Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದ ಕ್ಷೇತ್ರದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ದೊಡ್ಡ ಸಂಚಲನವನ್ನೇ ಉಂಟುಮಾಡಿತ್ತು. ಆದರೆ ಈಗ ಕಾವು ದಿನೇ, ದಿನೇ ಇಳಿ ಮುಖವಾಗುತ್ತಿದೆ. ಸಿದ್ದರಾಮಯ್ಯ ಕೋಲಾರಕ್ಕೆ ಬರಬೇಕೆಂಬ ಉತ್ಸಾಹ ಕಾಂಗ್ರೆಸ್ಸಿಗರಲ್ಲೇ ಕಡಿಮೆಯಾಗುತ್ತಿದೆ.

ಕೋಲಾರ (ಜ.29): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದ ಕ್ಷೇತ್ರದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ದೊಡ್ಡ ಸಂಚಲನವನ್ನೇ ಉಂಟುಮಾಡಿತ್ತು. ಆದರೆ ಈಗ ಕಾವು ದಿನೇ, ದಿನೇ ಇಳಿ ಮುಖವಾಗುತ್ತಿದೆ. ಸಿದ್ದರಾಮಯ್ಯ ಕೋಲಾರಕ್ಕೆ ಬರಬೇಕೆಂಬ ಉತ್ಸಾಹ ಕಾಂಗ್ರೆಸ್ಸಿಗರಲ್ಲೇ ಕಡಿಮೆಯಾಗುತ್ತಿದೆ.
ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ತಮ್ಮ ತಂದೆಯವರು ಕೋಲಾರದಲ್ಲಿ ಸ್ಪರ್ಧಿಸುವುದಕ್ಕಿಂತ ನನ್ನ ಕ್ಷೇತ್ರವಾದ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಚುನಾವಣೆಯಲ್ಲಿ ಸುಲಭವಾಗಿ ಆಯ್ಕೆಯಾಗ ಬಹುದಾಗಿದ್ದು ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ನಂತರದಲ್ಲಿ ವರುಣ ಕ್ಷೇತ್ರದ ಉಸ್ತುವಾರಿ ತಂದೆಯವರ ಪರವಾಗಿ ನಾನು ವಹಿಸಿಕೊಂಡಲ್ಲಿ ಅವರು ರಾಜ್ಯದ ಆಡಳಿತ ನಿವಾಹಣೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿರುವುದು ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರ ಸುರಕ್ಷಿತವಲ್ಲವೇ ಎಂಬ ಪ್ರಸ್ನೆಯನ್ನು ಹುಟ್ಟುಹಾಕಿದೆ.
ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಖಚಿತ: ಕೆ.ಎಸ್.ಈಶ್ವರಪ್ಪ
ಅಡ್ಡಗೋಡೆಯ ಮೇಲೆ ದೀಪ: ಈ ಸಂಬಂಧವಾಗಿ ಸಿದ್ದರಾಮಯ್ಯ ತಮ್ಮ ಹಿತೈಷಿಗಳ ಬಳಿ ಚರ್ಚಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿಯೇ ಅವರು ಕೋಲಾರದಲ್ಲಿ ಸ್ಪರ್ಧಿಸುತ್ತೇನೆ, ಆದರೆ ಟಿಕೆಟ್ ಹೈಕಮಾಂಡ್ ನಿರ್ಧಾರವಾಗಿದೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯನವರ ಕುಲದೈವದ ದೈವವಾಣಿ ಪ್ರಕಾರ ಅವರ ಎರಡು ಕಡೆ ಸ್ಪರ್ಧಿದರೆ ಮಾತ್ರ ಅವರಿಗೆ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯವಿದೆ. ಇದರ ನಡುವೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿರುವುದೂ ಚರ್ಚೆಗೆ ಗ್ರಾಸವಾಗಿದೆ.
ಮತ್ತೊಂದೆಡೆ ಕೋಲಾರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ನಾನೇ ಎಂದು ಬಿಂಬಿಸಿಕೊಂಡಿರುವ ಮಾಜಿ ಸಚಿವ ವರ್ತೂರು ಪ್ರಕಾಶ್, ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ದೊಡ್ಡಪ್ರಮಾಣದಲ್ಲೇ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಆದರೆ ಟಿಕೆಟ್ ಆಕಾಂಕ್ಷಿಗಳಿಗೆ ಯಾವುದೇ ಆಶ್ವಾಸನೆ ನೀಡದಂತೆ ಬಿಜೆಪಿಯ ಸಂತೋಷ್ ಸೂಚಿಸಿರುವುದು ಗಮನಾರ್ಹ.
ಜೆಡಿಎಸ್‌ನಿಂದ ಸಿಎಂಆರ್ ಶ್ರೀನಾಥ್: ಈಗ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ವರ್ತೂರು ಪ್ರಕಾಶ್ ಮತ್ತು ಜೆ.ಡಿಎಸ್ ಪಕ್ಷದಲ್ಲಿ ಸಿ.ಎಂ.ಆರ್. ಶ್ರೀನಾಥ್ ಎಂಬುವುದು ಬಹುತೇಕ ಖಚಿತವಾಗಿದೆ. ಸಿದ್ದರಾಮಯ್ಯ ಪ್ರವೇಶದಿಂದಾಗಿ ಕಾಂಗ್ರೆಸ್ ಅಕಾಂಕ್ಷಿಗಳು ಮೌನವಾಗಿದ್ದಾರೆ. ಈ ನಡುವೆ ಸಿದ್ದರಾಮಯ್ಯ ರವರನ್ನು ಕ್ಷೇತ್ರಕ್ಕೆ ಕರತರಲು ಭಾರಿ ಪ್ರಯತ್ನ ನಡೆಸಿದ್ದ ಘಟನಬಂಧನ್ ನಾಯಕರೂ ಈಗ ನೇಪಥ್ಯಕ್ಕೆ ಸರಿದಿರುವುದು ಕಾರ್ಯಕರ್ತರಲ್ಲಿ ಗೊಂದರ ಮೂಡಿಸಿದೆ.
ಕೋಲಾರ ಕ್ಷೇತ್ರದ ಕಾಂಗ್ರೆಸ್ ನಾಯಕರ ಆಂತರಿಕ ಕಿತ್ತಾಟ ಇನ್ನೂ ನಿಂತಿಲ್ಲ. ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಹಾಗೂ ಘಟಬಂಧನ್ ನಾಯಕರು ಈಗಲೂ ಉತ್ತರ-ದಕ್ಷಿಣದಂತಿದ್ದಾರೆ. ಈ ವಿಷಯದಲ್ಲಿ ಮುನಿಯಪ್ಪ ಅವರ ಕೋಪ ಶಮನಗೊಳ್ಳದಿದ್ದರೆ ಸಿದ್ದರಾಮಯ್ಯ ಗೆಲ್ಲುವುದು ಸುಲಭವಲ್ಲ ಎಂಬ ಅಭಿಪ್ರಾಯವೂ ಇದೆ.
ಒಂದು ವೇಳೆ ಸಿದ್ದರಾಮಯ್ಯ ಕೋಲಾರಕ್ಕೆ ಬಾರದೇ ಹೋದಲ್ಲಿ ವರ್ತೂರು ಪ್ರಕಾಶ್‌ರಿಗೆ ಆನೆ ಬಲ ಬಂದಂತಾಗುತ್ತದೆ. ಕುರುಬ ಸಮುದಾಯದವರು ಈ ಭಾರಿ ಶತಗತಾಯ ತಮ್ಮ ಸಮುದಾಯದವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲೇಬೇಕು, ಇದರಲ್ಲಿ ಸಿದ್ದರಾಮಯ್ಯರಿಗೆ ಮೊದಲನೇ ಆದ್ಯತೆ ಹಾಗೂ ವರ್ತೂರು ಪ್ರಕಾಶ್‌ರಿಗೆ ಎರಡನೇ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.
ಎಲ್ಲ ವರ್ಗಗಳ ಹಿತರಕ್ಷಣೆ ಬಿಜೆಪಿಯ ಆದ್ಯತೆ: ಸಿ.ಟಿ.ರವಿ
ಗೋವಿಂದ ಗೌಡರಿಗೆ ಅದೃಷ್ಟ?: ಈ ಎಲ್ಲಾ ಗೊಂದಲಗಳ ನಡುವೇಯೂ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ವರುಣ ಕ್ಷೇತ್ರವನ್ನು ಕೈ ಹಿಡಿದರೆ ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯಾಗಿ ಗೆಲ್ಲುವ ರೇಸ್ ಕುದುರೆ ಎಂದರೆ ಅದು ಡಿಸಿಸಿ ಬ್ಯಾಂಕ್ ಆಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎನ್ನಲಾಗಿದ್ದು, ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾತುಕತೆಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.
ಬ್ಯಾಲಹಳ್ಳಿ ಗೋವಿಂದಗೌಡರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬ್ರಾಂಡ್ ಎಂದು ಬಿಂಬಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಒಂದು ಗುಂಪು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಗೋವಿಂದಗೌಡರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿ ಕೊನೆಗೆ ಕೈಕೊಡಲಾಗಿತ್ತು. ಈ ಬಾರಿ ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಗೋವಿಂದಗೌಡರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂಬುವುದನ್ನು ತಳ್ಳಿ ಹಾಕುವಂತಿಲ್ಲ.