ಬೆಂಗಳೂರು(ಅ.24): ಬಿಹಾರ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಹೇಳಿರುವ ಬಿಜೆಪಿ ವಿರುದ್ಧ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ.

ರಾಜ್ಯದಲ್ಲೂ ಜನರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ ‘ಧಮ್‌’ ಇದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ಗೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ‘ಪ್ರಾಣ ರಕ್ಷಕ ಕೊರೋನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವುದಾಗಿ ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ. ಅವರ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುತ್ತೀರಾ ನಳಿನ್‌ ಕುಮಾರ್‌ ಕಟೀಲ್‌ ಅವರೇ?’ ಎಂದು ಪ್ರಶ್ನಿಸಿದ್ದಾರೆ.

‘ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಅವರ ಮನವೊಲಿಸಿ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕೊರೋನಾದಿಂದ ಜನತೆ ಭೀತಿಗೆ ಒಳಗಾಗಿದ್ದಾರೆ. ಇವರಿಗೂ ಕೊರೋನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ ’ಧಮ್‌’ (ಇದು ನಿಮ್ಮದೇ ಭಾಷೆ) ನಿಮಗಿದೆಯೇ ಕಟೀಲ್‌ ಅವರೇ?’ ಎಂದು ಪ್ರಶ್ನಿಸಿದರು.

ನಳಿನ್‌ ಒಬ್ಬ ಕಾಡು ಮನುಷ್ಯ, ಅರಣ್ಯಕ್ಕೆ ಬಿಡಿ: ಸಿದ್ದು ವಾಗ್ದಾಳಿಗೆ ಉತ್ತರಿಸಲು ಕಟೀಲ್‌ ಹಿಂದೇಟು

ಕೊರೋನಾ ಹಂಚಿದ್ದೇ ಕೇಂದ್ರ- ಡಿಕೆಶಿ:

ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಮೊದಲು ಕೊರೋನಾ ಲಸಿಕೆ ತಯಾರು ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಲಿ. ದೇಶದ ಜನತೆಗೆ ಕೊರೋನಾ ಸೋಂಕನ್ನು ಹಂಚಿದ್ದೇ ಕೇಂದ್ರ ಸರ್ಕಾರ. ಇದೀಗ ಚುನಾವಣೆಗೆ ಲಸಿಕೆ ಹಾಗೂ ಕೊರೋನಾ ಬಳಸಿಕೊಳ್ಳುತ್ತಿದೆ. ಯಾವಾಗಲೋ ಲಸಿಕೆ ಕೊಡುವ ಮೊದಲು ಲಾಕ್‌ಡೌನ್‌ ವೇಳೆ ನೀಡಿದ ಭರವಸೆಗಳು ಏನಾಯ್ತು ಉತ್ತರ ಕೊಡಿ’ ಎಂದು ಪ್ರಶ್ನಿಸಿದರು.

‘ಚಾಲಕರು, ನೇಕಾರರು, ಸವಿತಾ ಸಮಾಜದವರಿಗೆ ಪರಿಹಾರ ನೀಡಿದ್ದೀರಾ? ಜನರ ತೆರಿಗೆಯಾದರೂ ಕಡಿಮೆ ಮಾಡಿದ್ದಾರಾ? ಜೀವ ಇದ್ದರೆ ಜೀವನ ಮೊದಲು ಅದನ್ನು ಮಾಡಲಿ. ಕೇಂದ್ರ ಸಚಿವರು ನಿಧನರಾದಾಗ ದೇಹವನ್ನು ಎತ್ತಿಕೊಂಡು ಹೋಗಿ ಬಿಸಾಕಿದರು. ಅವರ ಕುಟುಂಬಕ್ಕೂ ನೋಡಲು ಅವಕಾಶ ನೀಡಲಿಲ್ಲ. ಮೊದಲು ಮನುಷ್ಯರನ್ನು ಮನುಷ್ಯರನ್ನಾಗಿ ನೋಡಿ’ ಎಂದು ಕಿಡಿ ಕಾರಿದರು.