ಹಿಂದೂ ಸಮಾಜ ಒಡೆಯುವ ಪ್ರಯತ್ನ ಯಾರೇ ನಡೆಸಿದರೂ ಯಶಸ್ವಿ ಆಗಲ್ಲ. ಜಾತಿ ಜನಗಣತಿ ಹೆಸರಲ್ಲಿ ಹಿಂದೂ ಸಮಾಜ ಒಡೆಯುತ್ತಿದ್ದು, ಗಣತಿ ಆರಂಭಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಕಳೆದುಕೊಳ್ಳುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ಶಿವಮೊಗ್ಗ (ಸೆ.20): ಹಿಂದೂ ಸಮಾಜ ಒಡೆಯುವ ಪ್ರಯತ್ನ ಯಾರೇ ನಡೆಸಿದರೂ ಯಶಸ್ವಿ ಆಗಲ್ಲ. ಜಾತಿ ಜನಗಣತಿ ಹೆಸರಲ್ಲಿ ಹಿಂದೂ ಸಮಾಜ ಒಡೆಯುತ್ತಿದ್ದು, ಗಣತಿ ಆರಂಭಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಿರುವ ಪರಿಸ್ಥಿತಿಯಲ್ಲಿ ಜಾತಿ ಜನಗಣತಿ ಮಾಡಬೇಡಿ.

ಈಗಾಗಲೇ ಹಿಂದೂ ಸಮಾಜ ತಿರುಗಿ ಬಿದ್ದಿದ್ದು, ಸಚಿವ ಸಂಪುಟದಲ್ಲೇ ಅನೇಕ ಸಚಿವರು ಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಲವು ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರಿಸಿ ಹೊಸ ಜಾತಿಗಳನ್ನು ಹುಟ್ಟು ಹಾಕಿರುವುದನ್ನು ವಿರೋಧಿಸಿದ್ದಾರೆ. ಇದಕ್ಕೂ ಮೀರಿ ಹಠ ಮಾಡಿ ಜಾತಿ ಜನಗಣತಿ ಮಾಡಿದರೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ. ಪತ್ರಿಕೆಯ ಮುಖಪುಟದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರು ಎಂದು ಬರುವುದು ಬೇಡ. ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಸಲಹೆ ನೀಡಿದರು.

ಹಿಂದೂಗಳಲ್ಲಿ ಧರ್ಮ ಪ್ರಜ್ಞೆ ಜಾಗೃತಗೊಂಡಿದೆ

ದೇಶದಲ್ಲಿ ಜಾತಿ ಮೀರಿ ಹಿಂದೂಗಳು ಒಗ್ಗಟ್ಟಾಗುವುದು ಗಣೇಶೋತ್ಸವ ಕಾರ್ಯಕ್ರಮದಲ್ಲಾಗಿದೆ. ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಹಿಂದೂ ಧರ್ಮ ಉಳಿಸಬೇಕು ಎನ್ನುವ ಮನಸ್ಥಿತಿ ಬಂದಿದೆ. ಹಿಂದೂ ಸಮಾಜ ಈಗ ಸಂಘಟಿತವಾಗಿದೆ ಎಂದು ಹೇಳಿದರು. ಕಳೆದ ಮಂಗಳವಾರ ಶಿವಮೊಗ್ಗ ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿ.ಜೆ. ಬಳಸಿದ್ದು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಡಿ.ಜೆ. ಬಳಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಅದನ್ನು ಕಾದುನೋಡೋಣ ಎಂದರು.

ಡಿಜೆ ಸೌಂಡ್‌ ಸಿಸ್ಟಂ ಬಳಕೆ ವಿಚಾರವಾಗಿ ಮಾದಾರ ಚನ್ನಯ್ಯ ಸ್ವಾಮೀಜಿ ಬೆಂಗಳೂರಿಗೆ ಹೋಗಿ, ಚಿತ್ರದುರ್ಗದಲ್ಲಿ ಡಿ.ಜೆ. ಬಳಕೆಗೆ ಪರವಾನಿಗೆ ನೀಡುವಂತೆ ಮುಖ್ಯಮಂತ್ರಿ, ಗೃಹ ಮಂತ್ರಿಗೆ ಕೇಳಿದರೂ ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ. ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಪಾಕಿಸ್ತಾನ ಜಿಂದಾಬಾದ್ ಅಂತಾ ಘೋಷಣೆ ಕೂಗಿರುವ ಮುಸ್ಲಿಮರ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಿವಮೊಗ್ಗದಲ್ಲಿ ಈದ್ ಮಿಲಾದ್‌ ವೇಳೆ ಡಿ.ಜೆ. ಸೌಂಡ್ಸ್‌ ಬಳಸಿದ್ದಕ್ಕೆ ಏನು ಕ್ರಮ ಕೈಗೊಂಡಿದೆ ಎಂದು ಈಶ್ವರಪ್ಪ ಪ್ರಶ್ನಿಸಿದರು. ಈ ಸಂದರ್ಭ ತಾಲೂಕು ವಿಎಚ್‌ಪಿ ಅಧ್ಯಕ್ಷ ಮಾಚನಾಯ್ಕನಹಳ್ಳಿ ಜಯಣ್ಣ, ಗಣಪತಿ ಸಮಿತಿಯ ಅಧ್ಯಕ್ಷ ಮಂಜುನಾಥ್ ಕಾಳೆ, ಪ್ರಮುಖರಾದ ಮಂಜುನಾಥ್, ಚಿಕ್ಕಣ್ಣ, ಮೊಟ್ಟೆ ಚಿಕ್ಕಣ್ಣ, ರಾಜು ಕರಡೇರ್, ರವಿಚಂದ್ರ ಮೊದಲಾದವರು ಹಾಜರಿದ್ದರು.