ನಕಲಿ ಗಾಂಧಿಗಳು ಎಂದರೆ ಯಾರು?: ಸಿಎಂ ಬೊಮ್ಮಾಯಿಗೆ ಸಿದ್ದು ತಿರುಗೇಟು
ಬೊಮ್ಮಾಯಿ ಅವರಿಗೆ ಗಾಂಧೀಜಿ ಬಗ್ಗೆಯೂ ಗೊತ್ತಿಲ್ಲ, ಗೋಡ್ಸೆ ಬಗ್ಗೆಯೂ ಗೊತ್ತಿಲ್ಲ ಎಂದು ಕಿಡಿಕಾರಿದ ಸಿದ್ದರಾಮಯ್ಯ
ನಂಜನಗೂಡು(ಅ.03): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ನಕಲಿ ಗಾಂಧಿಗಳು’ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಹರಿಹಾಯ್ದಿದ್ದಾರೆ. ಗಾಂಧೀಜಿ ಕೊಂದವರಿಂದ, ಗೋಡ್ಸೆ ಮೆರವಣಿಗೆ ಮಾಡಿದವರಿಂದ ಈ ಮಾತು ಕೇಳಬೇಕಾ? ನಕಲಿ ಗಾಂಧಿಗಳು ಅಂದರೆ ಯಾರು? ಎಂದು ತಿರುಗೇಟು ನೀಡಿದ್ದಾರೆ. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬೊಮ್ಮಾಯಿ ಅವರಿಗೆ ಗಾಂಧೀಜಿ ಬಗ್ಗೆಯೂ ಗೊತ್ತಿಲ್ಲ, ಗೋಡ್ಸೆ ಬಗ್ಗೆಯೂ ಗೊತ್ತಿಲ್ಲ ಎಂದು ಕಿಡಿಕಾರಿದರು.
ನಕಲಿ ಗಾಂಧಿವಾದಿಗಳು ಬೇಲ್ ಮೇಲಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲೂ ಅನೇಕರು ಬೇಲ್ ಮೇಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಆರು ಮಂದಿ ಮಂತ್ರಿಗಳು ಯಾಕೆ ಕೋರ್ಚ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ? ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿರಲಿಲ್ಲವೇ? ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬೇಲ್ ಮೇಲೆ ತಾನೆ ಹೊರಗಿರೋದು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಟ್ಟೆಯಲ್ಲಿ ನೊಣ ಇದೆ ಅಂತ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
'ಸಿದ್ದು ಮುಸ್ಲಿಮರಿಗೆ ಹೀರೋ, ಹಿಂದೂಗಳಿಗೆ ವಿಲನ್'
ಸರ್ಕಾರ ಕಿತ್ತೊಗೆಯಬೇಕು:
ರಾಜ್ಯದಲ್ಲಿ ಲೂಟಿಯಲ್ಲಿ ತೊಡಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಒಂದೇ ಒಂದು ಮನೆಯನ್ನೂ ಬಡವರಿಗೆ ಮಂಜೂರು ಮಾಡಿಲ್ಲ. ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ. ಕಾಂಗ್ರೆಸ್ ಪಾದಯಾತ್ರೆಯಿಂದ ಅವರು ವಿಚಲಿತರಾಗಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.