Asianet Suvarna News Asianet Suvarna News

ಸಿದ್ದು ಸ್ಥಾನ ಬಿಡಲ್ಲ, 10 ವರ್ಷ ಅವರೇ ಸಿಎಂ: ರಾಜಣ್ಣ

ಡಿ.ಕೆ. ಶಿವಕುಮಾರ್‌ ಹೇಳಿದ ಹಾಗೆ ನಾವು ಕೇಳಬೇಕು ಅಂತೇನಿಲ್ಲ. ನಮಗೂ ಸ್ವಂತ ಬುದ್ಧಿ ಇದೆ. ನಾನು ಕಾನೂನು ಪದವೀಧರ. ಪ್ರಚಾರಕ್ಕೆ ಹೇಳುತ್ತೇವೆ ಎಂದು ಹೇಳಿದರೆ ಅವರು ಹೇಳಿಕೊಳ್ಳಲಿ. ನಾವು ಹೇಳೋದು ಹೇಳಿದ್ದೇವೆ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ’ ಎಂದು ಹೇಳಿದ ರಾಜಣ್ಣ 

Siddaramaiah will be the Chief Minister for another ten years Says Minister KN Rajanna grg
Author
First Published Jun 28, 2024, 4:22 AM IST

ಬೆಂಗಳೂರು(ಜೂ.28): ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಮಾತೇ ಇಲ್ಲ. ಈ ಐದು ವರ್ಷ ಮಾತ್ರವಲ್ಲ ಇನ್ನೂ ಹತ್ತು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಹೇಳಿರುವ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟುಕೊಡುತ್ತಾರಾ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತೀಕ್ಷ್ಣವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಡಿಕೆಶಿಗೆ ಬಿಟ್ಟುಕೊಡಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿ ಆಗ್ರಹದ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಾಮೀಜಿಗೆ ಕೇಳಿ ನೋಡಿ. ನಾನೇ ಸ್ವಾಮೀಜಿ ಆಗುತ್ತೇನೆ. ನಾಳೆಯಿಂದ ನಾನು ಕಾವಿ ಬಟ್ಟೆ ಹಾಕಿಕೊಳ್ಳುತ್ತೇನೆ. ಅವರು ತಮ್ಮ ಸ್ಥಾನ ಬಿಟ್ಟುಕೊಡುತ್ತಾರಾ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲಿ ಡಿಸಿಎಂ ದಂಗಲ್ ; ಸಿದ್ದು ಬಣದವರ ಬಡಿದಾಟಕ್ಕೆ ಮೆತ್ತಗಾದ ಡಿಕೆಶಿ.. ಹೆಚ್ಚಾಗುತ್ತಾ ಡಿಸಿಎಂ ಸ್ಥಾನ?

‘ಅವರೂ (ಸ್ವಾಮೀಜಿ) ಬಿಟ್ಟು ಕೊಡಲ್ಲ. ಇವರೂ (ಸಿದ್ದರಾಮಯ್ಯ) ಸಹ ಬಿಟ್ಟುಕೊಡಲ್ಲ. ಸ್ವಾಮೀಜಿ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಸದುದ್ದೇಶದಿಂದ ಹೇಳಿದ್ದಾರೆಯೇ ಅಥವಾ ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ವಾಕ್‌ ಸ್ವಾತಂತ್ರ್ಯವಿದೆ. ಹೀಗಾಗಿ ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಡಿಕೆಶಿ ಹೇಳಿದಂತೆ ನಾವು ಕೇಳಬೇಕಿಲ್ಲ: ರಾಜಣ್ಣ

‘ರಾಜಣ್ಣ ಪ್ರಚಾರಕ್ಕಾಗಿ ಮಾತನಾಡುತ್ತಾರೆ. ಹೈಕಮಾಂಡ್‌ ಬಳಿ ಮಾತನಾಡಲಿ’ ಎಂದಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ ರಾಜಣ್ಣ, ‘ಡಿ.ಕೆ. ಶಿವಕುಮಾರ್‌ ಹೇಳಿದ ಹಾಗೆ ನಾವು ಕೇಳಬೇಕು ಅಂತೇನಿಲ್ಲ. ನಮಗೂ ಸ್ವಂತ ಬುದ್ಧಿ ಇದೆ. ನಾನು ಕಾನೂನು ಪದವೀಧರ. ಪ್ರಚಾರಕ್ಕೆ ಹೇಳುತ್ತೇವೆ ಎಂದು ಹೇಳಿದರೆ ಅವರು ಹೇಳಿಕೊಳ್ಳಲಿ. ನಾವು ಹೇಳೋದು ಹೇಳಿದ್ದೇವೆ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ’ ಎಂದು ಹೇಳಿದರು.

ಸಿಎಂ ಬಗ್ಗೆ ಬೇರೆಯವರು ಯಾಕೆ ಮಾತಾಡ್ತಾರೆ: ದಿನೇಶ್‌

ಸಿಎಂ ಹುದ್ದೆ ಬದಲು ವಿಷಯ ಪಕ್ಷದ ವಿಚಾರ. ಇವೆಲ್ಲ ಚರ್ಚೆ ಬೇಡ. ಬೇರೆಯವರು ಈ ಬಗ್ಗೆ ಯಾಕೆ ಮಾತಾಡಬೇಕು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಅವರು ಹೇಳಿದರು. ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಪರೋಕ್ಷವಾಗಿ ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಎಂ ಹುದ್ದೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ. ಸಿಎಂ ಇದ್ದಾರೆ. ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದನ್ನು ಅವರೇ ತೀರ್ಮಾನ ಮಾಡುತ್ತಾರೆ. ಸಮಾಜಕ್ಕೊಂದು ಡಿಸಿಎಂ ಹುದ್ದೆಗೆ ದೆಹಲಿಯಲ್ಲಿ ಲಾಬಿ ಎಂಬ ವಿಚಾರವಾಗಿ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆಲವರು ಅವರ ಅಭಿಪ್ರಾಯ ಹೇಳಿದ್ದಾರೆ. ಸಿಎಂ ಅವರು ಈ ಬಗ್ಗೆ ಮಾತಾಡುತ್ತೇನೆ ಎಂದು ಹೇಳಿದ್ದು, ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಗ್ಯಾರಂಟಿ ಕೈಬಿಡುವ ಪ್ರಶ್ನೆಯೇ ಇಲ್ಲ:

ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಹಿನ್ನಡೆ ಎಂದು ಕಾಂಗ್ರೆಸ್ ಶಾಸಕರ ಆರೋಪ ವಿಚಾರವಾಗಿ ಮಾತನಾಡಿದ ಸಚಿವರು, ಗ್ಯಾರಂಟಿ ಯೋಜನೆಗಳು ನಮ್ಮ ಪಕ್ಷದ ಪ್ರಣಾಳಿಕೆಯ ವಾಗ್ದಾನಗಳು. ಸುಮ್ಮನೆ ಒಂದಿನ ಮಾಡುತ್ತೇವೆ ಮತ್ತೊಂದು ದಿನ ತೆಗೆಯುತ್ತೇವೆ ಅಂತ ಹೇಳೋಕೆ ಆಗಲ್ಲ. ಗ್ಯಾರಂಟಿ ಯೋಜನೆಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಗೂ ಹಣ ಕೊಡುತ್ತಿದ್ದೇವೆ. ಆರೋಗ್ಯ ಇಲಾಖೆಯಿಂದಲೂ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.
ಆರೋಗ್ಯ ಸಚಿವರು ಕಾಣೆಯಾಗಿದ್ದಾರೆ ಎಂಬ ಎಂಎಲ್‌ಸಿ ಎನ್.ರವಿಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಅವರು, ಬಹುಶ: ಹಿಂದಿನ ಆರೋಗ್ಯ ಸಚಿವರು ಕಾಣೆ ಆಗಿರಬೇಕು ಎಂದರು.

ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್‌ ನಿರ್ಧಾರ: ಚಲುವ

ಮುಖ್ಯಮಂತ್ರಿ ಒಂದು ವರ್ಷಕ್ಕೋ, ಎರಡು ವರ್ಷಕ್ಕೊ ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಸ್ವಾಮೀಜಿಯೊಬ್ಬರು ಸಿಎಂ ಬದಲಾವಣೆ ಕುರಿತು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಬದಲಾವಣೆ ಹೇಳಿಕೆ ಶ್ರೀಗಳ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವ ಶಾಸಕರು ಸಿಎಂ ಬದಲಾವಣೆ ಹೇಳಿಕೆ ಕೊಟ್ಟರೂ ಅದು ಅವರವರ ವೈಯಕ್ತಿಕ ವಿಚಾರವಾಗಿದೆ. ರಾಜ್ಯದಲ್ಲಿ ನಾವು 136 ಶಾಸಕರಿದ್ದೇವೆ, ಹೈಕಮಾಂಡ್‌ ಇದೆ. ಯಾವ ಸಮಯದಲ್ಲಿ ಯಾರು ಸಿಎಂ, ಯಾರು ಮಂತ್ರಿ ಆಗಬೇಕು, ಆ ಸಮಯದಲ್ಲಿ ಆಗುತ್ತಾರೆ ಎಂದರು.

ಸ್ವಾಮೀಜಿ ಹೇಳಿದರೆಂದು ಸಿಎಂ ಬದಲಾಗಲ್ಲ: ಶಾಮನೂರು

ಸ್ವಾಮೀಜಿಗಳು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್‌ ನ ಹಿರಿಯ ಶಾಸಕ, ಆಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಗುರುವಾರ ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕು ಎಂಬ ಒಕ್ಕಲಿಗ ಸಮಾಜದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಹೇಳಿದರೆ ಮುಖ್ಯಮಂತ್ರಿ ಬದಲಾವಣೆ ಮಾಡುವುದಕ್ಕೆ ಆಗದು. ನಮ್ಮ ಪಕ್ಷದ ಹೈಕಮಾಂಡ್ ಹೇಳಿದಂತೆ ಆಗುತ್ತದೆ ಎಂದರು.

ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಡಿಸಿಎಂ ಹುದ್ದೆ ಚರ್ಚೆಗೆ ಬಿರುಸು!

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಚೆನ್ನಾಗಿಯೇ ಆಡಳಿತ ನೀಡುತ್ತಿದ್ದಾರೆ. ನಾನಾಗಲಿ, ಯಾವುದೇ ಸ್ವಾಮೀಜಿಗಳಾಗಲಿ ಹೇಳಿದಾಕ್ಷಣ ಮುಖ್ಯಮಂತ್ರಿ ಬದಲಿಸುತ್ತಾರಾ? ಸ್ವಾಮೀಜಿಗಳು ಹೇಳಿದರೆಂದು ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ. ಹೈಕಮಾಂಡ್ ಹೇಳಿದರಷ್ಟೇ ಬದಲಾವಣೆ ಸಾಧ್ಯ. ಸಿಎಂ ಸಿದ್ದರಾಮಯ್ಯ ಏನೇ ಸಮಸ್ಯೆಯಾದರೂ ಸರಿಯಾಗಿ ಉತ್ತರ ನೀಡುತ್ತಾರೆ. ಮುಖ್ಯಮಂತ್ರಿಯವರು ಸಹ ಹೈಕಮಾಂಡ್ ಪ್ರಕಾರ ನಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಉತ್ತಮ ಕೆಲಸಗಳು ಆಗಿವೆ. ಗ್ಯಾರಂಟಿ ಯೋಜನೆ ಮೂಲಕ ಜನಪ್ರಿಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹೆಸರು ಮಾಡಿದ್ದಾರೆ. ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡಿಲ್ಲ ಅಂತಾ ಹೇಳಿದ್ದು ಯಾರು? ಯಾರೇನೇ ಹೇಳಿದರೂ ಹೈಕಮಾಂಡ್ ಮುಂದೆ ಏನೂ ನಡೆಯಲ್ಲ ಎಂದರು.

ಜಾತಿವಾರು ಉಪ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲಾ ಆಗುವುದಲ್ಲ, ಮಾಡುವುದಲ್ಲ. ಅದನ್ನೆಲ್ಲಾ ಮಾಡಿದರೆ ಹೈಕಮಾಂಡ್ ಮಾಡಬೇಕಷ್ಟೆ. ಅವನಿಗೇನು (ಚನ್ನಗಿರ ಶಾಸಕ ಬಸವರಾಜ ವಿ.ಶಿವಗಂಗಾ) ಗೊತ್ತು? ಹೊಸ ಶಾಸಕ. ಅವನಿಗೆ ಯಾರು ಬೇಕೋ ಅಂತವರ ಪರ ಮಾತನಾಡುತ್ತಾನೆ. ಅವನಿಗೆ ಯಾರೋ ಚಾರ್ಜ್ ಮಾಡಿ, ಹಿಂಗೇ ಹೇಳು ಅಂತಾ ಹೇಳಿರಬೇಕಷ್ಟೇ ಎಂದರು.

Latest Videos
Follow Us:
Download App:
  • android
  • ios