ವರುಣಾದಲ್ಲಿ ಎದುರಾಳಿ ಯಾರೇ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ: ಶಾಸಕ ಡಾ.ಯತೀಂದ್ರ
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳು ಯಾರೇ ನಿಂತರೂ ಸಿದ್ದರಾಮಯ್ಯ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು (ಏ.13): ವರುಣ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳು ಯಾರೇ ನಿಂತರೂ ಸಿದ್ದರಾಮಯ್ಯ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ಪರವಾಗಿ ಮೆಲ್ಲಹಳ್ಳಿ, ಹಳ್ಳಿಕೆರೆಹುಂಡಿ, ಶಿವಪುರ, ಲಕ್ಷ್ಮಿಪುರ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.
ಹಿರಿಯರಾದ ಸೋಮಣ್ಣ ಅವರಿಗೆ ವರುಣ ಕ್ಷೇತ್ರದಲ್ಲಿ ನಿಲ್ಲಲು ಇಷ್ಟವಿಲ್ಲದಿದ್ದರೂ ಸಹ ಬಲವಂತವಾಗಿ ಬಿಜೆಪಿಯವರು ನಿಲ್ಲಿಸಿದ್ದಾರೆ. ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ. ಸಿದ್ದರಾಮಯ್ಯವರು ವರುಣ ಕ್ಷೇತ್ರಕ್ಕೆ 2 ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನ ನೀಡಿ ರಸ್ತೆಗಳು, ಚರಂಡಿಗಳು, ಕುಡಿಯುವ ನೀರು, ಮನೆಗಳು, ಸಮುದಾಯ ಭವನಗಳು, ಕೆರೆ ತುಂಬಿಸುವ ಯೋಜನೆ, ನಿಗಮ ಮಂಡಳಿಗಳಿಂದ ವಾಹನಗಳು, ಗಂಗಾ ಕಲ್ಯಾಣ ಯೋಜನೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮತದಾರರ ಮೇಲೆ ನಮಗೆ ವಿಶ್ವಾಸವಿದೆ.
ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್
ಸಿದ್ದರಾಮಯ್ಯ ಅವರು ಹೆಚ್ಚುಮತಗಳ ಅಂತರದಿಂದ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಕೆಂಪೀರಯ್ಯ, ತಾಪಂ ಮಾಜಿ ಸದಸ್ಯರಾದ ಶಿವರತ್ನ ನಾಗರಾಜ್, ಎಂ.ಟಿ. ರವಿಕುಮಾರ್, ಗುರುಸ್ವಾಮಿ, ಪುಟ್ಟಣ್ಣ, ಸಿದ್ದಯ್ಯ, ನಿವೃತ್ತ ಪ್ರಾಂಶುಪಾಲ ಸಿದ್ದಯ್ಯ, ಮುಖಂಡರಾದ ರವಿ, ಗವಿಸಿದ್ದು, ರವಿ, ಮಹಾದೇವ, ಗಂಗನ ತಿಮ್ಮಣ್ಣ, ಸಾಕಣ್ಣ, ಮಂಚಯ್ಯ, ಸೋಮು, ಮಹಾದೇವ, ಟಿ. ಹರೀಶ, ಮಣಿ, ಪಟ್ಟೆಹುಂಡಿ, ಕಲ್ಪನ, ಪುಷ್ಪ ಬೋರೇಗೌಡ, ಚೆನ್ನಾಜಮ್ಮ ಇದ್ದರು.
ಇಂದು ಮೈಸೂರಿಗೆ ಸಿದ್ದರಾಮಯ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.13 ರಂದು ಮೈಸೂರಿಗೆ ಆಗಮಿಸುವರು. ಇಲವಾಲ- ಜಯಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆ ಸೇರಿದಂತೆ ದಿನವಿಡಿ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳುವರು. ತಾವು ಸ್ಪರ್ಧಿಸಿರುವ ವರುಣ ಕ್ಷೇತ್ರದ ಮುಖಂಡರೊಂದಿಗೂ ಸಮಾಲೋಚಿಸುವರು. ವರುಣ ಕಣಕ್ಕೆ ರಂಗು: ವಸತಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ವರುಣ ಕ್ಷೇತ್ರದ ಕಣ ರಂಗೇರಿದೆ. ಅಲ್ಲಿ ಹಾಲಿ ಶಾಸಕ ಡಾ.ಎಸ್. ಯತೀಂದ್ರ ಅವರು ತಂದೆ ಸಿದ್ದರಾಮಯ್ಯ ಅವರಿಗೆ ಸೀಟು ಬಿಟ್ಟುಕೊಟ್ಟಿದ್ದಾರೆ.
ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ
ಬಿಎಸ್‌ವೈ, ವಿಜಯೇಂದ್ರ ಬರ್ತಾರ?: ವೀರಶೈವ- ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ವರುಣದಲ್ಲಿ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯ‚ಡಿಯೂರಪ್ಪ, ಅವರ ಪುತ್ರ ಬಿ.ವೈ. ವಿಜಯೇಂದ್ರ ಪ್ರಚಾರಕ್ಕೆ ಬರ್ತಾರ? ಎಂಬ ಕುತೂಹಲ ಗರಿಗೆದರಿದೆ. ಈ ಇಬ್ಬರು ಪ್ರಚಾರಕ್ಕೆ ಬಂದರೇ ಒಂದು ರೀತಿ, ಬಾರದಿದ್ದಲ್ಲಿ ಮತ್ತೊಂದು ರೀತಿಯ ಪರಿಣಾಮ ಆಗಲಿದೆ ಎನ್ನುತ್ತಾರೆ ಕಾರ್ಯಕರ್ತರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.