Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಡಿಸಿಎಂ ದಂಗಲ್ ; ಸಿದ್ದು ಬಣದವರ ಬಡಿದಾಟಕ್ಕೆ ಮೆತ್ತಗಾದ ಡಿಕೆಶಿ.. ಹೆಚ್ಚಾಗುತ್ತಾ ಡಿಸಿಎಂ ಸ್ಥಾನ?

ಲೋಕಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಡಿಸಿಎಂ ದಂಗಲ್ ಮತ್ತಷ್ಟು ಜೋರಾಗಿದೆ.. ಸಿಎಂ ಸಿದ್ದರಾಮಯ್ಯ ಬಣದ ಆಪ್ತ ಸಚಿವರ ಡಿಸಿಎಂ ಸ್ಥಾನ ಸೃಷ್ಟಿಯ ಒತ್ತಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮೆತ್ತಗಾಗಿದ್ದಾರೆ.

Karnataka Congress Govt three deputy chief minister post fight DK Shivakumar shown soft corner sat
Author
First Published Jun 25, 2024, 5:21 PM IST

ಬೆಂಗಳೂರು (ಜೂ.25): ಲೋಕಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಡಿಸಿಎಂ ದಂಗಲ್ ಮತ್ತಷ್ಟು ಜೋರಾಗಿದೆ.. ಸಿಎಂ ಸಿದ್ದರಾಮಯ್ಯ ಬಣದ ಆಪ್ತ ಸಚಿವರು ಸಮುದಾಯಕ್ಕೆ ಒಂದರಂತೆ ಡಿಸಿಎಂ ಸ್ಥಾನ ಸೃಷ್ಟಿ ಮಾಡಿ ಎಂದು ಪಟ್ಟು ಹಿಡಿದಿದ್ದು, ಹೈಕಮಾಂಡ್ ನಾಯಕರು ನಿದ್ದೆಗೆಡುವಂತೆ ಮಾಡಿದೆ.

ಸಿದ್ದರಾಮಯ್ಯ ಸರ್ಕಾರದ ಹಿರಿಯ ಸಚಿವರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ ಕಳೆದ ಶುಕ್ರವಾರ, ಹೆಚ್ಚುವರಿ ಡಿಸಿಎಂ ಬಗ್ಗೆ ಸಾಮೂಹಿಕವಾಗಿ ಚರ್ಚೆ ಮಾಡಬೇಕು.. ಆ ನಂತರ ಅದಕ್ಕೆ ದಾರಿ ಸಿಗುತ್ತೆ ಎಂದು ಹೆಚ್ಚುವರಿ ಡಿಸಿಎಂ ವಿಚಾರ ಪ್ರಸ್ತಾಪಿಸಿದ್ರು.. ಇದಕ್ಕೆ ಸಂಪುಟದ ಸಚಿವರು ಒಬ್ಬರಾದ ಮೇಲೆ ಒಬ್ಬರು ಬೆಂಬಲ ಸೂಚಿಸುತ್ತಿದ್ದು.. ಸತೀಶ್ ಮಾತಿಗೆ ಸಹಮತ ಇದೆ ಎನ್ನುತ್ತಿದ್ದಾರೆ.  ಸತೀಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹಮದ್, ‘ಡಿಸಿಎಂ ಸ್ಥಾನ ಕೇಳೋದ್ರಲ್ಲಿ ತಪ್ಪೇನಿಲ್ಲ.. ಎಲ್ಲ ಸಮಾಜಕ್ಕೂ ಡಿಸಿಎಂ ಬೇಕು ಎನ್ನುವುದು ಇರುತ್ತೆ.. ಮುಸ್ಲಿಂ ಸಮಾಜ ಸೇರಿ ಲಿಂಗಾಯತ, ದಲಿತ ಸಮಾಜಗಳಿಂದಲು ಡಿಸಿಎಂ ಸ್ಥಾನಕ್ಕೆ‌ ಬೇಡಿಕೆ ಇದೆ.. ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ’ ಎಂದಿದ್ದಾರೆ.. ಇನ್ನೂ ಸಚಿವ ಕೆ.ಎನ್ ರಾಜಣ್ಣ ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ರಾಜ್ಯದಲ್ಲಿ 3 ಡಿಸಿಎಂ ಮಾಡೋದ್ರಿಂದ ತೊಂದರೆ ಏನು?, ನಾನು ಮೊದಲಿನಂದಲೂ ಈ ಕುರಿತು‌ ಮಾತಾಡಿದ್ದೇನೆ.. AICC ಅಧ್ಯಕ್ಷರು ಸಾರ್ವಜನಿಕವಾಗಿ ಪ್ರಸ್ತಾಪ ಬೇಡ ಅಂದಿದ್ರು.. ಅದರಿಂದ ನಾವು ಸುಮ್ನೆ ಇದ್ದೆವು.. ಸತೀಶ್ ಜಾರಕಿಹೊಳಿ‌ ನಿನ್ನೆ ಮಾತಾಡಿದ್ದಾರೆ.. ಅವರು ಮಾತಾಡಿದ್ದು ಸರಿ ಇದೆ, ಅದರಲ್ಲಿ ತಪ್ಪೇನಿದೆ.. ಇದಕ್ಕೆ ನಮ್ಮ ಸಹಮತ ಇದೆ’ ಎಂದಿದ್ದಾರೆ.. 

ಉಪಚುನಾವಣೆ ತಾಲೀಮು: ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ, ಬಡವರಿಗೆ ಸೈಟ್ ಹಂಚುತ್ತೇನೆ, ಡಿಕೆಶಿ

ತಮ್ಮ ಡಿಕೆ ಸುರೇಶ್ ಸೋಲಿನ ಬಳಿಕ ಮೆತ್ತಗಾದ್ರಾ ಡಿಸಿಎಂ ಡಿಕೆಶಿ?
ಇಷ್ಟೇ ಆಗಿದ್ರೆ ಈ ಸುದ್ದಿ ಹೆಚ್ಚು ಕಾವು ಪಡೆದುಕೊಳ್ಳುತ್ತಿರಲಿಲ್ಲ.. ಇಷ್ಟು ದಿನ ಡಿಸಿಎಂ ಸ್ಥಾನ ಹೆಚ್ಚು ಮಾಡಿ ಅಂದಾಗೆಲ್ಲ ವಿರೋಧಿಸುತ್ತಿದ್ದ ಡಿಕೆಶಿ ಬಣ ಈ ಬಾರಿ ಯಾಕೋ ಸೈಲೆಂಟ್ ಆಗಿದೆ. ಬೆಂಗಳೂರು ಗ್ರಾಮಾಂತರ ಸೋಲಿನ ಬಳಿಕ ಡಿಕೆಶಿ ಬಣ ಸ್ವಲ್ಪ ಮೆತ್ತಗಾದಂತೆ ಕಾಣಿಸುತ್ತಿದ್ದು, ಸಿದ್ದು ಬಣದ ಹೆಚ್ಚುವರಿ ಡಿಸಿಎಂ ವಾದಕ್ಕೆ ಬಲ ಹೆಚ್ಚಾದಂತೆ ಕಂಡುಬರುತ್ತಿದೆ.  ಹೆಚ್ಚುವರಿ ಡಿಸಿಎಂ ಸೃಷ್ಟಿ ಬಗ್ಗೆ ಮಾತಾಡಿದ ಮಾಜಿ ಸಂಸದ ಡಿಕೆ ಸುರೇಶ್ ಕೂಡ, ಅಹಿಂದ ಸಚಿವರ ವಾದ ಸರಿಯಾಗಿದೆ ಎಂದಿದ್ದಾರೆ.. ‘ ಹೆಚ್ಚುವರಿ ಡಿಸಿಎಂ ಬಗ್ಗೆ ನನಗೆ ಮಾಹಿತಿ ಇಲ್ಲ.

ಪಕ್ಷ ಚರ್ಚೆ ಮಾಡಿ ಐದು ಡಿಸಿಎಂ ಬೇಕಾದರೂ ಮಾಡಲಿ.. ಐದು ಡಿಸಿಎಂ ಮಾಡಿದರೆ ಒಳ್ಳೆಯದೇ.. ಸಾಮಾಜಿಕ ನ್ಯಾಯ ಮತ್ತು ಪಕ್ಷ ಬಲವರ್ಧನೆ ಆಗಲಿದೆ.. ಎಲ್ಲ ಸಮುದಾಯದವರಿಗೂ ನ್ಯಾಯ ಸಿಗಬೇಕು ಎಂದಿದ್ದಾರೆ.. ಪಕ್ಷದಲ್ಲಿ ಎಂಟು ಬಾರಿ ಗೆದ್ದ ರಾಮಲಿಂಗ ರೆಡ್ಡಿ ಇದ್ದಾರೆ .. ಎಂಟು ವರ್ಷ ಅಧ್ಯಕ್ಷರಾಗಿದ್ದ ಪರಮೇಶ್ವರ್ ಇದ್ದಾರೆ.. ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂಬಿ ಪಾಟೀಲ್ ಇದ್ದಾರೆ.. ಕಾರ್ಯಾಧ್ಯಕ್ಷರಾಗಿದ್ದ ಸತೀಶ್ ಜಾರಕಿಹೊಳಿ ಇದ್ದಾರೆ.. ಎಲ್ಲ ಸಮುದಾಯಕ್ಕೆ ನ್ಯಾಯ ಸಿಗುತ್ತದೆ ಪಕ್ಷ ಬಲವರ್ಧನೆ ಆಗುತ್ತದೆ ಎಂದಿದ್ದಾರೆ’.. ಇನ್ನೂ ಈ ಬಗ್ಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ ‘ಮೂರು ಡಿಸಿಎಂ ಬಗ್ಗೆ ಪಾರ್ಟಿ ತೀರ್ಮಾನ ಮಾಡುತ್ತೆ.. ಯಾರು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ’ ಎಂದು ತಳ್ಳಿಹಾಕುವ ಮಾತಾಡಿದ್ದಾರೆ.

ಮುಖ್ಯಮಂತ್ರಿ ಪಟ್ಟಕ್ಕಾಗಿ 'ದೇವಮೂಲೆ' ಹುಡುಕಿ ಬಂದರಾ ಡಿಕೆ? ಚನ್ನಪಟ್ಟಣ ಚದುರಂಗದಲ್ಲಿ ರೋಚಕ ದಾಳ ಉರುಳಿಸಿದ ಡಿಕೆಶಿ!

ಈ ವಾರವೇ ಹೈಕಮಾಂಡ್ ಭೇಟಿಗೆ ಮುಂದಾದ ಅಹಿಂದ ಸಚಿವರು?
ಈ ಬಾರಿ ಅಹಿಂದ ಸಚಿವರು ಕೇವಲ ಹೇಳಿಕೆ ನೀಡಿ ಸುಮ್ಮನಾಗದೇ ತಮ್ಮ ಬೇಡಿಕೆಯನ್ನ ಹೈಕಮಾಂಡ್​ಗೆ ಮುಟ್ಟಿಸಲು ಮುಂದಾಗಿದ್ದು, ಈ ವಾರವೇ ಖರ್ಗೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಭೇಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೂನ್ 27 ಇಲ್ಲವೇ 28 ರಂದು ಹೈಕಮಾಂಡ್ ಭೇಟಿ ಸಾಧ್ಯತೆ ಇದ್ದು, ಹೆಚ್ಚು ಡಿಸಿಎಂ ಸ್ಥಾನ ನೀಡಿದ್ರೆ ಆಗುವ ಲಾಭದ ಬಗ್ಗೆ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಕಳೆದ ಬಾರಿ ಮೂರು ಡಿಸಿಎಂ ವಾದ ಹೈಕಮಾಂಡ್ ಮುಂದಿಟ್ಟಾಗ, ಚುನಾವಣೆ ಬಳಿಕ ನೋಡೋಣ ಎಂದಿದ್ದ ಕಾಂಗ್ರೆಸ್ ವರಿಷ್ಠರು, ಈ ಬಾರಿ ನಿರ್ಧಾರ ಮಾಡಲೇಬೇಕಾದ ಪರಿಸ್ಥಿತಿಗೆ ತಲುಪಿದ್ದು, ಏನು ಮಾಡೋದೆಂಬ ಸಂಕಷ್ಟಕ್ಕೆ ಸಿಲುಕಿದೆ.

ಕಾಂಗ್ರೆಸ್​ನಲ್ಲಿ ಯಾರಿಗೆ ಹೆಚ್ಚುವರಿ ಡಿಸಿಎಂ ಹುದ್ದೆ..?
ಇನ್ನೂ ಹೆಚ್ಚುವರಿ ಡಿಸಿಎಂ ಸೃಷ್ಟಿಸಿದ್ರೆ ಕಾಂಗ್ರೆಸ್​ನಲ್ಲಿ ಅದಕ್ಕೆ ದೊಡ್ಡ ಆಕಾಂಕ್ಷಿಗಳ ಗುಂಪೇ ಸೃಷ್ಟಿಯಾಗಿದ್ದು, ಪ್ರಬಲ ಸಮುದಾಯದ ನಾಯಕರು ಡಿಸಿಎಂ ಆಗೋಕೆ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ..  ಎಸ್​ಸಿ ಸಮುದಾಯದಿಂದ ಜಿ.ಪರಮೇಶ್ವರ್, ಎಸ್‌.ಟಿ ಸಮುದಾಯದಿಂದ ಸತೀಶ್ ಜಾರಕಿಹೊಳಿ, ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್, ಲಿಂಗಾಯತ ಸಮುದಾಯದಿಂದ ಎಂಬಿ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ರೇಸ್​ನಲ್ಲಿದ್ದಾರೆ. ಆದ್ರೆ ಈ ಪೈಕಿ ಯಾರಿಗೆ ಹೈಕಮಾಂಡ್ ಮಣೆ ಹಾಕುತ್ತೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.                                      
                                                                                                                                                   ವರದಿ- ಶಿವರಾಜ್ ಸಿ, ಏಷ್ಯಾನೆಟ್ ಸುವರ್ಣ  ನ್ಯೂಸ್

Latest Videos
Follow Us:
Download App:
  • android
  • ios