ಕಾಂಗ್ರೆಸ್‌ನಲ್ಲಿ ಎಸ್‌ಎಂಕೆಗೆ ಆದ್ದದ್ದೆ ಸಿದ್ದುಗೂ ಆಗುತ್ತೆ: ಡಾ. ಸುಧಾಕರ್‌| ದುಡಿಸಿಕೊಂಡು ನಂತರ ನ್ಯಾಪ್‌ಕಿನ್‌ ರೀತಿ ಬಿಸಾಡುತ್ತಾರೆ: ಲೇವಡಿ

ಚಿಕ್ಕಬಳ್ಳಾಪುರ[ನ.23]: ಅಧಿಕಾರದಲ್ಲಿದ್ದಾಗ ಇಂದ್ರ ಚಂದ್ರ ಎಂದು ಮೇಲೆತ್ತುವುದು, ಅಧಿಕಾರ ಕಳೆದುಕೊಂಡಾಗ ಕಡೆಗಣಿಸುವುದು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿಯಾಗಿದೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಆರೋಪಿಸಿದರು.

ಪ್ರಸ್ತುತ ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರ ತಂದುಕೊಟ್ಟರೆ ಮೇಲೆ ಹತ್ತಿಸುವುದು, ಅಧಿಕಾರ ಕಳೆದುಕೊಂಡರೆ ಕಡೆಗಣಿಸುವುದು ಕಾಂಗ್ರೆಸ್‌ ಸಂಸ್ಕೃತಿಯಾಗಿದೆ. ತಮ್ಮ ಜೀವನವನ್ನೇ ಕಾಂಗ್ರೆಸ್‌ಗಾಗಿ ಮೀಸಲಿಟ್ಟು, ಶ್ರಮಿಸಿದ ಎಸ್‌.ಎಂ.ಕೃಷ್ಣ ಅವರ ಸ್ಥಿತಿಯೂ ಅದೇ ಆಗಿದೆ. ಮುಂದೆ ಸಿದ್ದರಾಮಯ್ಯ ಅವರಿಗೂ ಇದೇ ಪರಿಸ್ಥಿತಿ ಬರಲಿದೆ ಎಂದರು.

ಮಾಜಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಎಸ್‌.ಎಂ.ಕೃಷ್ಣ ಅವರನ್ನು ಕಾಂಗ್ರೆಸ್‌ ಕಡೆಗಣಿಸಿದ ಪರಿಣಾಮವೇ ಅವರು ಬಿಜೆಪಿ ಸೇರುವಂತಾಯಿತು. ದುಡಿಸಿಕೊಂಡ ನಂತರ ನ್ಯಾಪ್‌ಕಿನ್‌ ರೀತಿಯಲ್ಲಿ ನಾಯಕರನ್ನು ಬಿಸಾಡುವುದು ಕಾಂಗ್ರೆಸ್‌ಗೆ ಹೊಸದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಮೈತ್ರಿ ಸರ್ಕಾರ ತಡೆ:

ರಾಜೀನಾಮೆ ನೀಡಿದ ನಂತರ ಹಲವು ಒತ್ತಡಗಳಿಂದ ಬಳಲಿದ್ದೆ. ಆದರೆ, ರಾಜೀನಾಮೆ ನೀಡಿದ ನಂತರ ಕ್ಷೇತ್ರಕ್ಕೆ ಎಲ್ಲವನ್ನೂ ತಂದುಕೊಟ್ಟಿದ್ದೇನೆ. ಮೈತ್ರಿ ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಅಭಿವೃದ್ಧಿ ಆಗದಂತೆ ತಡೆದರು. ಹಲವು ಭರವಸೆ ಜನರಿಗೆ ನೀಡಿದ್ದೆ. ಆದರೆ, ಸರ್ಕಾರ ಸಹಕಾರ ನೀಡಲಿಲ್ಲ. ಮಲತಾಯಿ ಧೋರಣೆ ತೋರಿತು. ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ಸಹಕಾರ ನೀಡಲಿಲ್ಲ. ಮೈತ್ರಿ ಸರ್ಕಾರದಲ್ಲಿ ಭಾಗವಾಗಿದ್ದರೂ ಪ್ರಯೋಜನವಾಗಲಿಲ್ಲ. ಜನರ ಅಭಿವೃದ್ಧಿ ಮುಖ್ಯವಾಗಿರುವುದರಿಂದ ಪಕ್ಷಕ್ಕೆ ಗುಲಾಮನಾಗಿರಲು ಸಾಧ್ಯವಿಲ್ಲ. ಜನರು ಮುಖ್ಯ, ಜನರ ಅಭಿವೃದ್ಧಿ ಮುಖ್ಯ. ರಾಜಕೀಯ ಲಾಭ ಮುಖ್ಯವಲ್ಲ ಎಂದು ಶಾಸಕ ಸ್ಥಾನ ತ್ಯಜಿಸಿದೆ. ರಾಜೀನಾಮೆ ನೀಡಿದ ಮೇಲೆ ನಾನು ಶಾಸಕನಾಗಿದ್ದಾಗ ಮಾಡಲಾಗದ ಕೆಲಸ ಮಾಡಿದ್ದೇನೆ. ನಾನು ನಿಮಗೆ ನೀಡಿದ್ದ ಭರವಸೆಗಳನ್ನು ಯಡಿಯೂರಪ್ಪ ಈಡೇರಿಸಿದರು ಎಂದು ಹೇಳಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.