ಸಭಾಪತಿ ವಿರುದ್ಧ ಅವಿಶ್ವಾಸ: ಜೆಡಿಎಸ್‌ಗೆ ಜಾತ್ಯಾತೀತ ಪರೀಕ್ಷೆ

ಸಭಾಪತಿ ವಿರುದ್ಧ ಅವಿಶ್ವಾಸದಲ್ಲಿ ಜೆಡಿಎಸ್‌ಗೆ ಸಿದ್ದು ‘ಲಿಟ್ಮಸ್‌ ಟೆಸ್ಟ್‌’| ಜೆಡಿಎಸ್‌ ಬಿಜೆಪಿಯನ್ನು ಬೆಂಬಲಿಸುತ್ತದೆಯೋ ಇಲ್ಲವೋ ನೋಡೋಣ| ಎಚ್‌ಡಿಕೆಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದು ನಾನಲ್ಲ, ಹೈಕಮಾಂಡ್‌| 

Siddaramaiah Talks Over JDS grg

ಬೆಂಗಳೂರು(ಡಿ.07): ನಮ್ಮದು ಜಾತ್ಯತೀತ ಪಕ್ಷ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪದೇ ಪದೇ ಹೇಳುತ್ತಾರೆ. ಬಿಜೆಪಿ ಸರ್ಕಾರ ವಿಧಾನಪರಿಷತ್‌ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದು, ಜೆಡಿಎಸ್‌ ಕೋಮುವಾದಿಗಳ ಪರ ನಿಲ್ಲುತ್ತದೆಯೋ ಇಲ್ಲವೋ ನೋಡುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದ್ದಾರೆ.

ಹೀಗಾಗಿಯೇ ಪರಿಷತ್ತಿನ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ರಾಜೀನಾಮೆ ನೀಡದಂತೆ ಹೇಳಿದ್ದೇವೆ ಎಂದೂ ಅವರು ತಿಳಿಸಿದ್ದಾರೆ. ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ತಮ್ಮ ಅಧಿಕೃತ ನಿವಾಸದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜೆಡಿಎಸ್‌ನ ರಾಜಕೀಯ ವಿರೋಧಿ ಕಾಂಗ್ರೆಸ್‌ ಪಕ್ಷವೇ ಹೊರತು ಬಿಜೆಪಿ ಅಲ್ಲ. ಅವರು ಬಿಜೆಪಿ ಬಗ್ಗೆ ಸದಾಕಾಲ ಮೃದು ಧೋರಣೆ ಹೊಂದಿದ್ದಾರೆ. ಕುಮಾರಸ್ವಾಮಿ ಅವರು ತಾವು ಬಿಜೆಪಿಗೆ ಹೋಗಿದ್ದರೆ 5 ವರ್ಷ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ. ಇದೇ ಕಾರಣಕ್ಕೆ ನಾನು ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ‘ಬಿ-ಟೀಂ’ ಎನ್ನುವುದು ಎಂದು ಟೀಕಿಸಿದರು.

ಕಾಂಗ್ರೆಸ್‌ ಟ್ರ್ಯಾಪ್‌: ಹೆಚ್‌ಡಿಕೆ ಹೇಳಿಕೆಗೆ ಬಿಜೆಪಿಗರ ಅನುಕಂಪ

ಸಮ್ಮಿಶ್ರ ಸರ್ಕಾರ ರಚಿಸಿದ ಮೇಲೆ ತನ್ನ ಗೌರವ ಹಾಳಾಯ್ತು ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕುಮಾರಸ್ವಾಮಿಗೆ ಒಳ್ಳೆ ಇಮೇಜ್‌ ಇದ್ದಿದ್ದರೆ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್‌ ಪಕ್ಷ ಗೆಲ್ಲುವ ಸ್ಥಾನಗಳ ಸಂಖ್ಯೆ ಏರಿಕೆಯಾಗುತ್ತಿತ್ತೇ ಹೊರತು ಕಡಿಮೆಯಾಗುತ್ತಿರಲಿಲ್ಲ. 2004ರಲ್ಲಿ ನಾನು ಜೆಡಿಎಸ್‌ನಲ್ಲಿದ್ದಾಗ 59 ಸ್ಥಾನಗಳಲ್ಲಿ ಗೆದ್ದಿತ್ತು. ಇದೀಗ ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ಗೌರವ ಇದ್ದಿದ್ದರೆ 59 ಸ್ಥಾನಗಳಿಂದ ಇಷ್ಟು ಸ್ಥಾನಗಳಿಗೆ ಕುಸಿಯುತ್ತಿರಲಿಲ್ಲ ಎಂದರು.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಸರ್ಕಾರ ರಚನೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದು, ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ಮಾಡಿದ್ದು ಕಾಂಗ್ರೆಸ್‌ ಹೈಕಮಾಂಡ್‌ ಹೊರತು ನಾನಲ್ಲ. 37 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದರು, ಇದರಲ್ಲಿ ಟ್ರ್ಯಾಪಿಂಗ್‌ ಎಲ್ಲಿಂದ ಬಂತು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
 

Latest Videos
Follow Us:
Download App:
  • android
  • ios