ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಈಗಲೇ ಭಯ: ಸಿದ್ದು ಮಾತಿನ ಅರ್ಥವೇನು?
ದೊಡ್ಡಪುರದಲ್ಲಿ ಬಿಜೆಪಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ನಾಯಕರುಗಳು ಮಾಡಿದ ಆರೋಪಿಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ, (ಸೆಪ್ಟೆಂಬರ್.11): ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಈಗಲೇ ಭಯ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಮುಂದಿನ ಸಿಎಂ ಆಗುವ ಆಸೆ ಹೊರಹಾಕಿದಂತಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಎರಡನೇ ದಿನದ ಪ್ರವಾಸದದಲ್ಲಿ ಸಿದ್ದರಾಮಯ್ಯ ಅವರು ಇಂದು(ಭಾನುವಾರ) ಜಮಖಂಡಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿಯವರೆಲ್ಲಾ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ವೀರಾವೇಶದ ಭಾಷಣ ವಿಚಾರ ಪ್ರಸ್ತಾಪಿಸಿದ ಅವರು ಇವರ ಭಾಷಣ ಮಾಡೋವಾಗ ಜನ ಎದ್ದು ಹೋದ್ರು, ಅಲ್ಲೇ ಇವರ ಧಮ್ ತೋರಿಸೋಕೆ ಆಗಲಿಲ್ಲ.ಜನ ಇವರ ಧಮ್ ನ್ನ ಈಗಾಗಲೇ ನೋಡಿ ಬಿಟ್ಟಿದ್ದಾರೆ ಎಂದೂ ಟೀಕಾಪ್ರಹಾರ ನಡೆಸಿ, ಇವರೆಲ್ಲಾ ಖಾಲಿ ಖುರ್ಚಿಗಳ ಮುಂದೆ ವೀರಾವೇಷದ ಭಾಷಣ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ರಣಕಹಳೆ: ಶತ್ರುಸೈನ್ಯಕ್ಕೆ ರಣವೀಳ್ಯ ಕೊಟ್ಟ ಕೇಸರಿ ಪಡೆ!
ಖಾಲಿ ಕುರ್ಚಿಗಳ ಮುಂದೆ ಸ್ಮೃತಿ ಇರಾನಿ & ಸಿಎಂ ಬೊಮ್ಮಾಯಿ ಜಂಬ
ಇನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಮಾತನಾಡೋವಾಗ ಎಲ್ಲಾ ಖಾಲಿ ಕುರ್ಚಿಗಳೇ ಇದ್ದವು. ಬೊಮ್ಮಾಯಿ ಖಾಲಿ ಕುರ್ಚಿ ಮುಂದೆ ಜಂಬ ಕೊಚ್ಚಿಕೊಂಡು ಮಾತನಾಡಿದ್ದಾರೆ. ಹಾನಗಲ್ ನಲ್ಲೂ ಹೀಗೆ ವೀರವೇಶದಿಂದ ಮಾತನಾಡಿದ್ರು, ಅಲ್ಲಿಯೇ ನಮ್ಮ ಧಮ್ ಗೊತ್ತಾಯ್ತು ಅವರಿಗೆ. ಸಿಎಂಗೆ ಪಕ್ಕದ ಹಾನಗಲ್ ಬೈ ಎಲೆಕ್ಷನ್ ಗೆಲ್ಲೋಕೆ ಆಗಲಿಲ್ಲ.ರಾಜ್ಯದಲ್ಲಿ ಇವರಿಗೆ ಗೆಲ್ಲಿಸೋಕೆ ಆಗುತ್ತಾ ಎಂದರು.
ನನ್ನನ್ನು ಟಾರ್ಗೆಟ್ ಮಾಡಿಕೊಂಡು ಎಲ್ಲರೂ ಮಾತನಾಡಿದ್ದಾರೆ. ಸಿದ್ದರಾಮಯ್ಯನೇ ಅವರಿಗೆ ಟಾರ್ಗೆಟ್. ಅದರ ಅರ್ಥ ಏನಂದರೆ ನನ್ನನ್ನ ಕಂಡರೆ ಭಯ. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೇ ಅನ್ನೋ ಭಯ. ಆ ಎಲ್ಲ ಭಯದಿಂದಲೇ ಹಾಗೆ ಮಾತನಾಡಿದ್ದು, ಭಯ ಇಲ್ಲದೆ ಹೋದರೆ ನನ್ನ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ. ದಾವಣಗೆರೆ ಕಾರ್ಯಕ್ರಮ ಬಳಿಕ ಬಿಜೆಪಿಯವರಿಗೆ ಹತಾಶೆಯಾಗಿದೆ ಎಂದು ಹೇಳಿದರು.
ಅಧಿಕಾರಕ್ಕೆ ಬರಲು ಬಿಡಲ್ಲ ಅಂತ ಹೇಳಲು ಯಡಿಯೂರಪ್ಪ ಯಾರು ?
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬಿಡಲ್ಲ ಅಂತ ಹೇಳಲು ಯಡಿಯೂರಪ್ಪ ಯಾರು ? ಎಂದು ಸಿದ್ದರಾಮಯ್ಯ ಮರುಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪರಿಗೆ ಓಟುಗಳು ಇವರ ಜೇಬಿನಲ್ಲಿ ಇದಾವಾ ? ಎಂದರು. 2023 ರ ಚುನಾವಣೆಗೆ ಹೋಗೋಣ. ಆಗ ಯಾರ ದಮ್, ತಾಕತ್ ಏನು ಎನ್ನುವುದು ಗೊತ್ತಾಗುತ್ತೆ ಎಂದು ತಿರುಗೇಟು ಅವರು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕಾಂಗ್ರೆಸ್ ಗೆಲ್ಲಲು ಬಿಡಲ್ಲ, ಮೋದಿ ಪ್ರಧಾನಿಯಾಗಿರುವವರೆಗೆ ರಾಜ್ಯದಲ್ಲಿ 'ಕೈ'ಗಿಲ್ಲ ಅಧಿಕಾರ: ಬಿಎಸ್‌ವೈ
ಪ್ರವಾಹ ಪೀಡಿತ ಪ್ರದೇಶಕ್ಕೆ ಬಾರದ ಸಚಿವರ ಕಿಡಿ
ಇನ್ನು ಪ್ರವಾಹದಲ್ಲಿ ಇಷ್ಟೆಲ್ಲ ಅನಾಹುತ ಆದರೂ ಸರ್ಕಾರ ಪರಿಹಾರ ಕೊಟ್ಟಿಲ್ಲ. ನಾನು ನವಲಗುಂದ, ನರಗುಂದ, ಬಾದಾಮಿ ಪ್ರವಾಹ ಸ್ಥಳಕ್ಕೆ ಹೋಗಿದ್ದೆ. ಎಲ್ಲೂ ಸಹ ಪರಿಹಾರ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ದೂರಿದರು. ಜೂನ್ ತಿಂಗಳಿಂದ ಪ್ರವಾಹ, ಮಳೆಯಿಂದ ಮನೆ, ಬೆಳೆ ಹಾನಿ, ರಸ್ತೆ ಹಾಳಾಗಿವೆ ಎಲ್ಲೂ ಪರಿಹಾರ ಕೊಟ್ಟಿಲ್ಲ. ಮೂರ್ಖರು ಡ್ಯಾನ್ಸ್ ಮಾಡ್ತಾ ಇದ್ದಾರೆ. ಪರಿಹಾರ ಕಾರ್ಯದ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದರು.
ಭಾರಿ ಮಳೆಯಿಂದ ಇಷ್ಟೆಲ್ಲ ತೊಂದ್ರೆ ಆದ್ರೂ ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಂತ್ರಿಗಳು ಧ್ವಜಾರೋಹಣ ಮಾಡಲು ಅಷ್ಟೆ ಸೀಮಿತ. ಆಗಸ್ಟ್ 15, ಜನೆವರಿ 26, ನವಂಬರ್ 1 ಕ್ಕೆ ಧ್ವಜರೋಹಣ ಮಾಡಲು ಬರ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು ಇದೇ ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದಾರೆ, ಅವರು ಬಂದಿದ್ದಾರಾ ಎಂದರು. ಮುರುಗೇಶ್ ನಿರಾಣಿ ಇದೆಲ್ಲ ಬಿಟ್ಟು ಬಡವರ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.
ಸಿ.ಟಿ.ರವಿ ಅಲ್ಲ ಅವನು ಲೂಟಿ ರವಿ
ಅವನು ಸಿ.ಟಿ.ರವಿ ಅಲ್ಲ ಲೂಟಿ ರವಿ ಅಂತ ನಾನು ಕರೆಯುತ್ತಿಲ್ಲ, ಜನ ಕರೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿ ಟಿ ರವಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜನ ಹೀಗೆ ಕರೆಯುವುದು, ನಾನು ಕರೆಯುವುದಿಲ್ಲ,ಜನರೇ ಹೀಗೆ ಕರೆಯುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಸಿ ಟಿ ರವಿ ವಿರುದ್ದ ವಾಗ್ದಾಳಿ ನಡೆಸಿ,ಅರ್ಕಾವತಿ, ಸೋಲಾರ್ ಹಗರಣ ತನಿಖೆ ಬಹಿರಂಗ ಪಡಿಸುವ ಬಗ್ಗೆ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಮ್ಮನ್ನು ಹೆದರಿಸುತ್ತೀರಾ.? ಬ್ಲಾಕ್ ಮೇಲ್ ಮಾಡ್ತಿರಾ?,ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ ಎಂದ ಅವರು,2006 ರಿಂದ ಈ ವರೆಗೂ 16 ವರ್ಷದಲ್ಲಿ ಬಿಜೆಪಿ 11 ವರ್ಷ ಅಧಿಕಾರ ಮಾಡಿದೆ. ನಾವು ಐದು ವರ್ಷ ಇದ್ದೇವು,ಸಿದ್ದರಾಮಯ್ಯ ಸರ್ಕಾರದ ಹಗರಣ ಅಂತಾರೆ, ಅಲ್ಲಪ್ಪಾ 2006 ರಿಂದ ಎಲ್ಲವನ್ನು ತನಿಖೆ ಮಾಡಿ ಎಂದು ಸಿದ್ದರಾಮಯ್ಯನವರ ಸರ್ಕಾರಕ್ಕೆ ಸವಾಲ್ ಹಾಕಿದರು.
2006 ರಿಂದ 2023 ರ ವರೆಗೂ ಎಲ್ಲ ಯಾರ ಕಾಲದಲ್ಲಿ ಏನಾಗಿದೆ ಎಲ್ಲವನ್ನು ತನಿಖೆ ಮಾಡಲು ಆಯೋಗ ರಚನೆ ಮಾಡಲಿ ಎಂದು ಟಾಂಗ್ ನೀಡಿದರು. ಹಾಡಿನ ಮೂಲಕ ಸಚಿವ ಸುಧಾಕರ ವ್ಯಂಗ್ಯ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು, ಅದು ಬಿಜೆಪಿ ಅವರಿಗೂ ಅನ್ವಯಿಸುತ್ತದೆ.ಯಡಿಯೂರಪ್ಪ ಕಾಂಗ್ರೆಸ್ ಬರಲ್ಲ. ನಾವು 150 ಸೀಟ್ ಬರ್ತೀವಿ ಅಂದಿದಾರೆ. ಹಾಗಾಗಿ ಅದು ಅವರಿಗೂ ಅನ್ವಯಿಸುವುದಿಲ್ವಾ? ಕಾಂಗ್ರೆಸ್ ಬರಲ್ಲ, ಬರೋಕೆ ಬಿಡೋದಿಲ್ಲ ಅಂತ ಕನಸು ಕಾಣ್ತಿಲ್ವ? ಪಾಪ ಸುಧಾಕರಗೆ ಇದು ಗೊತ್ತೇ ಇಲ್ಲ ಎಂದು ವ್ಯಂಗ್ಯ ವಾಡಿ, ನಾವು ಮುಂದೆ ಅಧಿಕಾರಕ್ಕೆ ಬರ್ತೀವಿ ಅಂತಾ ಹೇಳುವ ಯಾವುದೇ ರಾಜಕೀಯ ಪಕ್ಷ ಅದ್ರೂ ಅದು ತಪ್ಪಲ್ಲ. ಅದನ್ನ ನಮ್ಮೊಬ್ಬರಿಗೇನೆ ರೆಫರ್ ಮಾಡ್ತಿರಲ್ಲ, ದ್ಯಾಟ್ ಇಸ್ ನಾಟ್ ಕರೆಕ್ಟ್ ಎಂದರು.ನಾವೇನೆ ಹೇಳಿದ್ರೂ ಕೂಡಾ ಅದನ್ನ ಅಲ್ಟಿಮೇಟ್ಲಿ ಜನ ತೀರ್ಮಾನ ಮಾಡೋದು ಎಂದು ಸಿದ್ದರಾಮಯ್ಯನವರ ಹೇಳಿದರು.
ಜಕನೂರು & ಮುಂಡಗನೂರು ಗ್ರಾಮಕ್ಕೆ ಭೇಟಿ
ಎರಡನೇ ದಿನದ ಪ್ರವಾಸ ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮಖಂಡಿ ಮತಕ್ಷೇತ್ರಕ್ಕೆ ಆಗಮಿಸಿ, ಜಕನೂರನ ಮಾಧವಲಿಂಗ ಸ್ವಾಮೀಜಿಗಳ ಸಿದ್ದಶ್ರೀ ಉತ್ಸವದಲ್ಲಿ ಭಾಗಿಯಾದರು. ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಸಿದ್ದರಾಮಯ್ಯ, ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಸಮಾರಂಭಕ್ಕೆ ಬಂದಿದ್ದು ಸಂತಸವಾಗಿದೆ, ಕೆಲವೊಂದು ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದೀರಿ, ಆದರೆ ಈ ಸರ್ಕಾರ ನಾವು ಹೇಳಿದ್ದನ್ನು ಮಾಡೋದಿಲ್ಲ, ಹೀಗಾಗಿ ಮುಂದೆ ನಮ್ಮ ಸರ್ಕಾರ ಬರುತ್ತೆ ಆಗ ನೀವು ಹೇಳಿದ ಎಲ್ಲ ಕೆಲಸ ಮಾಡಿ ಕೊಡುತ್ತೇವೆ ಎಂದರು. ಇದಾದ ಬಳಿಕ ಮುಂಡಗನೂರು ಗ್ರಾಮಕ್ಕೆ ಭೇಟಿ ನೀಡಿ ನಂತರ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳಿದರು.