ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕೆಟ್‌ಗಳ ಹೆಸರಲ್ಲಿ 200 ಕೋಟಿ ರು.ಗಿಂತ ಹೆಚ್ಚು ಹಣ ಲೂಟಿ ಮಾಡಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ಬೆಂಗಳೂರು (ಮಾ.7) : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕೆಟ್‌ಗಳ ಹೆಸರಲ್ಲಿ 200 ಕೋಟಿ ರು.ಗಿಂತ ಹೆಚ್ಚು ಹಣ ಲೂಟಿ ಮಾಡಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಮತ್ತವರ ಅವಧಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(Department of Personnel and Administrative Reforms)ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ(Karnataka Lokayukta)ದಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ((CM Basavaraj Bommai) ಅವರಿಗೆ ಪತ್ರ ಬರೆದಿದ್ದಾರೆ.

ನಾಯಿ ಮರಿ ಹೇಳಿಕೆಗೆ ತೇಪೆ ಹಚ್ಚಿದ ಸಿದ್ದು, ಸರ್ಕಾರಕ್ಕೆ ಮತ್ತೆ ಪಂಚಮಸಾಲಿ ಗುದ್ದು!

ಸೋಮವಾರ ಬಿಜೆಪಿ ಕಚೇರಿಯಲ್ಲಿ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತವರ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ನಡೆಸಿರುವ ಬೃಹತ್‌ ಹಗರಣ ಇದಾಗಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯು ಒಂದು ದಿನವೂ ರಜೆ ಇಲ್ಲದೆ ಎಲ್ಲಾ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಎಲ್ಲಾ ಸರ್ಕಾರಿ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಿದೆ ಎಂದು ಭಾವಿಸಿದರೂ ಐದು ವರ್ಷಗಳ ಅವಧಿಯ ಒಟ್ಟು 1,825 ದಿನಗಳಲ್ಲಿ ಸಿದ್ದರಾಮಯ್ಯ ಅವರ ಅಧಿಕೃತ ಕಚೇರಿ ಸಭೆಗಳಲ್ಲಿ ಮತ್ತು ಅತಿಥಿ ಗಣ್ಯರ ಉಪಚಾರಗಳ ಹೆಸರಲ್ಲಿ ಕಾಫಿ, ತಿಂಡಿ, ಸ್ನಾಕ್ಸ್‌, ಉಪಹಾರಗಳಿಗೆ ಎಂದು ಪ್ರತಿ ದಿನವೊಂದಕ್ಕೆ ಸರಾಸರಿ 10.99 ಲಕ್ಷ ರು. ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

2013-14ನೇ ಸಾಲಿನಲ್ಲಿ 36.03 ಕೋಟಿ ರು., 2014-15ನೇ ಸಾಲಿನಲ್ಲಿ 38.26 ಕೋಟಿ ರು., 2015-16ನೇ ಸಾಲಿನಲ್ಲಿ 36.66 ಕೋಟಿ ರು., 2016-17ನೇ ಸಾಲಿನಲ್ಲಿ 44.73 ಕೋಟಿ ರು., 2017-18ನೇ ಸಾಲಿನಲ್ಲಿ 44.93 ಕೋಟಿ ರು., ವೆಚ್ಚ ಮಾಡಲಾಗಿದೆ. ಅಧಿಕಾರಿಗಳು ನಕಲಿ ದಾಖಲೆಗಳ ರಾಶಿಯನ್ನೇ ತಯಾರಿಸಿ ನಂಬಲಸಾಧ್ಯವಾದಂತಹ ಲೆಕ್ಕವನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ಯಾವ ವರ್ಷ ಎಷ್ಟುಖರ್ಚು?

  • 2013-14 36.03 ಕೋಟಿ
  • 2014-15 38.26 ಕೋಟಿ
  • 2015-16 36.66 ಕೋಟಿ
  • 2016-17 44.73 ಕೋಟಿ
  • 2017-18 44.93 ಕೋಟಿ

ಐದು ವರ್ಷಗಳಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ 200 ಕೋಟಿ ರು.ಗಿಂತ ಹೆಚ್ಚು ಲೂಟಿ ಮಾಡಿರುವುದು ಬಟಾಬಯಲಾಗಿದೆ. ಸಿಎಜಿ ವರದಿಯಲ್ಲಿಯೂ ಇದಕ್ಕೆ ತೀವ್ರ ಆಕ್ಷೇಪಣೆಗಳನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಲಾಗಿದೆ. ಆದರೂ ಸಿದ್ದರಾಮಯ್ಯ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮೂಲಕ ತಾವೆಂತಹ ಭಂಡ ರಾಜಕಾರಣಿ ಎಂಬುದನ್ನು ಜಗಜ್ಜಾಹೀರುಪಡಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಕಳೆದ 75 ವರ್ಷಗಳಲ್ಲಿ ಕರ್ನಾಟಕ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ ಬೇರೆ ಇನ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲಿಯೂ ಸಹ ನಡೆಯದ ಅತಿಥಿ ಉಪಚಾರದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಡೆದಿದೆ. ಹಾಸಿಗೆ-ದಿಂಬು, ಇಂದಿರಾ ಕ್ಯಾಂಟೀನ್‌ ತಿಂಡಿ, ನೆಲದಡಿಯ ಕಸದ ಡಬ್ಬಗಳು ಮತ್ತು ಎಲ್‌ಇಡಿ ದೀಪಗಳ ಅಳವಡಿಕೆಯಂತಹ ಯೋಜನೆಗಳ ಹೆಸರಲ್ಲಿ ಸಾವಿರಾರು ಕೋಟಿ ರು. ಲೂಟಿ ಮಾಡಿರುವ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯಗಳಿಗೆ ಕಾಫಿ, ತಿಂಡಿ, ಬಿಸ್ಕೆಟ್‌ ಪೂರೈಕೆ ಹೆಸರಲ್ಲೂ 200 ಕೋಟಿ ರು.ಗಿಂತ ಹೆಚ್ಚು ಹಣವನ್ನು ಲೂಟಿ ಮಾಡಲಾಗಿದೆ. ಇದನ್ನು ಗಮನಿಸಿದರೆ ಸಿದ್ದರಾಮಯ್ಯ ಸರ್ಕಾರದಂತಹ ಬೃಹತ್‌ ಭ್ರಷ್ಟಾಚಾರಗಳ ಸರ್ಕಾರ ದೇಶದಲ್ಲಿ ಮತ್ತೊಂದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

2013-14ರಿಂದ 2017-18ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ/ಗಣ್ಯರ ಉಪಚಾರ ಕಾರ್ಯಗಳ ಹೆಸರಲ್ಲಿ 200 ಕೋಟಿ ರು.ಗಿಂತ ಹೆಚ್ಚು ಹಣ ಲೂಟಿ ಮಾಡಲಾಗಿದೆ ಎಂದು ದೂರಿದರು.

ದಿನಕ್ಕೆ 11 ಲಕ್ಷ ರೂ. ಖರ್ಚು:

ಐದು ವರ್ಷಗಳ ಅವಧಿ ಎಂದರೆ ಒಟ್ಟು 1,825 ದಿನಗಳು, 52 ಭಾನುವಾರಗಳು, 12 ಎರಡನೇ ಶನಿವಾರಗಳು ಮತ್ತು 20ಕ್ಕೂ ಹೆಚ್ಚು ಸರ್ಕಾರಿ ರಜಾ ದಿನಗಳು ಸೇರಿದಂತೆ ಪ್ರತಿ ವರ್ಷಕ್ಕೆ 82 ದಿನಗಳಂತೆ, ಐದು ವರ್ಷಗಳಿಗೆ ಸುಮಾರು 410 ದಿನಗಳು ಸರ್ಕಾರಿ ರಜಾದಿನಗಳಾಗುತ್ತವೆ. 

ಖರ್ಚಾಗಿದ್ದು ಕೇವಲ .3.26 ಕೋಟಿ: ಸಿದ್ದು

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಹಗರಣದ ದಿಕ್ಕು ತಪ್ಪಿಸಲು ಬಿಜೆಪಿ ಮುಂದಾಗಿದ್ದು, ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಆತಿಥ್ಯಕ್ಕಾಗಿ 200 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಸುಳ್ಳು ಹೇಳಿ ನಾಡಿನ ಜನರಿಗೆ ದ್ರೋಹವೆಸಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2013-14ರಿಂದ 2017-18ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ, ತಿಂಡಿ ಮತ್ತು ಊಟ ಇತ್ಯಾದಿ ಆತಿಥ್ಯದ ವೆಚ್ಚಕ್ಕೆ 3.26 ಕೋಟಿ ರು. ಖರ್ಚಾಗಿದೆ. ಆದರೆ, 200 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಇದು ಐಪಿಸಿ ಸೆಕ್ಷನ್‌ 420ಗೆ ಅರ್ಹವಾದ ಪ್ರಕರಣ. ಈ ಮೂಲಕ ಇಡೀ ಬಿಜೆಪಿಯೇ ಸುಳ್ಳಿನ ಕಾರ್ಖಾನೆ ಎಂಬುದು ಪದೇ ಪದೇ ಸಾಬೀತು ಆಗುತ್ತಿದೆ ಎಂದಿದ್ದಾರೆ.

ವಾಸ್ತವದಲ್ಲಿ 2013-14ರಿಂದ 2017-18ರವರೆಗೆ ಕಾಫಿ- ತಿಂಡಿ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಯು ಆತಿಥ್ಯಕ್ಕಾಗಿ ಖರ್ಚು ಮಾಡಿದ ದಾಖಲೆಗಳನ್ನು ಸರ್ಕಾರ ನನಗೆ ನೀಡಿದೆ. 2013ರ ಮೇ 13ರಿಂದ 2014 ಜನವರಿ 30ರವರೆಗೆ 85.13 ಲಕ್ಷ ರು.ಗಳು, 2014-15ರಲ್ಲಿ 58.45 ಲಕ್ಷ ರು.ಗಳು, 2015-16 ರಲ್ಲಿ 39.20 ಲಕ್ಷ ರು.ಗಳು, 2016-17 ರಲ್ಲಿ 66.03 ಲಕ್ಷ ಮತ್ತು 2017- 18ರಲ್ಲಿ 77.26 ಲಕ್ಷ ರು.ಗಳನ್ನು ವೆಚ್ಚ ಮಾಡಲಾಗಿದೆ ಎಂದರು.

ಪ್ರಿಯಾಂಕ್ ಖರ್ಗೆ ಆರೋಪಿಸ್ತಾರೆ, ದಾಖಲೆ ನೀಡಲ್ಲ: ಭಷ್ಟಾಚಾರ ಅಂದ್ರೆ ಸಿದ್ದು ಸರ್ಕಾರ: ಕಟೀಲ್‌

ನ್ಯಾಯಾಂಗ ತನಿಖೆಗೆ ಆಗ್ರಹ:

ಕಾಫಿ, ತಿಂಡಿಗೆ ಸಿದ್ದರಾಮಯ್ಯ 200 ಕೋಟಿ ರು. ಖರ್ಚು ಮಾಡಿದ್ದಾರೆ ಎಂಬ ದಾಖಲೆಯನ್ನು ಮುಖ್ಯಮಂತ್ರಿಯವರು ಜನರ ಮುಂದಿಡಬೇಕು. ಜೊತೆಗೆ ಈ ಪ್ರಕರಣವನ್ನು ಸೇರಿದಂತೆ ಬಿಜೆಪಿಯ 40 ಪರ್ಸೆಂಟ್‌ ಭ್ರಷ್ಟಾಚಾರಗಳನ್ನೂ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಒತ್ತಾಯಿಸಿರುವ ಅವರು, ಮಾಡಾಳು ವಿರೂಪಾಕ್ಷಪ್ಪ ಅವರ ಪ್ರಕರಣದಿಂದ ವಿಷಯಾಂತರ ಮಾಡಲು ಈ ರೀತಿಯ ಅಗ್ಗದ ಗಿಮಿಕ್‌ಗಳನ್ನು ಮಾಡಲು ಬಿಜೆಪಿ ಹೀನಾತಿಹೀನ ರಾಜಕಾರಣ ಮಾಡಲು ಪ್ರಾರಂಭಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.