ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಅಧಿಕಾರ ಹಂಚಿಕೆ ಮಾತುಕತೆ ನಡೆದೇ ಇಲ್ಲ; ಎಂಬಿಪಾ
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಜಟಾಪಟಿಯಲ್ಲಿ ಹೈಕಮಾಂಡ್ ಅಧಿಕಾರ ಹಂಚಿಕೆ ಸೂತ್ರ ಮುದಿಟ್ಟು ಸಮಾಧಾನ ಪಡಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.ಆದರೆ ಈ ಮಾತನನ್ನು ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವರೇ ತಳ್ಳಿಹಾಕಿದ್ದಾರೆ. ಈ ಕುರಿತು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಮೈಸೂರು(ಮೇ.22): ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಟಾಪಟಿ ಅಂತ್ಯಗೊಂಡು ಇದೀಗ ಸರ್ಕಾರ ರಚನೆಯಾಗಿದೆ.ಆದರೆ ಡಿಕೆ ಶಿವಕುಮಾರ್ ಪಟ್ಟು ಸಡಿಲಿಸಲು ಕಾಂಗ್ರೆಸ್ ಹೈಕಮಾಂಡ್, ಅಧಿಕಾರ ಹಂಚಿಕೆ ಸೂತ್ರ ಮಂದಿಟ್ಟಿತ್ತು ಅನ್ನೋ ಮಾತುಗಳು ಇವೆ. ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಅಲ್ಲ, 30 ತಿಂಗಳ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಅನ್ನೋ ಮಾತುಗಳನ್ನು ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವ, ಆಪ್ತ ಎಂಬಿಪಾಟೀಲ್ ತಿರಸ್ಕರಿಸಿದ್ದಾರೆ. ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಮುಂದೆ ಯಾವುದೇ ಮಾತುಕತೆ ನಡೆದಿಲ್ಲ. ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಲಿದ್ದಾರೆ ಎಂದು ಎಂಪಿ ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎಂಬಿ ಪಾಟೀಲ್, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿದ್ದರೆ, ಡಿಕೆ ಶಿವಕುಮಾರ್ 5 ವರ್ಷ ಉಪ ಮುಖ್ಯಮಂತ್ರಿ ಹೊಣೆ ನಿರ್ವಹಿಸಲಿದ್ದಾರೆ ಎಂದಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ಕುರಿತು ಎಐಸಿಸಿ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಮುಂದಿನ 5 ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಧಿಕಾರ ಹಂಚಿಕ ಮಾತೇ ಇಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
Ramanagara: ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಹೆಚ್ಚಿದ ಜವಾಬ್ದಾರಿ
ಇದೇ ವೇಳೆ ಬಿಜೆಪಿ ಅಧಿಕಾರದಲ್ಲಿ ನಡೆದ ಹಗರಣಗಳ ತನಿಖೆ ನಡೆಸುತ್ತೇವೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ಪಿ ಎಸ್ ಐ, ಹಗರಣ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಇತರೆ ಇಲಾಖೆ ಬಗ್ಗೆ ತನಿಖೆ ನಡೆಸುತ್ತೇವೆ.ತಪ್ಪತಸ್ತರಿಗೆ ಶಿಕ್ಷೆ ನೀಡಿ, ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದಿದ್ದಾರೆ. ಇತ್ತ ಕಾಂಗ್ರೆಸ್ ಗ್ಯಾರೆಂಟಿ ಭರವಸೆಗೆ ಮೊದಲ ಕ್ಯಾಬಿನೆಟ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಇದರಲ್ಲಿ ಬದಲಾವಣೆ ಇಲ್ಲ ಎಂದು ಎಂಬಿಪಾಟೀಲ್ ಹೇಳಿದ್ದಾರೆ.
ಸಿಎಂ ಹಾಗೂ ಉಪ ಮುಖ್ಯಮಂತ್ರಿ ಜಟಾಪಟಿ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಅಧಿಕಾರ ಹಂಚಿಕೆಯನ್ನು ಕರ್ನಾಟಕ ಜನತೆಯೊಂದಿಗೆ ಮಾಡಲಿದ್ದೇವೆ ಎಂದು ಮಾತು ಅಂತ್ಯಗೊಳಿಸಿದ್ದರು. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಊಹಾಪೋಹ ಹಾಗೇ ಉಳಿದುಕೊಂಡಿತ್ತು. ಇತ್ತ ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್, ಅಧಿಕಾರ ಹಂಚಿಕೆ, ಸೋನಿಯಾ ಗಾಂಧಿ ಜೊತೆಗಿನ ಮಾತುಕತೆ ಕುರಿತು ಯಾವುದೇ ವಿಚಾರ ಬಹಿರಂಗಪಡಿಸುವುದಿಲ್ಲ ಎಂದಿದ್ದರು.
ಮೊದಲ ಹಂತದಲ್ಲಿ ಸಚಿವಸ್ಥಾನ ನೀಡಲು ಮೀನಾಮೇಷ: ಕಾಂಗ್ರೆಸ್ ಕ್ಯಾಬಿನೆಟ್‌ನಲ್ಲಿ ಕಾಣದ ನಿಜ ಕಲ್ಯಾಣ!
ಇದೀಗ ಎಂಬಿ ಪಾಟೀಲ್, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ ನೀಡಿ ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಷಣ ಮಾಡುತ್ತಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಎಂಬಿ ಪಾಟೀಲ್, ಸಿದ್ದರಾಮಯ್ಯ ಜೊತೆ ಮಾತನಾಡಿದ್ದರೆ. ತಕ್ಷಣ ಡಿಕೆ ಶಿವಕುಮಾರ್ ಡಿಸ್ಟರ್ಬ್ ಮಾಡಬೇಡಿ ಎಂದು ವಾರ್ನಿಂಗ್ ಮಾಡಿದ್ದರು. ಈ ಘಟನೆಗೆ ಎಂಬಿ ಪಾಟೀಲ್ ತಿರುಗೇಟು ನೀಡುವ ಪ್ರಯತ್ನವನ್ನು ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.