'HDK ಸ್ಟಾರ್ ಹೋಟೆಲ್‌ನಲ್ಲಿ ಇರ್ತಿದ್ರು, ಅಲ್ಲಿಗೆ ಯಾರನ್ನು ಬಿಡ್ತಿರಲಿಲ್ಲ'
ಮೈತ್ರಿ ಅವಧಿಯಲ್ಲಿ ಎಚ್ ಡಿಕೆ ಮುಖ್ಯಮಂತ್ರಿಯಾಗಿದ್ದಾಗ ಸ್ಟಾರ್ ಹೋಟೆಲ್‌ನಲ್ಲಿಯೇ ಇರುತ್ತಿದ್ದರು. ಅಲ್ಲಿಗೆ ಯಾರನ್ನು ಬಿಡುತ್ತಿರಲಿಲ್ಲ ಎಂದು ಖಡಕ್ ಟಾಂಗ್ ನೀಡಲಾಗಿದೆ.
ಬೆಳಗಾವಿ (ಡಿ.06): ‘ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ರಾಜಕೀಯದ ಅನುಕೂಲಕ್ಕೆ ತಕ್ಕಂತೆ ಅವರು ಹೇಳಿಕೆ ಕೊಡುತ್ತಿರುತ್ತಾರೆ. ಅವರ ಮಾತಿನಲ್ಲಿ ಸತ್ಯ ಇರಲ್ಲ. ಜೆಡಿಎಸ್ ರಾಜ್ಯದಲ್ಲಿ ಗೆದ್ದಿದ್ದು ಕೇವಲ 37 ಸ್ಥಾನ. ಕಾಂಗ್ರೆಸ್ ಗೆದ್ದಿದ್ದು 80 ಸ್ಥಾನ. ಮುಖ್ಯಮಂತ್ರಿ ಮಾಡಿದ್ದು ಯಾರಿಗೆ?’
ಹನ್ನೆರಡು ವರ್ಷಗಳ ರಾಜಕೀಯ ಜೀವನದಲ್ಲಿ ಗಳಿಸಿದ ಹೆಸರನ್ನು ‘ಸಿದ್ದು ಗ್ಯಾಂಗ್ ಹಾಳು ಮಾಡಿತು’ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ಹೀಗೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜಕೀಯದಿಂದಲೇ ಹೊರಟು ಹೋದರಾ? ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕಣ್ಣೀರು ಹಾಕುವುದು ದೇವೇಗೌಡರ ಮನೆತನದ ಸಂಸ್ಕೃತಿ. ಅದು ಹೊಸತೇನಲ್ಲ. ಒಳ್ಳೆಯದು, ಕೆಟ್ಟದ್ದು ಎರಡಕ್ಕೂ, ಕೆಲವೊಮ್ಮೆ ಇನ್ಯಾರನ್ನೋ ಓಲೈಸಲು, ಇನ್ಯಾರನ್ನೋ ನಂಬಿಸಲೂ ಕಣ್ಣೀರು ಹಾಕುತ್ತಾರೆ. ಆ ಕಣ್ಣೀರಿಗೆ ಬೆಲೆ ಇಲ್ಲ. ದೇವೇಗೌಡರ ಕುಟುಂಬ ಯಾರನ್ನೂ ಬೆಳೆಸುವುದಿಲ್ಲ. ಅವರ ಕುಟುಂಬದವರೇ ಬೆಳೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಖೆಡ್ಡಾದಲ್ಲಿ ಬೀಳಿಸಿ ಅಳಿಸಿಹಾಕಿದರು; ಮುರಿದ ಮೈತ್ರಿಯ ಅಸಲಿ ಕಾರಣ ಬಿಚ್ಚಿಟ್ಟ HDK! .
‘ಕಾಂಗ್ರೆಸ್ ಶಾಸಕರಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದೆ’ ಎಂಬ ಹೇಳಿಕೆಗೂ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಅವರೇನು ಮನೆಯಿಂದ ಕೊಟ್ಟರಾ ಎಂದು ಪ್ರಶ್ನಿಸಿದರು. ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದರಿಂದ ಅನುದಾನ ಕೊಟ್ಟಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಅನುದಾನ ಕೊಟ್ಟಿದ್ದೆ. ಅದು ಜನರ ತೆರಿಗೆ ಹಣ. ಅದರಲ್ಲಿ ಏನ್ ದೊಡ್ಡಸ್ಥಿಕೆ ಇದೆ? ಸಮ್ಮಿಶ್ರ ಬಿದ್ದು ಹೋಗಲಿ ಎಂದು ನಾನು ಅಮೆರಿಕಗೆ ಹೋದೆ ಎಂದು ಕುಮಾರಸ್ವಾಮಿಯೇ ಹೇಳಿಕೆ ನೀಡಿದ್ದಾರೆ. ಅದನ್ಯಾರು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು ಸಿದ್ದು.
ಹೋಟೆಲ್ ಆಡಳಿತ: ‘ಸಿದ್ದರಾಮಯ್ಯ ಕದ್ದು ಮುಚ್ಚಿ ಭೇಟಿಯಾಗುತ್ತಾರೆ’ ಎಂಬುದನ್ನು ಶೀಘ್ರವೇ ಬಹಿರಂಗ ಪಡಿಸುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೂ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ, ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡಬಾರದು. ಅಷ್ಟೊಂದು ಬೇಜವಾಬ್ದಾಯಿಂದ ಮಾತನಾಡುತ್ತಾರೆ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 12 ತಿಂಗಳು ಅಧಿಕಾರ ನಡೆಸಿದ್ದಾರೆ. ಆದರೆ ಇವರು ಆಡಳಿತ ನಡೆಸಿದ್ದು ಸ್ಟಾರ್ ಹೋಟೆಲ್ ನಿಂದ. ಹೋಟೆಲ್‌ನಲ್ಲಿ ಕುಳಿತು ಸರ್ಕಾರ ನಡೆಸಿದರೆ ಶಾಸಕರ ವಿಶ್ವಾಸ ಗಳಿಸಲು ಹೇಗೆ ಸಾಧ್ಯ? ಶಾಸಕರ ಕೈಗೆ ಸಿಗುವುದಿಲ್ಲ.
ಕಷ್ಟ-ಸುಖ ಕೇಳುವುದಿಲ್ಲ. ಆ ಹೋಟೆಲ್‌ಗೆ ಶಾಸಕರನ್ನೂ ಬಿಡುವುದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಹೋಟೆಲ್‌ನಿಂದ ಯಾರಾದರೂ ಆಡಳಿತ ನಡೆಸಿರುವುದು ನೋಡಿದ್ದೀರಾ? ಶಾಸಕರೊಂದಿಗೆ ಅಸಹಕಾರ, ಭೇಟಿ ಆಗದಿರುವುದೇ ಸರ್ಕಾರ ಉರುಳಲು ಕಾರಣ ಎಂದು ಹರಿಹಾಯ್ದರು. ಜತೆಗೆ ಕುಮಾರಸ್ವಾಮಿ ಅವರಿಗೆ ಒಳ್ಳೆಯ ಹೆಸರು ಇದ್ದರೆ ತಾನೇ ಹಾಳಾಗೋದು ಎಂದು ತಿರುಗೇಟು ನೀಡಿದರು.