ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜು.25ರ ಬದಲು ಜು.24ರಂದು ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬೆಂಗಳೂರು (ಜು.23): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜು.25ರ ಬದಲು ಜು.24ರಂದು ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ನಿಗಮ- ಮಂಡಳಿಗಳ ನೇಮಕ ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಜು. 24ರಂದು ಸಂಜೆ 6ಕ್ಕೆ ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿಯಾಗಲಿರುವ ಉಭಯ ನಾಯಕರು ಮುಖ್ಯವಾಗಿ ನಿಗಮ-ಮಂಡಳಿ ನೇಮಕ ಕುರಿತು ಚರ್ಚಿಸಲಿದ್ದಾರೆ. ಇದಲ್ಲದೆ, ವಿಧಾನಪರಿಷತ್ ಸದಸ್ಯರ ನೇಮಕ, ರಾಜ್ಯ ರಾಜಕೀಯ ಬೆಳವಣಿಗೆ, ಮುಡಾ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಸೇರಿದಂತೆ ವಿವಿಧ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಬಿಸಿ ಸಮಾವೇಶದಲ್ಲಿ ಸಿಎಂ ಭಾಗಿ: ಜು.25ರಂದು ನವದೆಹಲಿಯ ತಾಲ್ಕತೋರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾಂಗ್ರೆಸ್ ಹಿಂದುಳಿದ ವರ್ಗಗಳ ನಾಯಕತ್ವದ ಭಾಗಿದಾರಿ ನ್ಯಾಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದ್ದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಸಹ ಭಾಗಿಯಾಗಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆಯೇ? ಎಂಬ ಕುರಿತು ಕುತೂಹಲ ಮೂಡಿದೆ.
ಸುರ್ಜೇವಾಲಾ ಹೊಗಳಿದ್ರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ನನ್ನನ್ನು ನಂಬರ್ ಒನ್ ಸಚಿವ ಎಂದು ಹೊಗಳಿದ್ದಾರೆ. ಎಲ್ಲಾ ಸಚಿವರಿಗೂ ಹೋಲಿಸಿದರೆ ಮೊದಲ ಸ್ಥಾನ ನಿಮಗೆ ಕೊಡುತ್ತೇನೆ ಎಂದಿರುವುದು ಖುಷಿ ತಂದಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಸುರ್ಜೇವಾಲಾ ಜತೆಗಿನ ಸಭೆ ಬಳಿಕ ಮಾತನಾಡಿ, 103 ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಇದೀಗ ನನ್ನೊಂದಿಗೆ ಸಭೆ ನಡೆಸಿದ್ದಾರೆ. ಹಲವು ಶಾಸಕರು ನೀಡಿರುವ ಮನೆ ಹಂಚಿಕೆ ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ನೀಡಿದ್ದಾರೆ.
ಸುರ್ಜೇವಾಲಾ ಅವರು ಯಾರಿಗೂ ಖುಷಿಪಡಿಸುವಂತೆ ಮಾತನಾಡುವವರಲ್ಲ. ಇದ್ದದ್ದನ್ನು ಇದ್ದಂತೆ ಹೇಳುವವರು ಅವರು ನನಗೆ ಬಹುಮಾನದ ರೀತಿಯಲ್ಲಿ ಮೆಚ್ಚುಗೆ ನೀಡಿರುವುದು ಖುಷಿ ತಂದಿದೆ ಎಂದರು. ನಿಮ್ಮ ಬಗ್ಗೆಯೇ ಬಿ.ಆರ್. ಪಾಟೀಲ್ ದೂರು ನೀಡಿದ್ದರಲ್ಲಾ ಎಂಬ ಪ್ರಶ್ನೆಗೆ, ನಮ್ಮ ಇಲಾಖೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ಸುರ್ಜೇವಾಲಾ ಅವರು ಹೊಗಳಿಗೆ ನೀಡುತ್ತಿದ್ದರಾ? ಬಿ.ಆರ್. ಪಾಟೀಲ್ ಅವರು ನನ್ನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಅವರ ಆರೋಪವನ್ನು ಮೊದಲು ಕೇಳಿ ಎಂದರು.


