ಬೆಂಗಳೂರು(ಮಾ.04): ಕಾಂಗ್ರೆಸ್​ ಪಕ್ಷದಿಂದ ಜನ ಧ್ವನಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೀಗಿರುವಾಗ ಜನಧ್ವನಿ ಪಾದಯಾತ್ರೆಗೆ ಚಾಲನೆ ನೀಡಲು ಸಿದ್ದರಾಮಯ್ಯರವರ ಕೆಪಿಸಿಸಿ ಕಚೇರಿಗೆ ಆಗಮಿಸಿದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದ ಘಟನೆ ನಡೆದಿದೆ.

ಮೈಸೂರು ಮೇಯರ್ ಚುನಾವಣೆ ವಿಚಾರವಾಗಿ ಕಳೆದ ಮೂರು ದಿನಗಳಿಂದ ಸಿದ್ದರಾಮಯ್ಯ ಮುನಿಸಿಕೊಂಡಿದ್ದರು ಎನ್ನಲಾಗಿತ್ತು. ಹೀಗಿರುವಾಗಲೇ ಬುಧವಾರ ಸಿದ್ದರಾಮಯ್ಯ ನಿವಾಸಕ್ಕೆ ಖುದ್ದು ತೆರಳಿ ಡಿ. ಕೆ. ಶಿವಕುಮಾರ್ ಮನವೊಲಿಸಿದ್ದರು. ಇಂದು ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಬರುತ್ತಿದ್ದಂತೆ ಗೌರವದಿಂದ ಕಾಲು ಮುಟ್ಟಿ ಶಿವಕುಮಾರ್ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಭುಜದ ಮೇಲೆ ಸಿದ್ದರಾಮಯ್ಯ ಕೈಯಿಟ್ಟು ಆಶೀರ್ವಾದ ಮಾಡಿದ್ದಾರೆ.

ಸದ್ಯ ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುವ ಫೋಟೋಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಈ ನಡೆ ಮೂಲಕ ಇಬ್ಬರೂ ನಾಯಕರು ರಾಜಿ ಸಂದೇಶವನ್ನು ರವಾನಿಸಿದ್ದು, ಕಾಂಗ್ರೆಸ್​ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಣಗಳು ರೂಪುಗೊಳ್ಳುತ್ತಿವೆ ಎಂಬ ವಿಷಯವನ್ನು ತಳ್ಳಿಹಾಕಿದ್ದಾರೆ.