ಬೆಂಗಳೂರು (ಸೆ.13):  ಕೊರೋನಾ ಸೋಂಕಿನಿಂದ ಗುಣಮುಖವಾಗಿದ್ದರೂ ಒಂದು ವಾರ ಮನೆಯಲ್ಲೇ ಕ್ವಾರಂಟೈನ್‌ ಆಗಬೇಕಿರುವ ಹಿನ್ನೆಲೆಯಲ್ಲಿ ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ. 

ದಯವಿಟ್ಟು ತಪ್ಪು ಭಾವಿಸದೆ ಸಹಕರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ. ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗೆ ಬಿಡುಗಡೆಯಾದ ಅವರು, ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನತೆ ಹಾಗೂ ಹಿತೈಷಿಗಳನ್ನು ಉದ್ದೇಶಿಸಿ ಶನಿವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದರು. 

ಈ ವೇಳೆ ನಮ್ಮ ನಾಯಕರು, ಕಾರ್ಯಕರ್ತರು, ರಾಜ್ಯದ ಜನರ ಪ್ರಾರ್ಥನೆ, ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡು ಮನೆಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವೈದ್ಯರು ಒಂದು ವಾರ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದಿದ್ದಾರೆ.

AICCಗೆ ಮೇಜರ್ ಸರ್ಜರಿ: ಕರ್ನಾಟಕದ ನಾಯಕರಿಗೆ ಭರ್ಜರಿ..! ..

ಈ ಹಿನ್ನೆಲೆಯಲ್ಲಿ ನಾನು ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ನೀವು ಬಂದಾಗ ಸಿಬ್ಬಂದಿ ಭೇಟಿ ಮಾಡಲು ಅವಕಾಶ ನೀಡುವುದಿಲ್ಲ. ಹೀಗಾಗಿ ತಪ್ಪು ಭಾವಿಸದೆ ಒಂದು ವಾರ ಸಹಕರಿಸಬೇಕು. ನೀವು ತೋರಿದ ಪ್ರೀತಿ, ವಿಶ್ವಾಸವೇ ನನಗೆ ಶಕ್ತಿ. ಅದಕ್ಕಾಗಿ ಕೋಟಿ ನಮಸ್ಕಾರ ಎಂದು ಧನ್ಯವಾದ ಅರ್ಪಿಸಿದರು.

- ಕೊರೋನಾ ಗುಣವಾದ ನಂತರ ಹೋಂ ಕ್ವಾರಂಟೈನಲ್ಲಿ ಕೆಪಿಸಿಸಿ ಅಧ್ಯಕ್ಷ