ಏಕ ಪಕ್ಷ, ಏಕ ನಾಯಕ’ ಸ್ಥಾಪನೆ ಸಂಚು| ಸರ್ವಾಧಿಕಾರ ಸ್ಥಾಪಿಸುವ ಹುನ್ನಾರ, ಇದರ ಜಾರಿಗೆ ಅವಕಾಶ ನೀಡಲ್ಲ| ಆರ್‌ಎಸ್‌ಎಸ್‌ ಸೇರಿದವರಾಗಿದ್ದರೆ ಆ ಸಿದ್ಧಾಂತಗಳನ್ನು ಸದನದಲ್ಲಿ ಹೇರಬಾರದು. ಅವು ಸದನದ ಹೊರಗಿರಲಿ: ಸಿದ್ದರಾಮಯ್ಯ| 

ಬೆಂಗಳೂರು(ಮಾ.05): ಚುನಾವಣೆ ವ್ಯವಸ್ಥೆಗೆ ಸುಧಾರಣೆ ತರುವ ಬದಲು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎನ್ನುವ ಮೂಲಕ ‘ಒಂದು ರಾಷ್ಟ್ರ, ಒಬ್ಬ ನಾಯಕ’, ‘ಒಂದು ರಾಷ್ಟ್ರ, ಒಂದು ಪಕ್ಷ’ ಮಾಡಲು ಮುಂದಾಗಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌.ಎಸ್‌.ಎಸ್‌. ಅಜೆಂಡಾ ಸದನದಲ್ಲಿ ಹೇರಲು ಬಿಡುವುದಿಲ್ಲ. ಚುನಾವಣೆ ಸುಧಾರಣೆ ತಂದಿದ್ದರೆ ಚರ್ಚೆ ಮಾಡಬಹುದಿತ್ತು.

ದೇಶದಲ್ಲಿ ನಡೆಯುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದವು. ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿರುವುದು ಕೂಡ ಕೇಂದ್ರ ಸರ್ಕಾರ. ಹೀಗಿರುವಾಗ ವಿಧಾನ ಮಂಡಲ ಅಧಿವೇಶನದಲ್ಲಿ ’ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ವಿಚಾರವನ್ನು ಚರ್ಚಿಸುವುದರಿಂದ ಆಗುವ ಉಪಯೋಗ ಏನು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಪಾದ ಮುಟ್ಟಿ ಆಶೀರ್ವಾದ ಪಡೆದ ಡಿಕೆಶಿ, ಮನಸ್ತಾಪ ಅಂತ್ಯ!

ಒಂದು ದೇಶ ಒಂದು ಚುನಾವಣೆ ಎಂಬುದು ಆರ್‌.ಎಸ್‌.ಎಸ್‌ನ ಅಜೆಂಡಾ. ವಾಸ್ತವದಲ್ಲಿ ಇದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಅಲ್ಲ. ‘ಒನ್‌ ನೇಷನ್‌, ಒನ್‌ ಲೀಡರ್‌’, ‘ಒನ್‌ ನೇಷನ್‌, ಒನ್‌ ಪಾರ್ಟಿ’ ಮಾಡುವ ಹುನ್ನಾರ. ಇದರ ಬದಲು ರಾಜ್ಯ ಸರ್ಕಾರ ಚುನಾವಣಾ ವ್ಯವಸ್ಥೆಯಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಚರ್ಚಿಸುವುದಾದರೆ, ನಾವು ನಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದರು.

ಆರ್‌ಎಸ್‌ಎಸ್‌ ಸಿದ್ಧಾಂತ ಹೊರಗಿರಲಿ:

ನಾನು ಆರ್‌ಎಸ್‌ಎಸ್‌ನವನು’ ಎಂಬ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಆರ್‌ಎಸ್‌ಎಸ್‌ ಸೇರಿದವರಾಗಿದ್ದರೆ ಆ ಸಿದ್ಧಾಂತಗಳನ್ನು ಸದನದಲ್ಲಿ ಹೇರಬಾರದು. ಅವು ಸದನದ ಹೊರಗಿರಲಿ’ ಎಂದರು.