ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಸಿಎಂ ಬಿಎಸ್‌ವೈಗೆ ಮಹತ್ವದ ಸಲಹೆ ನೀಡಿದ ಸಿದ್ದರಾಮಯ್ಯ
ಕೊರೋನಾ ಹೆಚ್ಚಳವಾಗುತ್ತಿರುವುದರಿಂದ ರಾಜ್ಯದಲ್ಲಿ ಲಾಕ್‌ಡೌನ್ ಮಾತುಗಳುಗಳು ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟಿದ್ದಾರೆ.
ಬೀದರ್, (ಏ.12): ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಲಾಕ್‌ಡೌನ್ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ರೆ ಲಾಕ್‌ಡೌನ್ ಅನಿವಾರ್ಯ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಲಾಕ್ಡೌನ್ ಮಾಡುವುದಾದರೆ ಒಂದು ಕೋಟಿ ಬಡ ಕುಟುಂಬದವರ ಖಾತೆಗೆ ತಲಾ 10 ಸಾವಿರ ರೂಪಾಯಿ ಜಮಾ ಮಾಡಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಸರ್ವ ಪಕ್ಷಗಳ ಸಭೆ ಕರೆದ ಸಿಎಂ, ಲಾಕ್‌ಡೌನ್ ಆಗುತ್ತಾ?
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಮಾಡುವುದರಿಂದ ಕೂಲಿಕಾರ್ಮಿಕರು, ಬಡವರಿಗೆ ಸಮಸ್ಯೆ ಎದುರಾಗುತ್ತದೆ. ಅವರಿಗೆ ತೊಂದರೆ ನೀಡಿ ಲಾಕ್ಡೌನ್ ಮಾಡುವುದು ಸರಿಯಲ್ಲ. ಬೇಕಾದರೆ ಸರ್ಕಾರದಿಂದ ಬಿಗಿಯಾದ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.
ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆಯಲ್ಲಿ ಸಲಹೆ ನೀಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇನ್ನು ಈ ಲಾಕ್‌ಡೌನ್ ಮಾಡಬೇಕೋ ಬೇಡವೋ ಎನ್ನುವ ಬಗ್ಗೆ ಚರ್ಚಿಸಲು ಇದೇ ಏಪ್ರಿಲ್ 18,19ರಂದು ಸರ್ವ ಪಕ್ಷಗಳ ಸಭೆ ಕರೆದಿದ್ದು, ಸಭೆಯಲ್ಲಿ ಏನೆಲ್ಲ ಚರ್ಚೆಗಳು ಆಗುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.