ಅಸಮಾಧಾನ ಸ್ಫೋಟ: ಇಬ್ಬರು ಶಾಸಕರ ರಾಜೀನಾಮೆ ಪ್ರಸ್ತಾಪದಿಂದ ಸಿಎಂ ಕಕ್ಕಾಬಿಕ್ಕಿ
ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬಂದು ಹೋದರು ಪಕ್ಷದಲ್ಲಿನ ಬೇಗುದಿ ಇನ್ನೂ ಬಗೆಹರಿದಿಲ್ಲ. ಇದೀಗ ಎಂಎಲ್‌ಸಿಗಳ ಮಾತಿನಿಂದ ಸಿಎಂ ಗಾಬರಿಯಾಗಿದ್ದಾರೆ.
ಬೆಂಗಳೂರು, (ಡಿ.07): ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಗೆದ್ದರೂ ಇನ್ನೂ ಸಚಿವ ಸ್ಥಾನದ ಆಸೆ ಈಡೇರಿಲ್ಲ. ಇದರಿಂದ ವಿಧಾನಪರಿಷತ್ ಸದಸ್ಯರು ಸಿಎಂ ಮುಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಹೌದು... ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಇಬ್ಬರೂ ಇತ್ತೀಚಿಗೆ ಸಿಎಂ ಅವರನ್ನು ಭೇಟಿಯಾಗಿ ಮನದ ನೋವನ್ನು ತೋಡಿಕೊಂಡಿದ್ದಾರೆ.
ನನ್ನನ್ನು ಮಂತ್ರಿ ಮಾಡಿ, ಇಲ್ಲದಿದ್ದರೆ ವಿಷವನ್ನು ಕೊಟ್ಟುಬಿಡಿ… ನಾವು ಸಚಿವರಾಗಿ ರಾಜೀನಾಮೆ ನೀಡಿ ನಿಮ್ಮ ಪಕ್ಷಕ್ಕೆ ಬಂದಿದ್ದೇವೆ. ಇದೀಗ ಶಾಸಕರಾಗಿದ್ದೇವೆ. ನಮ್ಮ ಪರಿಸ್ಥಿತಿಯೀಗ ವಿಷ ಕುಡಿಯುವಂತಾಗಿದೆ ಎಂದು ಶಂಕರ್ ನೋವು ಹೊರಹಾಕಿದ್ದಾರೆ.
ಬಿಗ್ ಟ್ವಿಸ್ಟ್; ಒಂದಿಷ್ಟು ಶಾಸಕರಿಗೆ ದೆಹಲಿಗೆ ಬರಲು ತಿಳಿಸಿದ ಅರುಣ್ ಸಿಂಗ್!
'ಏನ್ ಸಾರ್, ನಮ್ಮನ್ನು ಸಚಿವರನ್ನಾಗಿ ಮಾಡಲೇ ಇಲ್ಲ. ಕಳೆದ ಅಧಿವೇಶನದಲ್ಲಿ ಸಚಿವರನ್ನಾಗಿ ಮಾಡುತ್ತೇವೆ ಅಂತಾ ಹೇಳಿದ್ರಿ. ಈಗ ಅಧಿವೇಶನ ನಡೆಯುತ್ತಿದೆ ಈಗಲೂ ಮಾಡಲಿಲ್ಲ ಅಂದರೆ ಹೇಗೆ? ನಮ್ಮಿಂದ ನಿಮಗೆ ಏನಾದರೂ ತೊಂದರೆ ಆದರೆ ಹೇಳಿ ನಾನು ರಾಜೀನಾಮೆ ನೀಡುತ್ತೇವೆ ಎಂದಿದ್ದಾರೆ.
ನಿಮ್ಮನ್ನು ನಂಬಿಕೊಂಡು ಬಂದಿದ್ದು ನಾವು. ನಮ್ಮಿಂದ ನಿಮಗೆ ತೊಂದರೆ ಆಗಿದ್ದರೆ ಹೇಳಿ ಈಗಲೇ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂಗೆ ಆರ್.ಶಂಕರ್ ಹೇಳಿದ್ದಾರೆ.
ಎಂಟಿಬಿ ನಾಗರಾಜ್ ಕೂಡ ರಾಜೀನಾಮೆ ಮಾತು ಪ್ರಸ್ತಾಪಿಸಿದ್ದು, ಇವರ ಮಾತಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಕ್ಕಾಬಿಕ್ಕಿಯಾಗಿದ್ದಾರೆ. ಕೈ ಮುಗಿಯುತ್ತೇನೆ ಸುಮ್ಮನಿರಿ. ರಾಜೀನಾಮೆ ನೀಡುವ ಮಾತನಾಡಬೇಡಿ. ಹೈಕಮಾಂಡ್ ಒಪ್ಪಿಗೆ ನೀಡಿದ ತಕ್ಷಣವೇ ಸಚಿವರನ್ನಾಗಿ ಮಾಡುತ್ತೇವೆ ಎಂದು ಮನವಿ ಮಾಡಿದರು.
ನಿಮ್ಮನ್ನು ಸಚಿವರನ್ನಾಗಿ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳುವ ಮೂಲಕ ಬಿಎಸ್‌ವೈ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರನ್ನ ಸಮಾಧಾನ ಪಡಿಸಿದರು.
ಒಟ್ಟಿನಲ್ಲಿ ಸದ್ಯ ಸಚಿವ ಸಂಪುಟಕ್ಕೆ ಅನುಮತಿ ಸಿಗುತ್ತಿಲ್ಲ ಎಂದು ಬಿಎಸ್‌ವೈ ಕೋಪಗೊಂಡಿದ್ದರೆ, ಇತ್ತ ಎಂಲ್‌ಸಿಗಳು ರಾಜೀನಾಮೆ ಮಾತುಗಳನ್ನಾಡಿದ್ದಾರೆ. ಇದರಿಂದ ಯಡಿಯೂರಪ್ಪಗೆ ದಿಕ್ಕು ತೋಚದಂತಾಗಿದೆ.