ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷದ ಆಡಳಿತದಲ್ಲಿ ವೀರಪ್ಪನ್‌ಗಿಂತಲೂ ಹೆಚ್ಚು ಆನೆಗಳು (206) ಸಾವನ್ನಪ್ಪಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆನೆಗಳ ಸಾವಿಗೆ ಜಂಗಲ್ ಸಫಾರಿ ನಿಷೇಧಿಸುವುದು ಸರಿಯಲ್ಲ ಎಂದರು.

ಬೆಂಗಳೂರು (ಡಿ.24): 'ಕಾಡುಗಳ್ಳ ವೀರಪ್ಪನ್ ಹಾವಳಿಗಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಆನೆಗಳು ಸಾವನ್ನಪ್ಪುತ್ತಿವೆ' ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರವಾಗಿ ಆರೋಪಿಸಿದ್ದಾರೆ.

ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆನೆಗಳ ಸರಣಿ ಸಾವಿನ ಅಂಕಿಅಂಶಗಳನ್ನು ಮುಂದಿಟ್ಟು ಹಾಗೂ ಜಂಗಲ್ ಸಫಾರಿ ನಿಷೇಧದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವೀರಪ್ಪನ್ ತನ್ನ 25 ವರ್ಷಗಳ ಕಾಡುಗಳ್ಳತನದ ಅವಧಿಯಲ್ಲಿ ಸುಮಾರು 500 ಆನೆಗಳನ್ನು ಕೊಂದಿರಬಹುದು. ಆದರೆ, ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ವರ್ಷದಲ್ಲಿ ಬರೋಬ್ಬರಿ 206 ಆನೆಗಳು ಸಾವನ್ನಪ್ಪಿವೆ. ಈ ಲೆಕ್ಕಾಚಾರ ನೋಡಿದರೆ ಸಿದ್ದರಾಮಯ್ಯ ಅವರಿಗಿಂತ ವೀರಪ್ಪನ್ನೇ ಬೆಸ್ಟ್ ಎನ್ನಿಸುತ್ತಿದೆ' ಎಂದು ವ್ಯಂಗ್ಯವಾಡಿದರು. ಕೇವಲ ಆನೆಗಳಲ್ಲದೆ, ಚಿರತೆ, ನವಿಲು ಸೇರಿದಂತೆ ವನ್ಯಜೀವಿಗಳ ರಕ್ಷಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಸಫಾರಿ ನಿಷೇಧಕ್ಕೆ ಆಕ್ಷೇಪ

ಇದೇ ವೇಳೆ ಜಂಗಲ್ ಸಫಾರಿ ರದ್ದುಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಅವರು, 'ಕರ್ನಾಟಕದಲ್ಲಿ ಜಂಗಲ್ ಸಫಾರಿ ಪ್ರವಾಸೋದ್ಯಮದ ಹೆಮ್ಮೆಯಾಗಿತ್ತು. ಆದರೆ ಸರ್ಕಾರ ಈಗ 'ಕೋಣ ಮರಿ ಹಾಕಿದರೆ ಕೊಟ್ಟಿಗೆಗೆ ಕಟ್ಟು' ಎಂಬಂತೆ ವರ್ತಿಸುತ್ತಿದೆ. ಆನೆಗಳ ಸಾವಿಗೆ ಸಫಾರಿ ನಿಲ್ಲಿಸುವುದೇ ಪರಿಹಾರವೇ? ಸಚಿವರು ಈ ಬಗ್ಗೆ ತಜ್ಞರ ವರದಿ ಪಡೆದಿದ್ದಾರೆಯೇ? ಅಥವಾ ರೆಸಾರ್ಟ್ ಮಾಲೀಕರ ಜೊತೆ 'ಮಂತ್ಲಿ ಫಿಕ್ಸ್' ಮಾಡಿಕೊಳ್ಳಲು ಈ ನಾಟಕವಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.

ನಗರಗಳಲ್ಲಿ ಹಾವಿನ ವ್ಯಾಪಾರ

ನಗರ ಪ್ರದೇಶಗಳಲ್ಲಿ ವನ್ಯಜೀವಿ ಕಾನೂನು ಉಲ್ಲಂಘನೆಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅಶೋಕ್, 'ನಗರಗಳಲ್ಲಿ ಹಾವಿನ ಸಾಕಾಣಿಕೆ ಮತ್ತು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಒಂದು ಕಡೆ ರೆಸಾರ್ಟ್ ಮೇಲೆ ಮುಗಿಬೀಳುವ ಸರ್ಕಾರ, ಮತ್ತೊಂದೆಡೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಣ್ಣುಮುಚ್ಚಿ ಕುಳಿತಿದೆ. ಸ್ವತಃ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಸಫಾರಿಗೆ ಹೋಗಿರಲಿಲ್ಲವೇ? ಈಗ ಯಾಕೆ ನಿಷೇಧ ಹೇರುತ್ತಿದ್ದಾರೆ?' ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 'ನನ್ನ ಹೆಸರಿನಲ್ಲಿ ಯಾವುದೇ ರೆಸಾರ್ಟ್ ಇಲ್ಲ, ಆದರೆ ಕಾಂಗ್ರೆಸ್ ನಾಯಕರ ಹೆಸರಿನಲ್ಲಿ ಹತ್ತಾರು ರೆಸಾರ್ಟ್‌ಗಳಿವೆ' ಎಂದು ತಿರುಗೇಟು ನೀಡಿದರು.