ಅನೈತಿಕವಾಗಿ ರಚನೆಯಾಗಿರುವ ರಾಜ್ಯ ಬಿಜೆಪಿ ಸರ್ಕಾರವು ಕೊರೋನಾ ಹೆಸರಿನಲ್ಲಿ ಬರೋಬ್ಬರಿ ಎರಡು ಸಾವಿರ ಕೋಟಿ ರು. ಲೂಟಿ ಹೊಡೆದಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆಪಾದನೆ ಮಾಡಿದ್ದಾರೆ. 

ಬೆಂಗಳೂರು (ಮೇ.24): ಅನೈತಿಕವಾಗಿ ರಚನೆಯಾಗಿರುವ ರಾಜ್ಯ ಬಿಜೆಪಿ ಸರ್ಕಾರವು ಕೊರೋನಾ ಹೆಸರಿನಲ್ಲಿ ಬರೋಬ್ಬರಿ ಎರಡು ಸಾವಿರ ಕೋಟಿ ರು. ಲೂಟಿ ಹೊಡೆದಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆಪಾದನೆ ಮಾಡಿದ್ದಾರೆ. ಸೋಮವಾರ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಮನುಷ್ಯತ್ವ ಇಲ್ಲದ ಭ್ರಷ್ಟ, ಬಡವರ ಶೋಷಕ ಸರ್ಕಾರವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು. ಸೆಪ್ಟೆಂಬರ್‌ನಲ್ಲಿ ನಡೆಯಬಹುದಾದ ಬಿಬಿಎಂಪಿ ಚುನಾವಣೆಯಲ್ಲೂ ಬಿಜೆಪಿಗೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.

ರಾಜ್ಯದ ಬಿಜೆಪಿ ಸರ್ಕಾರಕ್ಕೆ ಜನರು ಸಂಪೂರ್ಣ ಬೆಂಬಲ ನೀಡಿಲ್ಲ. 500 ಕೋಟಿ ರು. ಭ್ರಷ್ಟಾಚಾರದ ಹಣವನ್ನು ಖರ್ಚು ಮಾಡಿ ಹಣ, ಅಧಿಕಾರದ ಆಮಿಷ ಒಡ್ಡಿ 17 ಶಾಸಕರನ್ನು ಆಪರೇಷನ್‌ ಕಮಲ ಮಾಡಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದರು. ಅಂತಹ ಅನೈತಿಕ ಶಿಶುವಾಗಿರುವ ಈ ಬಿಜೆಪಿ ಸರ್ಕಾರದಲ್ಲಿ ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಅವರು ಜನರಿಂದ ಆಯ್ಕೆಯಾಗಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯಗೆ ಸಮನ್ಸ್, ವಿಚಾರಣೆಗೆ ಹಾಜರಾಗುವಂತೆ ಸೂಚನೆ

ರಾಜ್ಯದಲ್ಲಿ ಈವರೆಗೂ ಇಂತಹ ಭ್ರಷ್ಟಸರ್ಕಾರವನ್ನು ಯಾರೂ ನೋಡಿಲ್ಲ. 40% ಕಮಿಷನ್‌ ಪಡೆಯುತ್ತಿರುವುದಾಗಿ ಗುತ್ತಿಗೆದಾರರ ಸಂಘವೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದೆ. ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಪತ್ರ ಬರೆದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್‌ ಜಾರಕಿಹೊಳಿ ಅವರ ಪ್ರಕರಣವನ್ನೂ ಜನರು ನೋಡಿದ್ದಾರೆ. ಪಿಎಸ್‌ಐ ನೇಮಕಾತಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸೇರಿ ಯಾವುದರಲ್ಲೂ ಲೂಟಿ ಹೊಡೆಯುವುದು ಬಿಟ್ಟಿಲ್ಲ. ಅಷ್ಟೇಕೆ ಕೊರೋನಾ ಸಮಯದಲ್ಲಿ ಔಷಧಿ ಸಾಮಗ್ರಿ, ಚಿಕಿತ್ಸೆ ಹೆಸರಿನಲ್ಲೂ ಬಿ.ಎಸ್‌. ಯಡಿಯೂರಪ್ಪ, ಡಾ.ಕೆ. ಸುಧಾಕರ್‌, ಬಿ. ಶ್ರೀರಾಮುಲು 2 ಸಾವಿರ ಕೋಟಿ ರು. ಲೂಟಿ ಹೊಡೆದಿದ್ದಾರೆ. ಈ ಬಗ್ಗೆ ಸದನದಲ್ಲೇ ಪ್ರಸ್ತಾಪ ಮಾಡಿದ್ದೇನೆ ಎಂದರು.

ಬಿಬಿಎಂಪಿ ಮಾಜಿ ಸದಸ್ಯ ಎನ್‌. ನಾಗರಾಜು ಮಾತನಾಡಿ, ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದೇನೆ. ನನ್ನ ಜತೆಗೆ 300 ಮಂದಿ ಬಿಜೆಪಿ ಕಾರ್ಯಕರ್ತರೂ ಸೇರ್ಪಡೆಯಾಗುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆ ಹಾಗೂ 2022ರ ಬಿಬಿಎಂಪಿ ಚುನಾವಣೆಯಲ್ಲಿ ಸ್ಪಷ್ಟಬಹುಮತದಿಂದ ಕಾಂಗ್ರೆಸ್‌ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್‌, ಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಶಾಸಕಿ ಸೌಮ್ಯಾರೆಡ್ಡಿ ಸೇರಿ ಹಲವರು ಹಾಜರಿದ್ದರು.

ಪಕ್ಷದ ವೇದಿಕೆಯಲ್ಲಿ ಸಿಎಂ ಆಯ್ಕೆ ಚರ್ಚೆ: ಎರಡು ವರ್ಷದಿಂದ ಪಕ್ಷ ಕಟ್ಟಿದ್ದೇನೆ. ಈಗ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸಿಎಂ ಆಯ್ಕೆಯಂತಹ ವಿಚಾರವನ್ನೆಲ್ಲಾ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಚರ್ಚೆ ಮಾಡುವ ವಿಷಯ ಅಲ್ಲ’ ಎಂದರು.

ಡಿಕೆಶಿ vs ಸಿದ್ದರಾಮಯ್ಯ: ಎಂಎಲ್‌ಸಿ ಟಿಕೆಟ್‌ ಬಡಿದಾಟದಲ್ಲಿ ಗೆಲುವು ಯಾರಿಗೆ?

ಜೈರಾಮ್‌ಗೆ ರಾಜ್ಯಸಭೆ ಟಿಕೆಟ್‌: ವಿಧಾನಪರಿಷತ್‌ ಹಾಗೂ ರಾಜ್ಯಸಭೆಗೆ ನಾನು ಹಾಗೂ ಡಿ.ಕೆ. ಶಿವಕುಮಾರ್‌ ಪಟ್ಟಿಯನ್ನು ನೀಡಿ ಬಂದಿದ್ದೇವೆ. ರಾಜ್ಯಸಭೆ ಸ್ಥಾನ ಬಹುತೇಕ ಜೈರಾಮ್‌ ರಮೇಶ್‌ ಅವರಿಗೆ ಅಂತಿಮವಾಗಬಹುದು ಎಂದು ಸಿದ್ದರಾಮಯ್ಯ ಹೇಳಿದರು.