ಬೆಂಗಳೂರು, (ಡಿ.07): ಇಂದಿನಿಂದ ರಾಜ್ಯ ವಿಧಾನಸಭಾ ಚಳಿಗಾಲದ ಅಧಿವೇಶನ ಆರಂಭವಾಗಿದೆ.  ಈ ವೇಳೆ ಬಿಜೆಪಿ ನಾಯಕರುಗಳನ್ನ ಮಾಜಿ ಸಿಎಂ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

ಹೌದು....ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಮುಸ್ಲಿಮರಿಗೆ ಟಿಕೆಟ್ ನೀಡಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಪ್ರಾಸ್ತಪ ಮಾಡಿದರು.

 ಮನುಷ್ಯತ್ವ ವಿಚಾರದಲ್ಲಿ ನಾನು ಒಂದೇ. ರಾಜಕೀಯ ವಿಚಾರದಲ್ಲಿ ಮಾತ್ರ ಭಿನ್ನ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಅಸಮಾಧಾನ ಸ್ಫೋಟ: ಇಬ್ಬರು ಶಾಸಕರ ರಾಜೀನಾಮೆ ಪ್ರಸ್ತಾಪದಿಂದ ಸಿಎಂ ಕಕ್ಕಾಬಿಕ್ಕಿ

ನಾನು ಪಾರ್ಲಿಮೆಂಟರಿ ಟಿಕೆಟ್ ಮುಸ್ಲಿಂರಿಗೆ ಕೊಡಲ್ಲ. ಹೀಗಂತ ಈಶ್ವರಪ್ಪ ಬೆಳಗಾವಿಯಲ್ಲಿ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಪತ್ರಕರ್ತರು ಆ ರೀತಿ ಪ್ರಶ್ನೆ ಕೇಳಬಹುದಾ?  ನಾವು ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ ಎಂದು ಸಿದ್ದರಾಮಯ್ಯಗೆ ಮಾಧುಸ್ವಾಮಿ ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದು, ಹೌದಪ್ಪಾ ನೀವು ಯಾರಿಗೆ ಬೇಕಾದರೂ ಟಿಕೆಟ್ ಕೊಡಿ.  ಅದಕ್ಕೂ ನಮಗೂ ಏನೂ ಸಂಬಂಧವಿಲ್ಲ. ನೀವು ಕಾರ್ಯಕರ್ತರಿಗೆ ಟಿಕೆಟ್ ಕೊಡ್ತೇವೆ ಅನ್ನಿ. ಅದು ಬಿಟ್ಟು ಮುಸ್ಲಿಂರಿಗೆ ಟಿಕೆಟ್ ಕೊಡಲ್ಲ ಅಂದ್ರೆ ಹೇಗೆ...? ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.

ಈ ವೇಳೆ ಮುಸ್ಲಿಂ ಕಾರ್ಯಕರ್ತರು ಹೆಚ್ಚಾದರೆ ನಾವು ಟಿಕೆಟ್ ನೀಡುತ್ತೇವೆ. ಟಿಕೆಟ್ ಕೊಡುತ್ತೇವೆ, ಶಾಸಕರನ್ನಾಗಿ ಮಾಡುತ್ತೇವೆ. ಖಾದರ್ ಅವರನ್ನ ಕಳಿಸಿ ಟಿಕೆಟ್ ಕೊಡುತ್ತೇವೆ ಎಂದು ಸಚಿವ ಆರ್. ಅಶೋಕ್ ಧ್ವನಿಗೂಡಿಸಿದರು.

ನೀವು ಚೀಫ್ ಮಿನಿಸ್ಟರ್ ಮಾಡುತ್ತೇವೆ ಅಂದ್ರೂ ಅವರು ( ಯು.ಟಿ. ಖಾದರ್) ಬರಲ್ಲ. ಅಶೋಕ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.