ಬಿಜೆಪಿಯ ಸಬ್ ಕಾ ಸಾಥ್‌ನಲ್ಲಿ ಮುಸ್ಲಿಂ, ಕ್ರೈಸ್ತರು, ದಲಿತರಿದ್ದಾರಾ?: ಸಿದ್ದರಾಮಯ್ಯ
ಬಿಜೆಪಿ ಮೇಲ್ಜಾತಿ, ಸಿರಿವಂತರ ಪರವಾಗಿ ಬಡವರ ವಿರೋಧಿ| ಇಂಥ ಸರ್ಕಾರ ಇರಬಾರದು, ಬಡವ ಹಾಗೂ ಶೋಷಿತರನ್ನು ನಿರ್ಲಕ್ಷಿಸುವ ಇವರನ್ನು ಅಧಿಕಾರದಿಂದ ಕೆಳಗಿಳಿಸಲು ಉಪಚುನಾವಣೆಯ ಫಲಿತಾಂಶ ಪೂರಕ| ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಸಿದ್ದರಾಮಯ್ಯ|
ಬಸವಕಲ್ಯಾಣ(ಏ.13): ಬಿಜೆಪಿಯ ಸಬ್ ಕಾ ಸಾಥ್‌ನಲ್ಲಿ ಮುಸ್ಲಿಂ, ಕ್ರೈಸ್ತರು, ದಲಿತರಿದ್ದಾರಾ. ಬಿಜೆಪಿ ಮೇಲ್ಜಾತಿ, ಸಿರಿವಂತರ ಪರವಾಗಿದ್ದು ಬಡವರ ವಿರೋಧಿಯಾಗಿದೆ. ನೀವೆಲ್ಲ ಸ್ವಾಭಿಮಾನಿಯಾಗಿದ್ರೆ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಸಸ್ತಾಪೂರ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರವಧಿಯಲ್ಲಿ ಬಡವರಿಗಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ಈ ಸರ್ಕಾರ ನಿಲ್ಲಿಸಿದ್ದು, ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತರ ಏಳ್ಗೆಯನ್ನು ಸಹಿಸದ ಪಕ್ಷ ಬಿಜೆಪಿಯಾಗಿದೆ ಎಂದು ದೂರಿದ್ದಾರೆ.
ರೈತರ ನಿರ್ಲಕ್ಷ್ಯ:
ದೇಶದ ಶೇ.65ರಷ್ಟು ಜನ ಗ್ರಾಮೀಣರನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ದೆಹಲಿಯಲ್ಲಿ ಲಕ್ಷಾಂತರ ಗ್ರಾಮೀಣ ರೈತರು ಧರಣಿ ನಡೆಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿದೆ. ಪ್ರಧಾನಿ ಮೋದಿ ಧರಣಿ ನಿರತರನ್ನು ಮಾತನಾಡಿಸಿಯೂ ಇಲ್ಲ. ರೈತರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸರ್ಕಾರ ತಲೆಕೆಡಿಸಿಕೊಳ್ತಿಲ್ಲ ಎಂದು ಆರೋಪಿಸಿದ್ದಾರೆ.
ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಸಿಎಂ ಬಿಎಸ್‌ವೈಗೆ ಮಹತ್ವದ ಸಲಹೆ ನೀಡಿದ ಸಿದ್ದರಾಮಯ್ಯ
ಅಧಿಕಾರ ಶಾಶ್ವತವಲ್ಲ:
ಸಾರಿಗೆ ನೌಕರರು ಕಳೆದ 6 ದಿನಗಳಿಂದ ಚಳವಳಿ ಮಾಡುತ್ತಿದ್ದರೂ ಕೇಳುತ್ತಿಲ್ಲ. ಎಸ್ಮಾ ಜಾರಿ, ವರ್ಗಾವಣೆ, ವಜಾದ ಬೆದರಿಕೆಯೊಡ್ಡಿ ನೌಕರರನ್ನು ಅತಂತ್ರಗೊಳಿಸುವ ತಂತ್ರ ಸರಿಯಲ್ಲ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಯಡಿಯೂರಪ್ಪ ಅರಿತುಕೊಳ್ಳಬೇಕು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಮಗನ ಜೊತೆ ಸೇರಿ ರಾಜ್ಯದ ತೆರಿಗೆ ಹಣ ಲೂಟಿ ಹೊಡೆದಿದ್ದಾರೆ. ಅನೈತಿಕವಾಗಿ ಸರ್ಕಾರ ರಚಿಸಿರುವ ಇವರು 17 ಎಂಎಲ್‌ಎಗೆ ತಲಾ 30 ಕೋಟಿ ರು, ನೀಡಿ ಖರೀದಿಸಿ ಸರ್ಕಾರ ರಚಿಸಿದ್ದಾರೆ. ಉಪಚುನಾವಣೆಗಳಲ್ಲಿಯೂ ತಲಾ 50 ಕೋಟಿ ರು. ಖರ್ಚು ಮಾಡಿದ್ದಾರೆ. ಒಟ್ಟಾರೆ ಒಂದೂವರೆ ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡಿದ್ದಾರೆ. ಇದು ಯಾರ ದುಡ್ಡು, ರಾಜ್ಯದ ಜನತೆಯ ದುಡ್ಡು ಎಂದು ಆರೋಪಿಸಿದ್ದಾರೆ.
ಇಂಥ ಸರ್ಕಾರ ಇರಬಾರದು, ಬಡವ ಹಾಗೂ ಶೋಷಿತರನ್ನು ನಿರ್ಲಕ್ಷಿಸುವ ಇವರನ್ನು ಅಧಿಕಾರದಿಂದ ಕೆಳಗಿಳಿಸಲು ಉಪಚುನಾವಣೆಯ ಫಲಿತಾಂಶ ಪೂರಕವಾಗಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.