Asianet Suvarna News Asianet Suvarna News

ಇಕ್ಕಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್: ಪಾರಾಗಲು ಸಿದ್ದರಾಮಯ್ಯ ಕೊಟ್ರು 2 ಪ್ಲಾನ್!

ಕೆಪಿಸಿಸಿ ಪಟ್ಟ: ಹೈಕಮಾಂಡ್‌ ಮುಂದೆ ಸಿದ್ದು 2 ಸೂತ್ರ| ಇಕ್ಕಟ್ಟಿನಿಂದ ಪಾರಾಗಲು ಹೈ ಕಮಾಂಡ್ ಗೆ ಸಿದ್ದರಾಮಯ್ಯ ಎರಡು ಆಯ್ಕೆ| ಅಧ್ಯಕ್ಷ ಸ್ಥಾನ ಡಿಕೆಶಿಗಾ? ಎಂ. ಬಿ ಪಾಟೀಲ್‌ಗೆ?

KPCC President post Former CM Siddaramaiah Gave Two Options To Congress High Command
Author
Bangalore, First Published Jan 16, 2020, 10:58 AM IST

ಬೆಂಗಳೂರು[ಜ.16]: ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಪೈಪೋಟಿಯ ತೀವ್ರತೆಯಿಂದಾಗಿ ಇಬ್ಬಂದಿಗೆ ಸಿಲುಕಿರುವ ಕಾಂಗ್ರೆಸ್‌ ಹೈಕಮಾಂಡನ್ನು ಸಂದಿಗ್ಧದಿಂದ ಪಾರು ಮಾಡಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎರಡು ಆಯ್ಕೆಗಳನ್ನು ನೀಡಿದ್ದಾರೆ.

1- ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವುದು. ಮತ್ತೊಬ್ಬ ಆಕಾಂಕ್ಷಿ ಡಿ.ಕೆ.ಶಿವಕುಮಾರ್‌ ಅವರಿಗೆ ರಾಜ್ಯದಲ್ಲಿ ಅಥವಾ ರಾಷ್ಟ್ರ ಮಟ್ಟದಲ್ಲಿ ಗೌರವಯುತ ಹುದ್ದೆಯೊಂದನ್ನು ಸೃಷ್ಟಿಸಿ ನೀಡುವುದು.

2- ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವುದು. ಆದರೆ, ಪರಿಪೂರ್ಣ ಅಧಿಕಾರ ಅವರಿಗೆ ದೊರೆಯದಂತೆ ತಡೆಯಲು ಹಾಲಿ ಇರುವ ಕಾರ್ಯಾಧ್ಯಕ್ಷರ ಜತೆಗೆ ಇನ್ನೂ ಮೂರು ಕಾರಾರ‍ಯಧ್ಯಕ್ಷ ಹುದ್ದೆ ಸೃಷ್ಟಿಸುವುದು.

ಮಂಗಳವಾರ ಹಾಗೂ ಬುಧವಾರ ಕ್ರಮವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು ಈ ಎರಡರ ಪೈಕಿ ಹೈಕಮಾಂಡ್‌ ಯಾವುದನ್ನೇ ಆಯ್ಕೆ ಮಾಡಿಕೊಂಡರೂ ತಮಗೆ ಒಪ್ಪಿಗೆ ಇದೆ ಎಂದು ತಿಳಿಸಿ ನಗರಕ್ಕೆ ಹಿಂತಿರುಗಿದರು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಮಂಗಳವಾರ ಸೋನಿಯಾ ಗಾಂಧಿ ಭೇಟಿ ವೇಳೆ ಎಂ.ಬಿ.ಪಾಟೀಲ್‌ ಪರವಾಗಿ ಪ್ರಬಲವಾಗಿ ವಾದ ಮಂಡಿಸಿದ್ದ ಸಿದ್ದರಾಮಯ್ಯ ಅವರು ಅಂತಿಮವಾಗಿ ಹೈಕಮಾಂಡ್‌ಗೆ ಎರಡು ಆಯ್ಕೆಯನ್ನು ನೀಡಲು ಕಾರಣ ಡಿ.ಕೆ. ಶಿವಕುಮಾರ್‌ಗೆ ಗೌರವಯುತ ಹುದ್ದೆ ನೀಡಬೇಕು ಎಂಬ ಒಲವು ಹೈಕಮಾಂಡ್‌ಗೆ ಇರುವುದು.

KPCC ಅಧ್ಯಕ್ಷ ಪಟ್ಟಕ್ಕಾಗಿ ಪೈಪೋಟಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತರಾಗಿರುವ ಬಹುತೇಕ ನಾಯಕರು ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ನೀಡುವಂತೆ ಲಾಬಿ ನಡೆಸಿದ್ದಾರೆ. ಇದರಲ್ಲಿ ಪ್ರಮುಖ ನಾಯಕರಾದ ಅಹ್ಮದ್‌ ಪಟೇಲ್‌ ಆದಿಯಾಗಿ ಎಐಸಿಸಿ ಪ್ರಭಾವಿಗಳ ದೊಡ್ಡ ದಂಡೇ ಇದೆ. ಇದಷ್ಟೇ ಅಲ್ಲದೆ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೊರತುಪಡಿಸಿ ಉಳಿದ ಉಸ್ತುವಾರಿಗಳು (ಮಧು ಯಾಸ್ಕಿಗೌಡ, ಪಿ.ಸಿ.ವಿಶ್ವನಾಥ್‌, ಮಾಣಿಕ್ಯಂ ಠ್ಯಾಗೋರ್‌, ಡಾ.ಸಾಕೆ ಶೈಲಜಾನಾಥ್‌) ಶಿವಕುಮಾರ್‌ ಪರ ವರದಿ ನೀಡಿದ್ದಾರೆ.

ಇನ್ನು ಕೆಪಿಸಿಸಿ ಹುದ್ದೆ ಕುರಿತು ರಾಜ್ಯದ ನಾಯಕರ ಅಭಿಪ್ರಾಯ ಪಡೆಯಲು ಆಗಮಿಸಿದ್ದ ಮಧುಸೂಧನ್‌ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್‌ ಅವರು ಸಹ ಶಿವಕುಮಾರ್‌ ಅವರ ಪರವಾಗಿಯೇ ವರದಿ ನೀಡಿದ್ದಾರೆ. ಇದಲ್ಲದೆ, ಪಕ್ಷದ ಸಲುವಾಗಿ ಜೈಲುವಾಸ ಅನುಭವಿಸಿದರು ಎಂಬ ಭಾವನೆ ಖುದ್ದು ಹೈಕಮಾಂಡ್‌ಗೂ ಇದೆ. ಇದೆಲ್ಲ ಕಾರಣಕ್ಕಾಗಿ ಹೈಕಮಾಂಡ್‌ ಶಿವಕುಮಾರ್‌ ಪರ ಒಲವು ಹೊಂದಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನೇ ಶಿವಕುಮಾರ್‌ಗೆ ನೀಡಬೇಕು ಎಂಬ ನಿರ್ಧಾರ ಅಥವಾ ನಿಲುವನ್ನು ಹೈಕಮಾಂಡ್‌ ಹೊಂದಿಲ್ಲವಾದರೂ ಶಿವಕುಮಾರ್‌ಗೆ ಉತ್ತಮ ಹುದ್ದೆಯನ್ನು ನೀಡಿ, ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬ ಭಾವನೆ ಪ್ರಬಲವಾಗಿದೆ.

ಉಳುಮೆ ಮಾಡಿಕೊಂಡಿರ್ತೀನಿ, ರೇಸಲ್ಲಿ ನಾನಿಲ್ಲ!: ಕಣದಿಂದ ಹಿಂದೆ ಸರಿದ್ರಾ ಡಿಕೆಶಿ?

ಹೈಕಮಾಂಡ್‌ನ ವರಿಷ್ಠರ ಭೇಟಿಯ ವೇಳೆ ಈ ವಿಚಾರ ಸಿದ್ದರಾಮಯ್ಯ ಅವರಿಗೂ ಮನದಟ್ಟಾಗಿದೆ. ಹೀಗಾಗಿ ಎಂ.ಬಿ.ಪಾಟೀಲ್‌ ಪರವಾಗಿ ಪ್ರಬಲ ವಾದ ಮಂಡಿಸಿದ್ದ ಸಿದ್ದರಾಮಯ್ಯ ಇದೀಗ ಶಿವಕುಮಾರ್‌ ಅವರನ್ನು ಅಧ್ಯಕ್ಷ ಮಾಡಿದರೂ ಒಪ್ಪುವೆ, ಆದರೆ ಅವರಿಗೆ ಕಡಿವಾಣ ಹಾಕಿ ಹುದ್ದೆ ನೀಡಬೇಕು ಎಂಬ ಮಾರ್ಪಾಡು ಮಾಡಿಕೊಳ್ಳುವಷ್ಟುಬದಲಾಗಿದ್ದಾರೆ ಎನ್ನಲಾಗಿದೆ.

ಯಾರ ವಾದ ಏನು, ಮನ್ನಣೆ ಯಾರಿಗೆ:

ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವಾಗ ಅವರಿಗೆ ಸರಿಯಾದ ಎದುರಾಳಿಯಾಗಿ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ (ಎಂ.ಬಿ.ಪಾಟೀಲ್‌) ಕೆಪಿಸಿಸಿ ನಾಯಕತ್ವ ನೀಡಿದರೆ ಕಾಂಗ್ರೆಸ್‌ಗೆ ಲಾಭವಾಗುತ್ತದೆ. ಇದರ ಹೊರತಾಗಿ ಒಕ್ಕಲಿಗರಿಗೆ ಈ ಹುದ್ದೆ ನೀಡಿದರೆ ಲಿಂಗಾಯತ ಮತಗಳು ಬಿಜೆಪಿ ಪರವಾಗಿ ಮತ್ತಷ್ಟುಕ್ರೋಡೀಕರಣಗೊಳ್ಳುತ್ತವೆ ಎಂಬುದು ಸಿದ್ದರಾಮಯ್ಯ ಅವರು ಹೈಕಮಾಂಡ್‌ ಮುಂದಿಟ್ಟಿರುವ ವಾದ.

ಒಂದು ವೇಳೆ ಈ ವಾದಕ್ಕೆ ಹೈಕಮಾಂಡ್‌ ಒಪ್ಪಿದರೆ ಎಂ.ಬಿ.ಪಾಟೀಲ್‌ ಅವರಿಗೆ ಅಧ್ಯಕ್ಷ ಹುದ್ದೆ ದೊರೆಯಬಹುದು. ಆಗಲೂ ಕಾರ್ಯಾಧ್ಯಕ್ಷರು ನೇಮಕಗೊಳ್ಳುತ್ತಾರೆ. ಮೂಲಗಳ ಪ್ರಕಾರ ಹಾಲಿ ಕಾರ್ಯಾಧ್ಯಕ್ಷರಾಗಿರುವ ಲಿಂಗಾಯತ ಸಮುದಾಯದ ಈಶ್ವರ್‌ ಖಂಡ್ರೆ ಅವರನ್ನು ಬದಲಿಸಿ ಆ ಸ್ಥಾನವನ್ನು ಒಕ್ಕಲಿಗರೊಬ್ಬರಿಗೆ ನೀಡುವುದು (ಬಹುತೇಕ ಕೃಷ್ಣ ಬೈರೇಗೌಡ). ಉಳಿದಂತೆ ಇನ್ನು ಮೂರು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸುವುದು (ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಮುಸ್ಲಿಂ ಸಮುದಾಯಕ್ಕೆ ತಲಾ ಒಂದು).

ಹೀಗಾದಾಗಲೂ ಡಿ.ಕೆ. ಶಿವಕುಮಾರ್‌ ಅವರಿಗೆ ಸಾಧ್ಯವಾದರೆ ರಾಜ್ಯದಲ್ಲೇ ಉತ್ತಮ ಹುದ್ದೆಯೊಂದನ್ನು ಸೃಷ್ಟಿಸುವುದು ಅಥವಾ ಎಐಸಿಸಿ ಕಾರ್ಯದರ್ಶಿ ಹುದ್ದೆ ನೀಡುವುದು.

ಇನ್ನು ಪಕ್ಷದ ಪರವಾಗಿ ಗಟ್ಟಿಯಾಗಿ ನಿಂತು ಜೈಲುವಾಸ ಅನುಭವಿಸಿದ ಡಿ.ಕೆ.ಶಿವಕುಮಾರ್‌ ಪರವಾಗಿ ರಾಜ್ಯದಲ್ಲಿ ಅನುಕಂಪವಿದೆ ಎಂದು ಹೈಕಮಾಂಡ್‌ನ ಪ್ರಭಾವಿ ನಾಯಕರು ಸೋನಿಯಾ ಗಾಂಧಿ ಅವರ ಮುಂದೆ ವಾದ ಮಂಡಿಸಿದ್ದಾರೆ. ಶಿವಕುಮಾರ್‌ ಅವರಿಗೆ ಉತ್ತಮ ಸಂಘಟನಾ ಸಾಮರ್ಥ್ಯವಿದೆ. ಸಂಪನ್ಮೂಲ ಕ್ರೋಡೀಕರಿಸುವ ಛಾತಿಯಿದೆ. ಯುವ ಸಮೂಹವನ್ನು ಜತೆಗೊಯ್ಯುವ ಶಕ್ತಿಯಿದೆ. ಬಿಜೆಪಿ ವಿರುದ್ಧ ಪ್ರಬಲವಾಗಿ ಹೋರಾಟ ನಡೆಸುವ ಮನಸ್ಥಿತಿಯಿದೆ. ಹೀಗಾಗಿ ಅವರಿಗೆ ನೀಡಬೇಕು ಎಂಬ ವಾದ ಮಂಡಿಸಿದ್ದಾರೆ.

ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದು ಅಚ್ಚರಿ ಹೇಳಿಕೆ, ಡಿಕೆಶಿಗೆ ಮರ್ಮಾಘಾತ.!

ಈ ವಾದಕ್ಕೆ ಮನ್ನಣೆ ದೊರಕಿ, ಸಿದ್ದರಾಮಯ್ಯ ಅವರ ಬೇಡಿಕೆಯನ್ನು ಹೈಕಮಾಂಡ್‌ ಪರಿಗಣಿಸಿದರೆ ಆಗ ಕೆಪಿಸಿಸಿ ಹುದ್ದೆ ಶಿವಕುಮಾರ್‌ ಅವರಿಗೆ ದೊರೆಯಬಹುದು. ಹಾಲಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮುಂದುವರೆಯಬಹುದು. ಉಳಿದಂತೆ ಇನ್ನು ಮೂರು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಯಾಗಬಹುದು (ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಮುಸ್ಲಿಂ ಸಮುದಾಯಕ್ಕೆ ತಲಾ ಒಂದು). ಹುದ್ದೆಯ ಆಕಾಂಕ್ಷಿ ಎಂ.ಬಿ. ಪಾಟೀಲ್‌ಗೆ ಎಐಸಿಸಿಯಲ್ಲಿ ಸ್ಥಾನ ದೊರೆಯಬಹುದು ಎಂದು ಹೇಳಲಾಗುತ್ತಿದೆ.

ಎಂಬಿಪಾ ಅಧ್ಯಕ್ಷರಾದರೆ

- 4 ಕಾರ್ಯಾಧ್ಯಕ್ಷರ ನೇಮಕ. ಈಶ್ವರ್‌ ಖಂಡ್ರೆ ಬದಲಿಸಿ ಬಹುತೇಕ ಕೃಷ್ಣ ಬೈರೇಗೌಡಗೆ ಹುದ್ದೆ. ಜೊತೆಗೆ ಎಸ್‌ಸಿ, ಎಸ್‌ಟಿ, ಮುಸ್ಲಿಂ ಸಮುದಾಯದ ತಲಾ ಒಬ್ಬರಿಗೆ ಕಾರ್ಯಾಧ್ಯಕ್ಷ ಹುದ್ದೆ

- ಡಿ.ಕೆ.ಶಿವಕುಮಾರ್‌ಗೆ ರಾಜ್ಯದಲ್ಲೇ ಉತ್ತಮ ಹುದ್ದೆ ಸೃಷ್ಟಿಅಥವಾ ಎಐಸಿಸಿ ಕಾರ್ಯದರ್ಶಿ ಹುದ್ದೆ

ಡಿಕೆಶಿ ಅಧ್ಯಕ್ಷರಾದರೆ

- 4 ಕಾರ್ಯಾಧ್ಯಕ್ಷರ ನೇಮಕ. ಈಶ್ವರ್‌ ಖಂಡ್ರೆ ಕಾರ್ಯಾಧ್ಯಕ್ಷರಾಗಿ ಮುಂದುವರಿಕೆ. ಜೊತೆಗೆ ಎಸ್‌ಸಿ, ಎಸ್‌ಟಿ, ಮುಸ್ಲಿಂ ಸಮುದಾಯದ ತಲಾ ಒಬ್ಬರಿಗೆ ಕಾರ್ಯಾಧ್ಯಕ್ಷ ಹುದ್ದೆ

- ಹುದ್ದೆಯ ಆಕಾಂಕ್ಷಿ ಎಂ.ಬಿ.ಪಾಟೀಲ್‌ ಅವರಿಗೆ ಎಐಸಿಸಿಯಲ್ಲಿ ಸ್ಥಾನ

ಸಿದ್ದರಾಮಯ್ಯ ವಾದವೇನು?

- ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಮುಖ್ಯಮಂತ್ರಿ ಇದ್ದಾರೆ. ಅವರಿಗೆ ಎದುರಾಳಿಯಾಗಿ ಲಿಂಗಾಯತರಿಗೆ ಕೆಪಿಸಿಸಿ ಅಧ್ಯಕ ಹುದ್ದೆ ನೀಡಿದರೆ ಕಾಂಗ್ರೆಸ್‌ಗೆ ಲಾಭ. ಅದರ ಬದಲು ಒಕ್ಕಲಿಗರಿಗೆ ಕೆಪಿಸಿಸಿ ಹುದ್ದೆ ನೀಡಿದರೆ ಲಿಂಗಾಯತ ಮತಗಳು ಬಿಜೆಪಿ ಪರವಾಗಿ ಮತ್ತಷ್ಟುಕ್ರೋಡೀಕರಣಗೊಳ್ಳುತ್ತವೆ.

ಡಿಕೆಶಿ ಪರ ಇರುವವರ ವಾದ

- ಕಾಂಗ್ರೆಸ್‌ ಪರ ಗಟ್ಟಿಯಾಗಿ ನಿಂತು ಜೈಲುವಾಸ ಅನುಭವಿಸಿದ ಬಗ್ಗೆ ಡಿ.ಕೆ.ಶಿವಕುಮಾರ್‌ ಪರ ರಾಜ್ಯದಲ್ಲಿ ಅನುಕಂಪವಿದೆ. ಡಿಕೆಶಿಗೆ ಉತ್ತಮ ಸಂಘಟನಾ ಸಾಮರ್ಥ್ಯ, ಸಂಪನ್ಮೂಲ ಸಂಗ್ರಹಿಸುವ ಛಾತಿ, ಯುವಕರನ್ನು ಕರೆದೊಯ್ಯುವ ಶಕ್ತಿ, ಬಿಜೆಪಿ ವಿರುದ್ಧ ಬಲವಾಗಿ ಹೋರಾಡುವ ಮನಸ್ಥಿತಿಯಿದೆ.

Follow Us:
Download App:
  • android
  • ios