ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಕೋಲಾರಕ್ಕೆ ಭೇಟಿ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ನೀಡಿದ 4ನೇ ಭೇಟಿ ಇದಾಗಿದೆ.  

ಕೋಲಾರ (ಫೆ.14): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಕೋಲಾರಕ್ಕೆ ಭೇಟಿ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ನೀಡಿದ 4ನೇ ಭೇಟಿ ಇದಾಗಿದೆ. ಸೋಮವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ಸಿದ್ದು, ನಗರದ ಟೇಕಲ್‌ ರಸ್ತೆಯ ಕಿಲಾರಿಪೇಟೆಯ ಕಟ್ಟಡದಲ್ಲಿ ಸಜ್ಜುಗೊಳಿಸಲಾಗಿದ್ದ ವಾರ್‌ರೂಮ್‌, ಸಂದರ್ಶನ ಹಾಲ್‌ ಹಾಗೂ ಚುನಾವಣಾ ಪ್ರಚಾರದ ಹಾಲ್‌ಗಳನ್ನು ಉದ್ಘಾಟಿಸಿದರು. ಚುನಾವಣಾ ಪ್ರಚಾರದ ಹಾಲ್‌ನಲ್ಲಿ ‘ಸಿದ್ಧರಾಮಯ್ಯ ಕೋಲಾರ ಕ್ಷೇತ್ರ’ ಎಂದು ನಾಮಫಲಕ ಬರೆಯುವ ಮೂಲಕ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದರು. 

ಬೆಂಗಳೂರಿನ ಚುನಾವಣಾ ತಂತ್ರಗಾರಿಕೆ ತಂಡ ‘ಪೋಲ್‌ ಹೌಸ್‌’ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಮುಂದಿನ ಮೂರು ತಿಂಗಳು ಕೋಲಾರದ ವಾರ್‌ರೂಮನ್ನು ನಿರ್ವಹಿಸಲಿದೆ. ಬಳಿಕ, ಬೆಳ್ಳೂರು ಬಳಿಯ ಯೋಗ ಕೇಂದ್ರಕ್ಕೆ ಭೇಟಿ ನೀಡಿದರು. ನಂತರ, ಬೃಹತ್‌ ರೋಡ್‌ ಶೋ ಮೂಲಕ ವೇಮಗಲ್‌ಗೆ ಆಗಮಿಸಿದರು. ಈ ವೇಳೆ, ಸಿದ್ದುಗೆ ಭವ್ಯ ಸ್ವಾಗತ ಕೋರಲಾಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿದ್ದು ಪರ ಘೋಷಣೆಗಳನ್ನು ಕೂಗಿದರು. ನಂತರ, ಕುರುಬರಹಳ್ಳಿಯ ಆಂಜನೇಯ ದೇಗುಲ, ರೇಣುಕಾ ಯಲ್ಲಮ್ಮ ದೇವಾಲಯಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ದರ್ಗಾಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ: ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕರೆ

ಗೆದ್ದೇ ಗೆಲ್ಲುವೆ: ಬಳಿಕ ವೇಮಗಲ್‌ ಸಮಾವೇಶದಲ್ಲಿ ಮಾತನಾಡಿದ ಅವರು ಕೋಲಾರದಲ್ಲಿ ಗೆದ್ದೇ ಗೆಲ್ಲುತ್ತೇನೆ. ಚಾಮುಂಡೇಶ್ವರಿ ಹಾಗೂ ಕೋಲಾರಕ್ಕೆ ಹೋಲಿಕೆ ಮಾಡೋದು ಬೇಡ. ಅಲ್ಲಿ ಬಿಜೆಪಿಯವರು ವೀಕ್‌ ಕ್ಯಾಂಡಿಡೇಟ್‌ ಹಾಕಿದ್ದರು. ಆದ್ದರಿಂದ ಜೆಡಿಎಸ್‌ಗೆ ಎಲ್ಲ ಮತಗಳು ಬಿದ್ದವು. ಜೆಡಿಎಸ್‌ ಹಾಗೂ ಬಿಜೆಪಿಯ ಒಳ ಒಪ್ಪಂದಿಂದ ಸೋಲಬೇಕಾಯಿತು. ಕೋಲಾರದಲ್ಲಿ ಬಿಜೆಪಿ- ಜೆಡಿಎಸ್‌ ಒಪ್ಪಂದ ಮಾಡಿಕೊಂಡರೂ ಏನೂ ಆಗೋಲ್ಲ ಎಂದರು. ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ಅಹಿಂದ ಸರ್ವೇ ರಿಪೋರ್ಚ್‌ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾವ ರಿಪೋರ್ಚ್‌ ನನಗೆ ಗೊತ್ತಿಲ್ಲ ಎಂದರು. ಶಾಸಕ ರಮೇಶ್‌ಕುಮಾರ್‌, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ಅದಾನಿ ಆದಾಯ ಹೆಚ್ಚಳ ಸುಪ್ರೀಂ ಕೋರ್ಟ್‌ ಜಡ್ಜ್‌ ನೇತೃತ್ವದಲ್ಲಿ ತನಿಖೆ ಆಗಲಿ: ಬಿ.ಕೆ.ಹರಿಪ್ರಸಾದ್‌

ಅಧಿಕಾರ ಹಿಡಿಯುವುದು ಖಚಿತ: ಅಧಿಕಾರಕ್ಕೆ ಬಂದರೆ ಮಹಿಳಾ ಸಂಘಗಳಿಗೆ ಬಡ್ಡಿ ರಹಿತವಾಗಿ ನೀಡಲಾಗುತ್ತಿರುವ 50 ಸಾವಿರ ರೂ.ಗಳನ್ನು 1 ಲಕ್ಷಕ್ಕೆ ಏರಿಸುತ್ತೇವೆ. ಸ್ತ್ರೀಶಕ್ತಿ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದವರ ಉಳಿಕೆ ಕಂತುಗಳನ್ನು ಮನ್ನಾ ಮಾಡಲಾಗುವುದು ಎಂದು ಪುನರುಚ್ಚರಿಸಿದರು. ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ. ನಾನು ರಾಜ್ಯದಲ್ಲಿ 12 ವರ್ಷ ಹಣಕಾಸು ಮಂತ್ರಿಯಾಗಿ 13 ಬಾರಿ ಬಜೆಟ್‌ ಮಂಡನೆ ಮಂಡಿಸಿದ್ದೇನೆ. ಒಂದೇ ಒಂದು ಭ್ರಷ್ಟಾಚಾರದ ಕೇಸ್‌ ನನ್ನ ಮೇಲಿಲ್ಲ. ಆದರೆ, ಈಗಿನ ಬಿಜೆಪಿಯ 40% ಕಮಿಷನ್‌ ಸರಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಕೋಲಾರ ನಗರಸಭೆಯ ಐವರು ಸದಸ್ಯರು, 5 ಮಂದಿ ಮಾಜಿ ನಗರಸಭೆ ಸದಸ್ಯರು ಸೇರಿ ವಿವಿಧ ಪಕ್ಷಗಳಿಂದ ಬಂದ 300ಕ್ಕೂ ಹೆಚ್ಚು ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.