ನಾನೂ ಹಿಂದು, ಗೋ ಮಾಂಸ ಬೇಕಾದರೆ ತಿನ್ನುತ್ತೇನೆ: ಸಿದ್ದರಾಮಯ್ಯ
ಆರೆಸ್ಸೆಸ್ ಮುಖಂಡರಾದ ಹೆಡಗೇವಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಹಿಂದೂನಾ? ನಾನು ಹಿಂದೂ ಅಲ್ವಾ? ಆದರೆ ನಾನು ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತುಮಕೂರು (ಮೇ.23): ಆರೆಸ್ಸೆಸ್ ಮುಖಂಡರಾದ ಹೆಡಗೇವಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಹಿಂದೂನಾ? ನಾನು ಹಿಂದೂ ಅಲ್ವಾ? ಆದರೆ ನಾನು ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿ, ಸಮಾಜದಲ್ಲಿ ದೇವರು, ಧರ್ಮ, ಆಹಾರದ ವಿಚಾರದಲ್ಲಿ ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ವಿಷ ಬೀಜ ಬಿತ್ತುತ್ತಿದ್ದು, ಈ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ಎಚ್ಚರಿಕೆಯಿಂದಿರಬೇಕು. ಸಂಘ ಪರಿವಾರದವರ ಕೈಗೆ ಅಧಿಕಾರ ಸಿಕ್ಕರೆ ಸಂವಿಧಾನವನ್ನು ಒಡೆಯುವ ಕೆಲಸ ಮಾಡುತ್ತಾರೆ. ಯಾವತ್ತೂ ಗೋವಿನ ಸಗಣಿ ಎತ್ತದವರು ಇಂದು ಗೋರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಅಂಥ ಸ್ಥಿತಿಗೆ ನಮ್ಮ ರಾಜ್ಯ ಇದೀಗ ತಲುಪಿದೆ ಎಂದು ತಿಳಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಿ. ಗೋ ಮಾಂಸವನ್ನ ತಿನ್ನುವರು ಕೇವಲ ಮುಸ್ಲಿಂರಲ್ಲ. ಹಿಂದೂಗಳು ಗೋ ಮಾಂಸವನ್ನ ತಿಂತಾರೆ, ಕಿಶ್ಚಿಯನ್ ಸಹ ತಿಂತಾರೆ. ಇದರ ಬಗ್ಗೆ ವಿಧಾನಸೌಧದಲ್ಲಿ ಪ್ರಶ್ನೆ ಮಾಡ್ದೆ. ಹಾಗಾದ್ರೆ ನೀನು ಗೋ ಮಾಂಸ ತಿಂತಿಯಾ ಅಂತ ನನಗೆ ಪ್ರಶ್ನೆ ಮಾಡಿದ್ರು. ಹೌದು ನಾನು ಇದುವರೆಗೂ ತಿಂದಿಲ್ಲ. ತಿನ್ನಬೇಕು ಅಂದ್ರೆ ತಿಂತಿನಿ ನೀನು ಯಾವನೂ ಕೇಳೋಕೆ ಅಂತ ಉತ್ತರ ಕೊಟ್ಟೆ, ಎಂದಿದ್ದಾರೆ.
ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ: ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬುದು ಮುಖ್ಯವಲ್ಲ. ನಾವ್ಯಾರು ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ.ಆದರೆ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು. ಈ ದೇಶ ಒಂದು ಧರ್ಮಕ್ಕೆ ಸೇರಿದಲ್ಲ. ಎಲ್ಲರಿಗೂ ಸಮಾನ ಅವಕಾಶವಿದೆ. ಭಾರತದಲ್ಲಿರುವ ಎಲ್ಲಾ ಧರ್ಮಗಳ ಜನರ ನಡುವೆ ಸಹಬಾಳ್ವೆ ಆಗತ್ಯ.ಇದನ್ನೇ ನಮ್ಮ ಸಂವಿಧಾನವೂ ಪ್ರತಿಪಾದಿಸುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಜಾರಿಗೆ ತಂದ ಶಾದಿ ಭಾಗ್ಯ, ಟಿಪ್ಪು ಜಯಂತಿಗಳು ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಮಾಡಿದ ಕಾರ್ಯಕ್ರಮಗಳಲ್ಲ. ಬಿಜೆಪಿ, ಆರ್‌ಎಸ್‌ಎಸ್‌ನವರು ದೂರುವಂತೆ ಟಿಪ್ಪು ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ ಹಾಗೂ ಇತರೆ ಕಡೆಗಳಲ್ಲಿ ಅಷ್ಟೊಂದು ಹಿಂದೂ ದೇವಾಲಯಗಳು, ಅತನ ಆಸ್ಥಾನದಲ್ಲಿ ಹಿಂದೂ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಿತ್ತೇ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ದಿಲ್ಲಿಗೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್: ಕಾಂಗ್ರೆಸ್ ವರಿಷ್ಠರ ಬುಲಾವ್!
ಪರಮೇಶ್ವರ್ ಗೈರು: ತುಮಕೂರಿನಲ್ಲಿ ನಡೆದ ಮಡಿವಾಳ ಸಮಾವೇಶ ಹಾಗೂ ಅಲ್ಪಸಂಖ್ಯಾತರ ಸಮಾವೇಶಕ್ಕೆ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ತಮ್ಮ ಮಾಲಿಕತ್ವದ ಸಿದ್ದಾರ್ಥ ಮೆಡಿಕಲ್ ಕಾಲೇಜು ಪಕ್ಕದಲ್ಲೇ ಮಡಿವಾಳ ಸಮಾವೇಶ ನಡೆದರೂ ಕೂಡ ಪರಮೇಶ್ವರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದ ಎರಡೂ ಕಾರ್ಯಕ್ರಮಕ್ಕೆ ಪರಮೇಶ್ವರ್ ಗೈರು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಇವರ ಹೆಸರು ಮುದ್ರಿತವಾಗಿದ್ದು ಎರಡೂ ಕಾರ್ಯಕ್ರಮದ ಆಯೋಜಕರು ಖುದ್ದಾಗಿ ಪರಮೇಶ್ವರ್ ಅವರನ್ನು ಆಹ್ವಾನಿಸಿದ್ದರೂ ಕಾರ್ಯಕ್ರಮಕ್ಕೆ ಬಾರದೇ ಇರುವುದು ಎದ್ದು ಕಾಣುತ್ತಿತ್ತು.
ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ, ಹೈಕಮಾಂಡ್ ಬುಲಾವ್, ಸಿದ್ದರಾಮಯ್ಯ ದಿಲ್ಲಿಗೆ
ದೆಹಲಿ ತೀರ್ಮಾನವೇ ಅಂತಿಮ: ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ವಿಚಾರವಾಗಿ ಬಣಗಳ ಗುದ್ದಾಟ ವಿಚಾರವೆಲ್ಲಾ ಸುಳ್ಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾವು ಹೆಸರುಗಳನ್ನು ಶಿಫಾರಸ್ಸು ಮಾಡಿದ್ದೇವೆ. ದೆಹಲಿಯವರು ಏನು ತೀರ್ಮಾನ ಮಾಡುತ್ತಾರೋ ಅದೇ ಅಂತಿಮ. ಒಮ್ಮತವಾಗಿ ಕೆಲವು ಹೆಸರುಗಳನ್ನು ಸೂಚಿಸಿದ್ದೇವೆ ಎಂದ ಅವರು ಯಾವ ಸಮುದಾಯಕ್ಕೆ ಯಾರಿಗೆ ಕೊಡಬಹುದು ಅಂತಾ ಒಂದು ಪ್ಯಾನಲ… ಮಾಡಿ ಕೊಡಲಾಗಿದೆ. ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಪಕ್ಷ ಮುಕ್ತವಾಗಿದೆ. ಸದ್ಯಕ್ಕೆ ಈ ವಿಚಾರದ ಬಗ್ಗೆ ಯಾರ ಜೊತೆಯೂ ಮಾತನಾಡುವುದಕ್ಕೆ ಹೋಗಿಲ್ಲ ಮುಂದೆ ನೋಡೋಣ ಎಂದರು.