ಮೂರು ವರ್ಷ ಕೃಷಿ ಸಚಿವನಾಗಿದ್ದಕ್ಕೆ ನನ್ನ ಮನೆಯಲ್ಲಿ ಸಾವಿರ ಕೋಟಿ ರು. ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮನೆಯಲ್ಲಿ ಒಂದು ಲಕ್ಷ ಕೋಟಿ ರು. ಸಿಗಬಹುದು. ಇಲ್ಲಾ ಬೇರೆ ಯಾರ ಮನೆಯಲ್ಲಾದರೂ ಈ ಹಣ ಇಟ್ಟಿರಬಹುದು: ಬಿ.ಸಿ.ಪಾಟೀಲ್‌ 

ಬೆಂಗಳೂರು(ಮಾ.16): ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬುದ್ಧಿಭ್ರಮಣೆ ಆಗಿರಬಹುದು. ಅವರು ಬೋಗಸ್‌ ಸಿದ್ದರಾಮಯ್ಯ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಇವರ ಮಾತನ್ನು ಯಾರೂ ಕೇಳುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿರುಗೇಟು ನೀಡಿದರು.

ಹೆಬ್ಬಾಳದ ಜಿಕೆವಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷ ಕೃಷಿ ಸಚಿವನಾಗಿದ್ದಕ್ಕೆ ನನ್ನ ಮನೆಯಲ್ಲಿ ಸಾವಿರ ಕೋಟಿ ರು. ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮನೆಯಲ್ಲಿ ಒಂದು ಲಕ್ಷ ಕೋಟಿ ರು. ಸಿಗಬಹುದು. ಇಲ್ಲಾ ಬೇರೆ ಯಾರ ಮನೆಯಲ್ಲಾದರೂ ಈ ಹಣ ಇಟ್ಟಿರಬಹುದು. ಈ ರೀತಿ ಆಧಾರರಹಿತವಾಗಿ ಮಾತನಾಡುತ್ತಿರುವುದರಿಂದ ಅವರಿಗೆ ಬುದ್ಧಿಭ್ರಮಣೆ ಆಗಿರಬಹುದು. ಮುಖ್ಯಮಂತ್ರಿಯಾದವರು ಇಷ್ಟು ಕೀಳುಮಟ್ಟದಲ್ಲಿ ಮಾತಾಡುತ್ತಾರೆ. ನಾಚಿಕೆಗೇಡು ಎಂದು ಕಿಡಿಕಾರಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಅಲೆ ಇಲ್ಲ

ನನ್ನನ್ನು ಗೆಲ್ಲಿಸಲು ಶ್ರಮ ಪಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಾಡಲು ನಾವೂ ಶ್ರಮಪಟ್ಟಿದ್ದೆವು. ಪಕ್ಷದಲ್ಲಿದ್ದಾಗ ಇದೆಲ್ಲಾ ಸಹಜ. ನಾವು ಕಾಂಗ್ರೆಸ್‌ ತ್ಯಜಿಸಿದ್ದಕ್ಕೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದರು. ಇಲ್ಲದಿದ್ದರೆ ಗೋಡೆ ನೋಡಿಕೊಂಡು ಕೂತಿರಬೇಕಿತ್ತು. ಕಾಂಗ್ರೆಸ್‌ ತ್ಯಜಿಸಿದ್ದಕ್ಕೆ ದ್ವೇಷದಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

ಕಳೆದ ಉಪ ಚುನಾವಣೆ ವೇಳೆಯಲ್ಲೂ ನನ್ನ ವಿರುದ್ಧ ಮಾತನಾಡಿದ್ದರು. ಆದರೆ ಜನರಿಗೆ ಇವರು ಬೋಗಸ್‌ ಸಿದ್ದರಾಮಯ್ಯ ಎಂಬುದು ಗೊತ್ತಿದೆ ಎಂದು ಟಾಂಗ್‌ ನೀಡಿದರು.

ಹಾವೇರಿ ಜಿಲ್ಲೆ ಹುಕ್ಕೇರಿಯ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು, ‘ಬಿ.ಸಿ.ಪಾಟೀಲ್‌ ಕೃಷಿ ಇಲಾಖೆಯಲ್ಲಿ ಸಾವಿರ ಕೋಟಿ ಲೂಟಿ ಹೊಡೆದಿದ್ದಾರೆ’ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಟೀಲ್‌ ತಿರುಗೇಟು ನೀಡಿದ್ದಾರೆ.