Asianet Suvarna News Asianet Suvarna News

ಬಿಜೆಪಿ ಮಹಾನ್‌ ಸುಳ್ಳುಗಾರನೆಂದು ಮತ್ತೆ ಸಾಬೀತು: ಸಿದ್ದರಾಮಯ್ಯ

ಪರೇಶ್‌ ಮೇಸ್ತಾ ಸಾವು ಆಕಸ್ಮಿಕ ಎಂದು ನರೇಂದ್ರ ಮೋದಿ ಸರ್ಕಾರದ ಸಿಬಿಐ ವತಿಯಿಂದಲೇ ಬಿ ರಿಪೋರ್ಟ್‌ ನೀಡಲಾಗಿದೆ. ಇದರಿಂದ ಬಿಜೆಪಿಯವರು ಮಹಾ ಸುಳ್ಳುಗಾರರು ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ತಮ್ಮ ಸುಳ್ಳುಗಳಿಗೆ ಬಹಿರಂಗವಾಗಿ ಜನರ ಕ್ಷಮೆ ಯಾಚಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

siddaramaiah has demanded that the bjp should apologize in the case of paresh mestas death gvd
Author
First Published Oct 6, 2022, 11:25 AM IST

ಬೆಂಗಳೂರು (ಅ.06): ಪರೇಶ್‌ ಮೇಸ್ತಾ ಸಾವು ಆಕಸ್ಮಿಕ ಎಂದು ನರೇಂದ್ರ ಮೋದಿ ಸರ್ಕಾರದ ಸಿಬಿಐ ವತಿಯಿಂದಲೇ ಬಿ ರಿಪೋರ್ಟ್‌ ನೀಡಲಾಗಿದೆ. ಇದರಿಂದ ಬಿಜೆಪಿಯವರು ಮಹಾ ಸುಳ್ಳುಗಾರರು ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ತಮ್ಮ ಸುಳ್ಳುಗಳಿಗೆ ಬಹಿರಂಗವಾಗಿ ಜನರ ಕ್ಷಮೆ ಯಾಚಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಬಿಜೆಪಿಯವರ ಬಣ್ಣ ಬಯಲಾಗಿದ್ದರಿಂದ ನಾವು ಸಾಕ್ಷ್ಯ ನಾಶ ಮಾಡಿ ಸಿಬಿಐ ತನಿಖೆಗೆ ನೀಡಿದ್ದೆವು ಎನ್ನುತ್ತಿದ್ದಾರೆ. ಸಾಕ್ಷ್ಯ ನಾಶ ಮಾಡಿದ್ದರೆ ಸಿಬಿಐ ತನಿಖೆಯಲ್ಲಿ ಹೇಳಬೇಕಿತ್ತಲ್ಲವೇ? 

ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದು ಯಾರು? ಕೇಂದ್ರ ಗೃಹ ಸಚಿವರು ಯಾರು?’ ಎಂದು ತರಾಟೆಗೆ ತೆಗೆದುಕೊಂಡರು. ನನ್ನ ಅವಧಿಯಲ್ಲಿ ನಾನು ಎಂಟು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದೆ. ಡಿ.ಕೆ. ರವಿ, ಡಿವೈಎಸ್‌ಪಿ ಗಣಪತಿ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲೂ ಸಿಬಿಐ ಬಿ-ರಿಪೋರ್ಟ್‌ ನೀಡಿದೆ. ಪರೇಶ್‌ ಮೇಸ್ತಾ ಸಾವಾದಾಗ ಬಿಜೆಪಿಯವರು ದೊಡ್ಡ ಗಲಾಟೆ ಮಾಡಿದ್ದರು. ಹೀಗಾಗಿ ಸಿಬಿಐ ತನಿಖೆಗೆ ನೀಡಿದ್ದೆ. ಈಗ ಸಿಬಿಐ ಅವರೇ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಈ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ಒತ್ತಾಯಿಸಿದರು.

ನಾನು ಸಿದ್ದು ಒಂದಾಗಿದ್ದೇವೆ, ಬಿಜೆಪಿ ಆಟ 6 ತಿಂಗಳಷ್ಟೇ: ಡಿಕೆಶಿ

ಕಾಂಗ್ರೆಸ್‌ ಪಕ್ಷದಿಂದ ಬಸ್‌ ಯಾತ್ರೆ ಶೀಘ್ರ ದಿನಾಂಕ ನಿಗದಿ: ಮಂಬರುವ ವಿಧಾನ ಸಭಾ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್‌ ಪಕ್ಷದಿಂದ ಬಸ್‌ಯಾತ್ರೆ ನಡೆಯುವ ಕುರಿತಂತೆ ಶೀಘ್ರದಲ್ಲಿಯೇ ದಿನಾಂಕ ನಿಗಧಿಗೊಳಿಸಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿಗೆ ಪುತ್ರ ಯತೀಂದ್ರ ಸಿದ್ದರಾಮಯ್ಯರೊಂದಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಶಿವಪುರದಲ್ಲಿ ಬುಧವಾರ ಸಂಜೆ ಕಾಂಗ್ರೆಸ್‌ ಮುಖಂಡ ಕದಲೂರು ರಾಮಕೃಷ್ಣ ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಥಯಾತ್ರೆಯನ್ನು ಈ ಹಿಂದೆ ಅಕ್ಟೋಬರ್‌ ಅಥವಾ ನವೆಂಬರ್‌ ಮಾಸಾಂತ್ಯದಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. 

ಆದರೆ, ಕೆಲವೊಂದು ಕಾರಣಗಳಿಂದ ದಿನಾಂಕ ನಿಗದಿಗೊಳಿಸಲು ವಿಳಂಬವಾಗಿದೆ. ಬಸ್‌ ಯಾತ್ರೆ ಕುರಿತಂತೆ ಪೂರ್ವಭಾವಿ ಸಭೆ ಈ ಮಾಸಾಂತ್ಯದಲ್ಲಿ ನಡೆಯಲಿದೆ ಎಂದರು. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಸ್‌ಯಾತ್ರೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ನಾನು ಎರಡು ತಂಡಗಳಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇವೆ. ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ಬಸ್‌ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಬಸ್‌ ಯಾತ್ರೆ ಬಗ್ಗೆ ವರಿಷ್ಠರನ್ನು ಸದ್ಯದಲ್ಲೇ ಭೇಟಿ ಮಾಡಿ ಯಾತ್ರೆ ಬಗ್ಗೆ ಅವರ ಒಪ್ಪಿಗೆ ಪಡೆಯಲಾಗುವುದು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಪಕ್ಷದ ಬಗ್ಗೆ ಜನರಲ್ಲಿ ದಿನೇ ದಿನೇ ಒಲವು ಹೆಚ್ಚಾಗುತ್ತಿದೆ ಎಂದರು.

ನಕಲಿ ಗಾಂಧಿಗಳು ಎಂದರೆ ಯಾರು?: ಸಿಎಂ ಬೊಮ್ಮಾಯಿಗೆ ಸಿದ್ದು ತಿರುಗೇಟು

ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಅದರ ಪ್ರಕ್ರಿಯೆ ಮುಗಿದ ನಂತರ ನಾನೂ ಒಳಗೊಂಡಂತೆ ಕಾಂಗ್ರೆಸ್‌ ಮುಖಂಡರು ಅದರ ಪರ ಪ್ರಚಾರ ನಡೆಸುತ್ತೇವೆ. ಖರ್ಗೆ ನಮ್ಮ ರಾಜ್ಯದವರೇ ಆದ ಕಾರಣ ಅವರ ಗೆಲುವಿಗೆ ನಮ್ಮ ಎಲ್ಲ ಮುಖಂಡರು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು. ಮದ್ದೂರು ತಾಲೂಕು ಕಾಂಗ್ರೆಸ್‌ ವಕ್ತಾರ ಎಂ.ಪಿ. ಅಮರ ಬಾಬು, ತಾಪಂ ಮಾಜಿ ಸದಸ್ಯ ಕೆ.ಆರ್‌.ಮಹೇಶ್‌, ಮುಖಂಡರಾದ ಚಾರ್ಮಿ ಜಗದೀಶ್‌ ಅಲಿಯಾಸ್‌ ಚಿರು, ಅರುಣ, ಅಭಿಲಾಷ್‌ ಇತರರು ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.

Follow Us:
Download App:
  • android
  • ios