಗಿರುತ್ತದೆ. ಕೇಂದ್ರ ಸರ್ಕಾರಕ್ಕೆ ಅನವಶ್ಯಕವಾಗಿ ನೀಡುತ್ತಿರುವ ಹಣವನ್ನು ತಪ್ಪಿಸಿದರೆ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 5 ರಿಂದ 6 ಸಾವಿರ ಕೋಟಿ ರೂ. ಗಳನ್ನು ಉಳಿಸಿ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದಾಗಿದೆ. ಅಗತ್ಯವಿದ್ದರೆ ರಾಯಚೂರಿನ ಆರ್.ಟಿ.ಪಿ.ಎಸ್. ಸ್ಥಾವರಕ್ಕೆ ಚಾಲನೆ ನೀಡುವುದರ ಮೂಲಕ ನಾವೇ ವಿದ್ಯುತ್ ಉತ್ಪಾದಿಸಿ ಅಗತ್ಯವಿರುವ ರಾಜ್ಯಗಳಿಗೆ ಸರಬರಾಜು ಮಾಡಬಹುದು. ಹಾಗೂ ಆ ಭಾಗದ ಯುವಕರಿಗೆ ಉದ್ಯೋಗ ನೀಡಬಹುದು.

ಜಿ.ಎಸ್.ಟಿ., ನೋಟ್ ಬ್ಯಾನ್ ಮತ್ತು ಕೊರೋನಾ ಸಂಕಷ್ಟಗಳಿಂದ ನಲುಗಿರುವ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಮತ್ತು ಜನರ ಮೇಲೆ ವಿದ್ಯುತ್ ಏರಿಕೆಯ ಬರೆಯನ್ನು ಹಾಕದೇ ಕಷ್ಟಕಾಲದಲ್ಲಿ ತೆರಿಗೆಯ ಹೊರೆಯನ್ನು ಇಳಿಸಿ, ಆರ್ಥಿಕತೆಗೆ ಚೈತನ್ಯ ನೀಡಬೇಕೆಂದು ಆಗ್ರಹಿಸುತ್ತೇನೆ. ಈ ಕುರಿತಂತೆ ಅಗತ್ಯ ಬಿದ್ದರೆ ವಿದ್ಯುಚ್ಛಕ್ತಿ ದರಗಳನ್ನು ಹೇಗೆ ಕಡಿಮೆ ಮಾಡಬಹುದು ಹಾಗೂ ಸಂಸ್ಥೆಗಳನ್ನು ಹೇಗೆ ಲಾಭದಾಯಕವಾಗಿ ನಡೆಸಬಹುದೆಂದು ಸಲಹೆಗಳನ್ನು ನೀಡಲು ಸಿದ್ದನಿದ್ದೇನೆ" ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios