ಕರ್ನಾಟಕದಲ್ಲೂ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದು, ಆ ಕಾರಣದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುವಂತಾಗಿದೆ ಎಂಬ ಸತ್ಯ ಈಗ ಬಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರು (ಜು.25): ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲೂ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದು, ಆ ಕಾರಣದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುವಂತಾಗಿದೆ ಎಂಬ ಸತ್ಯ ಈಗ ಬಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತಗಳ್ಳತನ ಕುರಿತ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ವಾದವನ್ನು ಪುಷ್ಟೀಕರಿಸಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶ ನಮಗೆ ಅಚ್ಚರಿಯನ್ನುಂಟು ಮಾಡಿದ್ದಲ್ಲದೆ, ಈ ಫಲಿತಾಂಶ ಹಲವು ಅನುಮಾನಗಳನ್ನು ಕೂಡ ಹುಟ್ಟು ಹಾಕಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿರುವುದರಿಂದಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗುವಂತಾಗಿತ್ತು ಎನ್ನುವ ಸತ್ಯ ಈಗ ಬಯಲಾಗುತ್ತಿದೆ ಎಂದಿದ್ದಾರೆ.

ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗ ನಡೆಸಿರುವ ಅಕ್ರಮಗಳ ದಾಸ್ತಾನನ್ನು ಒಂದೊಂದಾಗಿ ಬಯಲಿಗೆಳೆಯುತ್ತಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಬಗ್ಗೆಯೂ ವಿವರಗಳನ್ನು ನೀಡಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಚುನಾವಾಣಾ ಆಯೋಗ ಅಕ್ರಮ ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಏಕಾಏಕಿ ಹೊಸ ಮತದಾರರ ಸೇರ್ಪಡೆ ಮತ್ತು ಹಳೇ ಮತದಾರರ ಹೆಸರು ರದ್ದಾಗಿರುವುದರ ಬಗ್ಗೆ ನಮ್ಮ ಕಾರ್ಯಕರ್ತರು ಹಿಂದೆಯೇ ದೂರುಗಳನ್ನು ನೀಡಿದ್ದರು ಎಂದು ವಿವರಿಸಿದ್ದಾರೆ.

ಮೋದಿ ಅವರ ಚುನಾವಣಾ ಗೆಲುವುಗಳಿಗೆ ಅವರ ಜನಪ್ರಿಯತೆಯಾಗಲಿ, ಬಿಜೆಪಿ ಸರ್ಕಾರದ ಸಾಧನೆಗಳಾಗಲಿ ಕಾರಣವಲ್ಲ. ಅದು ಚುನಾವಣಾ ಆಯೋಗದ ಮೂಲಕ ನಡೆಸಿದ ಮತಗಳ್ಳತನವೇ ಕಾರಣ ಎನ್ನುವ ಸತ್ಯ ಈಗ ಬಯಲಾಗುತ್ತಿದೆ. ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಕುರಿತು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.