ಬೆಂಗಳೂರು [ಜ.17]:  ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ ಎನ್ನುವ ವಾತಾವರಣ ನಿರ್ಮಾಣವಾಗುತ್ತಿರುವಂತೆಯೇ ಶಾಸಕಾಂಗ ಪಕ್ಷ ನಾಯಕ ಹಾಗೂ ಪ್ರತಿಪಕ್ಷ ನಾಯಕ ಸ್ಥಾನವನ್ನು ವಿಭಜಿಸಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ಹಾಕುವ ಪ್ರಯತ್ನ ಆರಂಭಗೊಂಡಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸದಿಂದ ಹಿಂತಿರುಗಿದ ಬೆನ್ನಲ್ಲೇ ನಗರದಲ್ಲಿ ಸಭೆ ಸೇರಿದ್ದ ಸಿದ್ದರಾಮಯ್ಯ ವಿರೋಧಿ ಪಾಳೆಯ ಶಾಸಕಾಂಗ ಪಕ್ಷ ಹಾಗೂ ಪ್ರತಿಪಕ್ಷ ನಾಯಕ ಹುದ್ದೆಯನ್ನು ವಿಭಜಿಸಬೇಕು. ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕನ್ನಾಗಿ ಮುಂದುವರೆಸಿದರೆ ಶಾಸಕಾಂಗ ಪಕ್ಷ ಸ್ಥಾನಕ್ಕೆ ಬೇರೆ ನಾಯಕರೊಬ್ಬನ್ನು ಆಯ್ಕೆ ಮಾಡಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ನಿರ್ಮಿಸಲು ತೀರ್ಮಾನಿಸಿದರು ಎನ್ನಲಾಗಿದೆ.

ಈ ಬೆಳವಣಿಗೆಗೆ, ಸಿದ್ದರಾಮಯ್ಯ ಅವರು ತಮ್ಮ ದೆಹಲಿ ಭೇಟಿಯ ವೇಳೆ ಯಾವುದೇ ಕಾರಣಕ್ಕೂ ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷ ಸ್ಥಾನವನ್ನು ಪ್ರತ್ಯೇಕವಾಗಿ ನೋಡಬಾರದು ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಬಳಿ ವಾದ ಮಂಡಿಸಿರುವುದು ಕಾರಣ ಎಂದು ಹೇಳಲಾಗುತ್ತಿದೆ.

ಇಕ್ಕಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್: ಪಾರಾಗಲು ಸಿದ್ದರಾಮಯ್ಯ ಕೊಟ್ರು 2 ಪ್ಲಾನ್!..

ದೆಹಲಿ ಭೇಟಿಯ ವೇಳೆ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದವರೇ ಪ್ರತಿಪಕ್ಷದ ನಾಯಕರೂ ಆಗಿರುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಈ ಸ್ಥಾನವನ್ನು ವಿಭಜಿಸಬೇಕು ಎಂದು ಕೆಲವರು ಪ್ರಯತ್ನ ಆರಂಭಿಸಿದ್ದಾರೆ. ಆದರೆ, ಇದು ಸರಿಯಲ್ಲ. ಇಂತಹ ವಿಭಜನೆ ಮಾಡಬಾರದು. ವಿಭಜನೆ ಮಾಡದಿದ್ದರೆ ಮಾತ್ರ ಹುದ್ದೆಯಲ್ಲಿ ಮುಂದುವರೆಯುವೆ (ಹೈಕಮಾಂಡ್‌ ಸೂಚಿಸಿದರೆ). ಒಂದು ವೇಳೆ ವಿಭಜಿಸಲು ಹೈಕಮಾಂಡ್‌ ತೀರ್ಮಾನಿಸಿದರೆ ಬೇರೆ ಇಬ್ಬರು ನಾಯಕರನ್ನು ಆ ಸ್ಥಾನಗಳಿಗೆ ಆಯ್ಕೆ ಮಾಡಿ. ನಾನು ಪಕ್ಷಕ್ಕೆ ಎಂದಿನ ಸಹಕಾರ ಮುಂದುವರೆಸುತ್ತೇನೆ ಎಂದು ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ಸಭೆ ಸೇರಿದ್ದ ಸಿದ್ದರಾಮಯ್ಯ ವಿರೋಧಿ ಬಣದ ನಾಯಕರು, ಹೈಕಮಾಂಡ್‌ ಸಿದ್ದರಾಮಯ್ಯ ಅವರ ಆಗ್ರಹಕ್ಕೆ ಮಣಿಯಬಾರದು. ಪಕ್ಷವನ್ನು ಸಂಘಟಿಸಲು ಸಾಮೂಹಿಕ ನಾಯಕತ್ವ ನೀಡಬೇಕು. ಹೀಗಾಗಿ ಹುದ್ದೆಗಳನ್ನು ವಿಭಜಿಸಿ ಡಾ.ಜಿ. ಪರಮೇಶ್ವರ್‌ ಅಥವಾ ಎಚ್‌.ಕೆ. ಪಾಟೀಲ್‌ ಅವರಿಗೆ ಈ ಹುದ್ದೆ ನೀಡಬೇಕು ಎಂದು ಹೈಕಮಾಂಡನ್ನು ಆಗ್ರಹಿಸಲು ತೀರ್ಮಾನಿಸಿದರು ಎಂದು ಮೂಲಗಳು ಹೇಳಿವೆ.