Asianet Suvarna News Asianet Suvarna News

ಕಾಂಗ್ರೆಸ್‌ ಟ್ರ್ಯಾಪ್‌: ಹೆಚ್‌ಡಿಕೆ ಹೇಳಿಕೆಗೆ ಬಿಜೆಪಿಗರ ಅನುಕಂಪ

ಕಾಂಗ್ರೆಸ್‌ ಯಾರನ್ನೂ ಬೆಳೆಸಿದ ಉದಾಹರಣೆ ಇಲ್ಲ: ಸಚಿವ ಶೆಟ್ಟರ್‌| ತಡವಾಗಿ ಅರಿವಾಯ್ತೆಂದ ಪ್ರತಾಪ್‌ ಸಿಂಹ, ಮುನಿಸ್ವಾಮಿ, ಜೋಶಿ| ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದರಿಂದ ತನ್ನ ವರ್ಚಸ್ಸಿಗೆ ಧಕ್ಕೆ ಆಗಿದೆ: ಎಚ್‌.ಡಿ.ಕುಮಾರಸ್ವಾಮಿ| 

BJP Sympathy for HD Kumaraswamy Statement grg
Author
Bengaluru, First Published Dec 7, 2020, 8:45 AM IST

ಬೆಂಗಳೂರು(ಡಿ.07): ಕಾಂಗ್ರೆಸ್‌ ಸಹವಾಸ ಮಾಡಿ ಗೌರವ ಹಾಳು ಮಾಡಿಕೊಂಡೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಟ್ರ್ಯಾಪ್‌ಗೆ ಬಲಿಯಾದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಮುಖಂಡರಿಂದ ಅನುಕಂಪ ಹಾಗೂ ಬೆಂಬಲ ಎರಡೂ ವ್ಯಕ್ತವಾಗಿದೆ. ಕುಮಾರಸ್ವಾಮಿ ಅವರಿಗೆ ತಡವಾಗಿಯಾದರೂ ಬುದ್ಧಿ ಬಂತು ಎಂದು ಸಚಿವರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಪ್ರಹ್ಲಾದ್‌ ಜೋಶಿ, ಸಂಸದರಾದ ಪ್ರತಾಪ್‌ ಸಿಂಹ, ಎಸ್‌. ಮುನಿಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ ನೀಡಿದ ಹೇಳಿಕೆ ಬೆಂಬಲಿಸಿರುವ ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ ಗಾಂಧಿ ಕುಟುಂಬ ಬಿಟ್ಟು ಬೇರೆ ಯಾರನ್ನೂ ಬೆಳೆಸಿದ ಉದಾಹರಣೆ ಇಲ್ಲ. ಕುಮಾರಸ್ವಾಮಿ ಈಗ ಕಾಂಗ್ರೆಸ್‌ ನಂಬಿ ಮೋಸ ಹೋಗಿದ್ದಾಗಿ ಹೇಳುತ್ತಿರುವುದು ಸರಿಯಾಗೇ ಇದೆ ಎಂದು ಹೇಳಿದ್ದಾರೆ.

ಬಿಜೆಪಿ ಜತೆಗೆ ಇದ್ದಿದ್ದರೆ ಕುಮಾರಸ್ವಾಮಿ ಈಗಲೂ ಅಧಿಕಾರದಲ್ಲಿ ಇರುತ್ತಿದ್ದರು. ಅಷ್ಟಕ್ಕೂ ಜೆಡಿಎಸ್‌ ಮತ್ತು ಬಿಜೆಪಿ ‘ನ್ಯಾಚುರಲ್‌ ಅಲೈನ್ಸ್‌’. ಅವರ ಬೆಂಬಲ ನಾವು ಎಂದಿಗೂ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ತಡವಾಗಿ ಅರಿವಾಗಿದೆ: ಇನ್ನು ಕುಮಾರಸ್ವಾಮಿ ಅವರಿಗೆ ತಡವಾಗಿ ಜ್ಞಾನೋದಯವಾಗಿದೆ ಎಂದು ಪಂಚಾಯತ್‌ರಾಜ್‌ ಸಚಿವ ಈಶ್ವರಪ್ಪ, ಸಂಸದರಾದ ಎಸ್‌.ಮುನಿಸ್ವಾಮಿ, ಪ್ರತಾಪ್‌ ಸಿಂಹ ಹೇಳಿದ್ದಾರೆ. ಅವರಿಗೆ ಮೊದಲೇ ಜ್ಞಾನೋದಯ ಆಗಿ ನಮ್ಮೊಂದಿಗೆ ಕೈ ಜೋಡಿಸಿದ್ದರೆ ಸಿಎಂ ಆಗಿ ಮುಂದುವರೆಯಬಹುದಿತ್ತು ಎಂದು ಈಶ್ವರಪ್ಪ ಹೇಳಿದರೆ, ಬಿಜೆಪಿ ಜತೆಗಿದ್ದಾಗ ಅವರು ಮನೆ ಮಾತಾಗಿದ್ದರು, ಗ್ರಾಮ ವಾಸ್ತವ್ಯ, ಜನರ ಜೊತೆ ಬೆರೆಯುವ ಅವರ ನಡೆ ಹೆಸರು ತಂದಿತ್ತು ಎಂದಿದ್ದಾರೆ ಪ್ರತಾಪ್‌ ಸಿಂಹ.

ಬೆಳಗಾವಿ ಬೈಲೆಕ್ಷನ್‌ಗೆ ಸ್ಪರ್ಧೆ: ಜಗದೀಶ್ ಶೆಟ್ಟರ್ ಬಿಟ್ಟುಕೊಟ್ರು ಮಹತ್ವದ ಸುಳಿವು..!

ಮೈತ್ರಿ ಅನೈತಿಕ ಅಂತ ಹೇಳಿದ್ದೆ: ಡಾ.ಸುಧಾಕರ್‌

ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಂಬಂಧ ಅನೈತಿಕ. ಜನಾಭಿಪ್ರಾಯದ ವಿರುದ್ಧದ ಸರ್ಕಾರ ಎಂದು ನಾನು ಶಾಸಕನಾದ ಮೊದಲ ದಿನವೇ ಹೇಳಿದ್ದೆ. ಕುಮಾರಸ್ವಾಮಿ ಒಂದು ವರ್ಷ ಮಾತ್ರ ಮುಖ್ಯಮಂತ್ರಿ ಆಗಿದ್ದು ವಿಧಿಯಾಟ. ಮುಂದಿನ ದಿನಗಳಲ್ಲಾದರೂ ಅವರು ಕಾಂಗ್ರೆಸ್‌ನಿಂದ ದೂರ ಉಳಿದರೆ ಗೌರವ ಹೆಚ್ಚಾಗುತ್ತದೆ. ಕಾಂಗ್ರೆಸ್‌ ನಾಯಕರಿಗೂ ಇರುವ ಅಲ್ಪಸ್ವಲ್ಪ ಗೌರವ ಉಳಿಯುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ. ನಾನಿನ್ನೂ

ರಾಜಕೀಯದಲ್ಲಿ ಮುಗ್ಧ: ಭೈರತಿ

ರಾಜಕೀಯದಲ್ಲಿ ನಾನಿನ್ನೂ ಮುಗ್ಧ, ನಾನು ಕಾಂಗ್ರೆಸ್‌ ಟೀಂನಲ್ಲಿದ್ದೆನೇ ಹೊರತು ಸಿದ್ದರಾಮಯ್ಯ ಟೀಂನಲ್ಲಿ ಅಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಹೇಳಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಟೀಂ ತೋಡಿದ ಖೆಡ್ಡಾಗೆ ನಾನು ಬಲಿಯಾದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ನಾನಿನ್ನೂ ಮುಗ್ಧ, ಎಲ್ಲಾ ಅಧಿಕಾರ ಅನುಭವಿಸಿರುವ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಖೆಡ್ಡಾ ವಿಚಾರಕ್ಕೆ ಸಂಬಂಧಿಸಿ ಹೇಳಬೇಕಷ್ಟೆ. ನಾನು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೆ. ನಾನು ಬಂದ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದಿದ್ದು ಎಂದರು. ಈ ಮೂಲಕ ಕುಮಾರಸ್ವಾಮಿ ಆರೋಪಿಸಿದ ಸಿದ್ದರಾಮಯ್ಯ ಟೀಂಗೂ ನನಗೂ ಸಂಬಂಧ ಇಲ್ಲ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ಖೆಡ್ಡಾದಲ್ಲಿ ಬೀಳಿಸಿ ಅಳಿಸಿಹಾಕಿದರು; ಮುರಿದ ಮೈತ್ರಿಯ ಅಸಲಿ ಕಾರಣ ಬಿಚ್ಚಿಟ್ಟ HDK!

ಜತೆಗೆ, ನಾನೊಬ್ಬ ಅಮಾಯಕ, ಮುಗ್ಧ. ಈಗ ಬಿಜೆಪಿ ಸೇರಿ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಅನುಭವಿಸಿದ್ದಾರೆ. ಅವರು ಎಲ್ಲಾ ರೀತಿಯ ಅಧಿಕಾರ ಅನುಭವಿಸಿದ್ದರಿಂದ ಅವರಿಗೆ ಹೆಚ್ಚಿನ ಅನುಭವವಿದೆ ಎಂದೂ ಕಾಲೆಳೆದ ಅವರು, ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದ ಸತ್ಯ ಅವರಿಬ್ಬರು ನಾಯಕರಿಗಷ್ಟೇ ಗೊತ್ತು. ಇಬ್ಬರೂ ಸತ್ಯ ಹೇಳುತ್ತಿಲ್ಲ ಎಂದು ತಿಳಿಸಿದರು.

ಎಚ್‌ಡಿಕೆಗೆ ತಡವಾಗಿ ಜ್ಞಾನೋದಯ

ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದರಿಂದ ತನ್ನ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಮೊದಲೇ ಜ್ಞಾನೋದಯ ಆಗಿ ನಮ್ಮೊಂದಿಗೆ ಕೈ ಜೋಡಿಸಿದ್ದರೆ ಸಿಎಂ ಆಗಿ ಮುಂದುವರೆಯಬಹುದಿತ್ತು. ರಾಜಕಾರಣ ಎನ್ನುವುದು ಸರ್ಕಲ್‌ ಇದ್ದಂತೆ ಎಲ್ಲವೂ ತಿರುಗುತ್ತಿರುತ್ತದೆ ಎಂದು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. 
 

Follow Us:
Download App:
  • android
  • ios