* ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್‌ ನಾಯಕರ ವಿನೂತನ ಪ್ರತಿಭಟನೆ* ಎತ್ತಿನ ಬಂಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು* ಪ್ರತಿಭಟನೆಯನ್ನು ಟೀಕಿಸಿದ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು, (ಸೆ.13): ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ಎತ್ತಿನ ಬಂಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದರು. ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಮರ್ಥಿಸಿಕೊಂಡಿದ್ದಾರೆ.

ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ನವರು ಎತ್ತಿನಗಾಡಿ ಮೇಲೆ ವಿಧಾನಸೌಧಕ್ಕೆ ಬರಬೇಕಿತ್ತು ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಲೆ ಏರಿಕೆ ವಿರೋಧಿಸಿ ಪಾರ್ಲಿಮೆಂಟ್ ಗೆ ಎತ್ತಿನಗಾಡಿ ಮೇಲೆ ಬಂದಿದ್ದರು. ಈಗ ನಾವು ಬಂದರೆ ತಪ್ಪಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

'ಪ್ರಾಣಿಗಳಿಗೆ ತೊಂದ್ರೆ ಕೊಡೋ ಬದ್ಲು ಸೈಕಲ್​ನಲ್ಲಿ ಬಂದಿದ್ರೆ ಚೆನ್ನಾಗಿರ್ತಿತ್ತು'

ಯುಪಿಎ ಸರ್ಕಾರದ ಸಂದರ್ಭದಲ್ಲಿ ಕಚ್ಚಾತೈಲದ ಬೆಲೆ 110 ಡಾಲರ್ ಮೇಲಿತ್ತು. ಆದರೂ ಕಡಿಮೆ ದರದಲ್ಲಿ ಪೆಟ್ರೋಲ್ ನೀಡಲಾಗುತ್ತಿತ್ತು. ಈಗ ಕಚ್ಚಾ ತೈಲ ಬೆಲೆ 70 ಡಾಲರ್ ಇದೆ. ಆದರೆ ಪೆಟ್ರೋಲ್ 100 ರ ಗಡಿ ದಾಟಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 3.45 ರೂ ಮಾತ್ರ ಪ್ರತಿ ಲೀಟರ್ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ 33 ರೂಗಳಷ್ಟು ಪ್ರತಿ ಲೀಟರ್ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಲಿ ನೋಡೊಣ ಎಂದು ಸವಾಲು ಹಾಕಿದರು.

ಎಲ್ ಪಿಜಿ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆ ಅವರು ತಲೆ ಮೇಲೆ ಸಿಲೆಂಡರ್ ಹೊತ್ಕೊಂಡು ಪ್ರತಿಭಟನೆ ಮಾಡಿದ್ದರು‌. ಈಗ ಶೋಭಾ ಕರಂದ್ಲಾಜೆ ಅವರು ಏಲ್ಲಿ ಹೋಗಿದ್ದಾರೆ ಎಂದು ಕೇಳಿದರು.