ಮುಂದಿನ ಸಿಎಂ ಬಗ್ಗೆ ಯಾರೂ ಹೇಳಿಕೆ ನೀಡಬೇಡಿ: ಸಿದ್ದರಾಮಯ್ಯ

* ಕಾಂಗ್ರೆಸ್‌ ಶಾಸಕರಿಗೆ ಸೂಚನೆ
* ನಾನೇನೂ ಮಾಡೋಕಾಗಲ್ಲ ಎಂದ ಮರುದಿನವೇ ಸಿದ್ದು ನಿಲುವು ಬದಲು
* ಸಿಎಂ ಆಗ್ಬೇಕ್‌ ಎಂದು ನಾನು ಹೇಳಿಲ್ಲ-ಸಿದ್ದು
 

Siddaramaiah Talks Over Next CM of Karnataka grg

ಬೆಂಗಳೂರು(ಜೂ.25): ಮುಂದಿನ ಮುಖ್ಯಮಂತ್ರಿ ವಿಚಾರದ ತಾಕಲಾಟ ಕಾಂಗ್ರೆಸ್‌ನಲ್ಲಿ ವಿಕೋಪಕ್ಕೆ ಮುಟ್ಟಿರುವ ಈ ಹಂತದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ನಿಲುವಿನಿಂದ ಒಂದು ಹೆಜ್ಜೆ ಹಿಂದಿಟ್ಟಿದ್ದು, ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಹೇಳಿಕೆ ನೀಡದಂತೆ ಪಕ್ಷದ ಶಾಸಕರಿಗೆ ಮನವಿ ಮಾಡಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವತ್ತೂ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೆ ನೀಡಿಲ್ಲ. ಅಲ್ಲದೆ, ಮುಂದಿನ ಮುಖ್ಯಮಂತ್ರಿ ಕುರಿತು ಹೇಳಿಕೆ ನೀಡಬೇಡಿ ಎಂದು ಶಾಸಕರಿಗೂ ಹೇಳುತ್ತೇನೆ. ಯಾರೂ ಮುಂದಿನ ಚೀಫ್‌ ಮಿನಿಸ್ಟರ್‌ ವಿಚಾರದ ಬಗ್ಗೆ ಮಾತನಾಡಬೇಡಿ ಎಂದು ಹೇಳಿದರು.

ಮುಂದಿನ ಮುಖ್ಯಮಂತ್ರಿ ವಿಚಾರದ ಬಗ್ಗೆ ಶಾಸಕರು ಹೇಳಿಕೆ ನೀಡಿದರೆ ನಾನೇನೂ ಮಾಡಲು ಆಗುವುದಿಲ್ಲ ಎಂದು ಬುಧವಾರವಷ್ಟೇ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಈ ವಿಚಾರ ಪಕ್ಷದೊಳಗೆ ಅಲ್ಲೋಲ-ಕಲ್ಲೋಲ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ನಿಲುವು ಬದಲಿಸಿಕೊಂಡಿದ್ದು, ಹೇಳಿಕೆ ನೀಡದಂತೆ ಶಾಸಕರಿಗೆ ಈ ಮೂಲಕ ಸೂಚನೆ ನೀಡಿದರು.

ಸಿಎಂ ವಿವಾದ: ಸಿದ್ದು ಪರ ಮತ್ತಷ್ಟು ಶಾಸಕರ ಬೆಂಬಲ; ಡಿಕೆಶಿ ಗರಂ

ಆದರೆ, ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿದ ನಂತರವೂ ಅವರ ಬೆಂಬಲಿಗ ಶಾಸಕರು ಅವರ ಪರ ಹೇಳಿಕೆ ನೀಡುವುದನ್ನು ನಿಲ್ಲಿಸಲಿಲ್ಲ. ಕೆ.ಎನ್‌. ರಾಜಣ್ಣ ಹಾಗೂ ಆರ್‌.ಬಿ. ತಿಮ್ಮಾಪುರ ಅವರಂತಹ ನಾಯಕರು ಮತ್ತೆ ಸಿದ್ದರಾಮಯ್ಯ ಪರ ಜನಾಭಿಪ್ರಾಯವಿದೆ ಎಂದು ಹೇಳಿದರು.

ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ:

ಇದೇ ವೇಳೆ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಕಾಂಗ್ರೆಸ್‌ ಶಾಸಕರು ನೀಡುತ್ತಿರುವ ಹೇಳಿಕೆಗಳನ್ನು ನಿಯಂತ್ರಿಸುವ ಕೆಲಸ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು. ಶಾಸಕಾಂಗ ಪಕ್ಷದ ನಾಯಕರು ನಿಯಂತ್ರಣ ಮಾಡದಿದ್ದರೆ ಅದನ್ನು ನೋಡಿಕೊಳ್ಳಲು ಕಾಂಗ್ರೆಸ್‌ ಪಕ್ಷ ಬದುಕಿದೆ ಎಂದು ಡಿ.ಕೆ.ಶಿವಕುಮಾರ್‌ ತೀಕ್ಷ್ಣವಾಗಿ ಹೇಳಿದ್ದರು. ಆದರೆ, ಈ ಹೇಳಿಕೆಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ಸ್ಪಷ್ಟವಾಗಿ ನಿರಾಕರಿಸಿ ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
 

Latest Videos
Follow Us:
Download App:
  • android
  • ios