ಕ್ರಾಂತಿಕಾರಿ ಕಾರ್ಯಕ್ರಮ ನೀಡಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರದ್ದು: ಎಚ್.ಕೆ. ಪಾಟೀಲ
ಸ್ವಾಭಿಮಾನ ಮತ್ತು ಗರ್ವ ಉಳಿಯುವ ರೀತಿಯಲ್ಲಿ ಡಿಬಿಟಿ. ಮೂಲಕ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದು ಕ್ರಾಂತಿಯಲ್ಲದೇ ಇನ್ನೇನು ಎಂದ ಸಚಿವ ಎಚ್.ಕೆ ಪಾಟೀಲ
ಮುಂಡಗೋಡ(ಏ.28): ಬಡವರ ಅಡಚಣೆ ನೀಗಿಸುವ ಹಾಗೂ ತಾಯಂದಿರ ನೋವು ನಿವಾರಣೆ ಮಾಡುವ ದೃಷ್ಟಿಯಿಂದ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ದೇಶದಲ್ಲಿಯೇ ಕ್ರಾಂತಿಕಾರಿ ಕಾರ್ಯಕ್ರಮವನ್ನು ನೀಡಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಹೇಳಿದರು. ಶನಿವಾರ ಸಂಜೆ ಪಟ್ಟಣದ ಮಾರಿಕಾಂಬಾ ದೇವಾಲಯ ಬಳಿ ಆಯೋಜಿಸಲಾದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ವಾಭಿಮಾನ ಮತ್ತು ಗರ್ವ ಉಳಿಯುವ ರೀತಿಯಲ್ಲಿ ಡಿ.ಬಿ.ಟಿ. ಮೂಲಕ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದು ಕ್ರಾಂತಿಯಲ್ಲದೇ ಇನ್ನೇನು ಎಂದ ಅವರು, ಹಿಂದೆಲ್ಲ ದೆಹಲಿಯಿಂದ ೧ ರೂಪಾಯಿ ಕಳುಹಿಸಿದರೆ ಇಲ್ಲಿಗೆ ಬಂದು ತಲುಪಬೇಕಾದರೆ ಅದು ೧೬ ಪೈಸೆ ಆಗಿರುತ್ತಿತ್ತು. ಈ ಸೋರಿಕೆಯನ್ನು ತಪ್ಪಿಸಿ ಶೂನ್ಯ ಶೋಷಣೆ ಹಾಗೂ ಶೂನ್ಯ ಸೋರಿಕೆಯೊಂದಿಗೆ ಭ್ರಷ್ಟಾಚಾರವಿಲ್ಲದೆ ನೇರವಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಇಷ್ಟೆಲ್ಲ ಯೋಜನೆಗಳನ್ನು ಯಶಸ್ವಿಗೊಳಿಸಿಯು ಉತ್ತಮ ಬಜೆಟ್ ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.
ಕಾಂಗ್ರೆಸ್‌ಗೆ ವಿರೋಧ ಪಕ್ಷವಾಗುವ ಅರ್ಹತೆಯೂ ಇಲ್ಲ: ವಿಶ್ವೇಶ್ವರ ಹೆಗ್ಡೆ ಕಾಗೇರಿ ವಾಗ್ದಾಳಿ
ದೇಶದ ಬೆನ್ನೆಲುಬಾದ ರೈತರ ೩ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದಿದ್ದ ಕೇಂದ್ರ ಬಿಜೆಪಿ ಸರ್ಕಾರ ಶ್ರೀಮಂತ ಉದ್ಯಮಿಗಳ ೧೪.೭೬ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇಕಿಲ್ಲ. ಚೌಕಿದಾರ ಮಾಡುವ ಕೆಲಸ ಇದೇ ಏನು? ಇದಕ್ಕೆ ರಾಷ್ಟ್ರದ ಲೂಟಿ ಎನ್ನದೆ ಇನ್ನೇನು ಎನ್ನಬೇಕು? ಬಿಜೆಪಿಯವರು ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸುವುದು ಹೋಗಲಿ, ಜನರು ಇದ್ದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ದೇಶ ನೆಮ್ಮದಿಯಿಂದ ಇರಬೇಕಾದರೆ ಕಾಂಗ್ರೆಸ್ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ, ಕೆ.ಪಿ.ಸಿ.ಸಿ. ಸದಸ್ಯ ಮರಿಯೋಜಿ ರಾವ್, ಎಸ್.ಕೆ. ಭಾಗ್ವತ, ಎಚ್.ಎಂ. ನಾಯ್ಕ, ರವಿಗೌಡ ಪಾಟೀಲ, ಆಲೆಹಸನ ಬೆಂಡಿಗೇರಿ, ಬಸವರಾಜ ನಡುವಿನಮನಿ, ರಾಜಶೇಖರ ಹಿರೇಮಠ, ರಾಮಕೃಷ್ಣ ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು. ಧರ್ಮರಾಜ ನಡಗೇರಿ ಸ್ವಾಗತಿಸಿದರು. ಗೋಪಾಲ ಪಾಟೀಲ ನಿರೂಪಿಸಿದರು.