ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಬಿಜೆಪಿ ಹಗರಣ ತನಿಖೆ: ಸಿದ್ದರಾಮಯ್ಯ
ಮಾತೆತ್ತಿದರೆ ತಮ್ಮ ಭಾಷದಲ್ಲಿ ಧಮ್ ಇದ್ದರೆ, ತಾಕತ್ ಇದ್ದರೆ ಎಂಬ ಮಾತನ್ನು ಆಡುವ ಬೊಮ್ಮಾಯಿ ಅವರೇ, ನಿಮಗೆ ಧಮ್ ಹಾಗೂ ತಾಕತ್ತು ಇದ್ದರೆ ನಿಮ್ಮ ಪಕ್ಷ ಕೊಟ್ಟ ಪ್ರಣಾಳಿಕೆಗಳಲ್ಲಿ ಎಷ್ಟು ಈಡೇರಿಸಿದ್ದೀರಿ ಎಂಬ ಕುರಿತು ಚರ್ಚೆಗೆ ಬನ್ನಿ. ನಾವು ಚರ್ಚೆಗೆ ಮುಕ್ತವಾಗಿದ್ದೇವೆ. ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ.
ಬಾಗಲಕೋಟೆ(ಜ.19): ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದನಂತರ ರಾಜ್ಯದಲ್ಲಿ ಸಚಿವರಾದಿಯಾಗಿ ನಡೆದಿರುವ ಹಗರಣಗಳು ಹಾಗೂ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆಗಾಗಿ ಕಮಿಷನ್ ರಚನೆ ಮಾಡುವುದಾಗಿ ತಿಳಿಸಿದ ಸಿದ್ದರಾಮಯ್ಯ ಸಚಿವ ನಿರಾಣಿ ಸೇರಿದಂತೆ ಯಾರೇ ತಪ್ಪು ಮಾಡಿದ್ದರೂ ಸಹ ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಾಗಲಕೋಟೆಯ ಕಾಳಿದಾಸ ಮೈದಾನದಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ಹಾಗೂ ಎಪಿಎಂಸಿ ಕಾಯ್ದೆ ಮರಳಿ ಪಡೆಯುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಬಿಜೆಪಿ ಕಿತ್ತೆಸೆಯಬೇಕು:
ತಮ್ಮ ಭಾಷಣದುದ್ದಕ್ಕೂ ಪಕ್ಷದ ಪ್ರಣಾಳಿಕೆಯಲ್ಲಿನ ಘೋಷಿತ ಎರಡು ಕಾರ್ಯಕ್ರಮಗಳಾದ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ .2 ಸಾವಿರ ಹಣ ನೀಡುವ ಪ್ರಸ್ತಾಪವನ್ನು ಸಮಾವೇಶದಲ್ಲಿ ಮತ್ತೆ ಮತ್ತೆ ಹೇಳಿದ ಸಿದ್ದರಾಮಯ್ಯ, ಎಷ್ಟೇ ಕಷ್ಟವಾದರೂ ಸಹ ಈ ಎರಡು ಯೋಜನೆಗಳನ್ನು ಜಾರಿಗೆ ತರುವ ಸಂಕಲ್ಪ ಮಾಡಿದ್ದಾಗಿ ಹೇಳಿದರಲ್ಲದೇ, ಎರಡೂ ಯೋಜನೆಯಿಂದ ಒಂದು ಕುಟುಂಬಕ್ಕೆ ವಾರ್ಷಿಕ .36 ಸಾವಿರಕ್ಕೂ ಹೆಚ್ಚು ಆರ್ಥಿಕ ನೆರವು ದೊರೆಯಲಿದೆ. ಇದನ್ನು ಮಹಿಳೆಯರು ಅರ್ಥ ಮಾಡಿಕೊಂಡು ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಮನವಿ ಮಾಡಿದರು.
ನನಗೆ ಮೋದಿ ಕಂಡರೆ ಭಯವಿಲ್ಲ, ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ: ಸಿದ್ದರಾಮಯ್ಯ
ಧಮ್ ಇದ್ದರೆ ಚರ್ಚೆಗೆ ಬರಲಿ:
ಮಾತೆತ್ತಿದರೆ ತಮ್ಮ ಭಾಷದಲ್ಲಿ ಧಮ್ ಇದ್ದರೆ, ತಾಕತ್ ಇದ್ದರೆ ಎಂಬ ಮಾತನ್ನು ಆಡುವ ಬೊಮ್ಮಾಯಿ ಅವರೇ, ನಿಮಗೆ ಧಮ್ ಹಾಗೂ ತಾಕತ್ತು ಇದ್ದರೆ ನಿಮ್ಮ ಪಕ್ಷ ಕೊಟ್ಟ ಪ್ರಣಾಳಿಕೆಗಳಲ್ಲಿ ಎಷ್ಟು ಈಡೇರಿಸಿದ್ದೀರಿ ಎಂಬ ಕುರಿತು ಚರ್ಚೆಗೆ ಬನ್ನಿ. ನಾವು ಚರ್ಚೆಗೆ ಮುಕ್ತವಾಗಿದ್ದೇವೆ. ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.
ನೀರಾವರಿಗಾಗಿ 2 ಲಕ್ಷ ಕೋಟಿ:
ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಮಾತು ಕೊಟ್ಟಂತೆ ನೀರಾವರಿಗಾಗಿ .50 ಸಾವಿರ ಕೋಟಿ ಹಣವನ್ನು ವ್ಯಯ ಮಾಡಿದ್ದಾಗಿ ತಿಳಿಸಿದ ಸಿದ್ದರಾಮಯ್ಯ, ಪಕ್ಷ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ .2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಿದ್ದೇವೆ. ಕೃಷ್ಣಾ ಮೇಲ್ದಂಡೆ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಿದ್ದೇವೆ. ಇದು ನಮ್ಮ ವಚನವಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಸಮ್ಮತ ಪರಿಹಾರ ಹಾಗೂ ಅಗತ್ಯವಾದ ಪುನರ್‌ವಸತಿ ಮತ್ತು ಪುನರ್ ನಿರ್ಮಾಣವನ್ನು ಮಾಡಲಿದ್ದೇವೆ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಆದಾಯ ದುಪ್ಪಟ್ಟು ಮಾಡುವ ಮಾತುಗಳನ್ನಾಡಿ, ಕೇವಲ ಶೋಷಣೆ ಮಾಡಿವೆ ಎಂದು ಆರೋಪಿಸಿದ ಸಿದ್ದರಾಮಯ್ಯ 2016ರ ರಿಂದ ಎಷ್ಟುರೈತರಿಗೆ ಆದಾಯ ದುಪ್ಪಟ್ಟು ಮಾಡಿದ್ದಾರೆ ಎಂದು ಹೇಳಿ, ರೈತರ ಬದುಕು ಮತ್ತಷ್ಟುದುರ್ಬಲಗೊಳ್ಳುವ ರೀತಿಯಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ತೊಂದರೆ ನೀಡಿದ್ದಾರೆ ಎಂದರು. ನೀಡಿದ ಯಾವ ಭರವಸೆಗಳು ಈಡೇರಿಸಿಲ್ಲ. ಬರಿ ಮಾತುಗಳಲ್ಲಿಯೇ 9 ವರ್ಷ ಆಡಳಿತ ನಡೆಸಿದ ಮೋದಿ ಅವರಿಗೆ ಯಾವ ನೈತಿಕತೆ ಇದೆ ಎಂದರು.
ಸಂವಿಧಾನ ತೆಗೆಯುವ ಹುನ್ನಾರ:
ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಮಾತನಾಡಿ, ಪ್ರತಿ ಹಂತದಲ್ಲಿಯೂ ಖಾಸಗಿ ವ್ಯಕ್ತಿಗಳಿಗೆ ಸಹಾಯ ಮಾಡುವ ಪ್ರಧಾನಿ ಮೋದಿ ಬಂಡವಾಳ ಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಶ್ರೀಮಂತರ ಪರ ಇರುವ ಮೋದಿ ಹಾಗೂ ಬಿಜೆಪಿ ಅವರು, ಬರುವ ದಿನಗಳಲ್ಲಿ ಸಂವಿಧಾನವನ್ನೆ ತೆಗೆಯುವ ಹುನ್ನಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದಿನ ಯುಪಿಎ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ, ಆದರೆ, ಸದ್ಯ ಮೋದಿ ನೇತೃತ್ವದ ಆಡಳಿತದಲ್ಲಿ ಆಗಿರುವುದಾದರು ಏನು ಎಂದರಲ್ಲದೇ, ಸ್ವಯಂಘೋಷಿತ ವಿಶ್ವಗುರು ಆಗಲು ಹೊರಟಿರುವ ಮೋದಿ ಅವರು, ತಮ್ಮ ಮನ್ ಕೀ ಬಾತ್ ನಲ್ಲಿ ಯಾವತ್ತಾದರೂ ರೈತರ ಬಗ್ಗೆ, ಕಾರ್ಮಿಕರ ಬಗ್ಗೆ, ಉದ್ಯೋಗ ಸೃಷ್ಟಿಬಗ್ಗೆ ಮಾತನಾಡಿದ್ದಾರೆಯೇ ಎಂದು ಹೇಳಿದರು.
ಕರ್ನಾಟಕದಲ್ಲಿ 40 % ಲಂಚ ನೀಡಿಯೇ ಉಸಿರು ಪಡೆಯುವಂತೆ ಸ್ಥಿತಿ: ರಾಜ್ಯ ಉಸ್ತುವಾರಿ ಸುರ್ಜೇವಾಲಾ
ಕೃಷ್ಣಾ ಮೇಲ್ದಂಡೆ ಯೋಜನೆ ನಮ್ಮ ಸಾಧನೆ:
ಮಾಜಿ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಹೇಳಿದರಲ್ಲದೇ, ಅಣೆಕಟ್ಟು ನಿರ್ಮಾಣ, ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿದ್ದು ಕಾಂಗ್ರೆಸ್ ಪಕ್ಷ. ಸಂತ್ರಸ್ತರಿಗೆ ಪರಿಹಾರ ಧನ ಹಾಗೂ ಪುನರ್‌ವಸತಿ ಕಲ್ಪಿಸಿದ್ದು ನಾವು ಎಂದು ಹೇಳಿದರಲ್ಲದೇ, ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದನಂತರ ಸಂತ್ರಸ್ಥರ ಸಮಸ್ಯೆಗಳಿಗೆ ಧ್ವನಿಯಾಗುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ, ವಿಜಯಾನಂದ ಕಾಶಪ್ಪನವರ, ಕೆ.ಎಚ್.ಮುನಿಯಪ್ಪ, ಎಸ್.ಆರ್.ಪಾಟೀಲ, ಎಐಸಿಸಿ ಕಾರ್ಯದರ್ಶಿ ಕ್ರಿಷ್ನೋಫರ್ ತಿಲಕ್, ಮಾಜಿ ಸಚಿವರಾದ ಎಚ್.ವೈ.ಮೇಟಿ, ಬಸವರಾಜ ರಾಯರಡ್ಡಿ, ಆರ್.ಬಿ.ತಿಮ್ಮಾಪುರ, ಬಿ.ಬಿ.ಚಿಮ್ಮನಕಟ್ಟಿ, ಶಾಸಕರಾದ ಆನಂದ ನ್ಯಾಮಗೌಡ, ಮಾಜಿ ಸಂಸದರಾದ ಐ.ಜಿ.ಸನದಿ, ಮುಖಂಡರಾದ ಪ್ರಕಾಶ ರಾಠೋಡ, ಜೆ.ಟಿ.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.