ಬೆಂಗಳೂರು (ಅ.09):  ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ನಡುವೆ ವಾಕ್ಸಮರ ಮುಂದುವರೆದಿದ್ದು, ‘ಸಿದ್ದರಾಮಯ್ಯ ಅವರಿಗೆ ಬಿಜೆಪಿಗಿಂತ ಜೆಡಿಎಸ್‌ ಬಗ್ಗೆ ಭಯ ಇದೆ. ನನ್ನ ಬಗ್ಗೆ ಇನ್ನೂ ಭಯವಿದೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಮಾತನಾಡಬಾರದು ಎಂದುಕೊಂಡರೂ ಪದೇ ಪದೇ ಅವರೇ ಕೆಣಕುತ್ತಾರೆ. ಅವರಿಗೆ ನಮ್ಮ ಬಗ್ಗೆ ಭಯ ಇದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರ ಮೊರೆ ಹೋದ ಆರ್‌.ಆರ್‌. ನಗರ ಬೈ ಎಲೆಕ್ಷನ್ ಅಭ್ಯರ್ಥಿ..!

‘ಜಾತಿ ಹೆಸರು ಹೇಳಿ ಮತ ಮತ ಕೇಳುವವರು ನಾವಲ್ಲ, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು. ಶಿರಾದಲ್ಲಿ ಹಿಂದುಳಿದ ವರ್ಗದ ಸಭೆ ನಡೆಸಿದ್ದು ಯಾರು? ಜಾತಿ ರಾಜಕೀಯ ಮಾಡುತ್ತಿರುವವರು ಯಾರು? ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಳ್ಳುವಂತಹದ್ದೇನಿಲ್ಲ. ನಮಗೆ ಅಂತಹ ದರ್ದು ಇಲ್ಲ. ಅವರ ಅಭ್ಯರ್ಥಿ ಜಯಗಳಿಸಲು ನಾನು ಅಭ್ಯರ್ಥಿ ಹಾಕದೆ ಬೆಂಬಲ ಕೊಡಬೇಕಾ? ಕಾಂಗ್ರೆಸ್‌ ಮತ್ತು ಬಿಜೆಪಿ ಪರ್ಸೆಂಟೇಜ್‌ ಸರ್ಕಾರಗಳು ಮತ್ತು ಪರಸ್ಪರ ಆರೋಪ ಮಾಡಿಕೊಂಡವು. ಆದರೆ, ನಮ್ಮ ಸರ್ಕಾರದ ಬಗ್ಗೆ ಯಾರೂ ಇಂತಹ ಆರೋಪಗಳನ್ನು ಮಾಡಲಿಲ್ಲ’ ಎಂದು ಕಿಡಿಕಾರಿದರು.