ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ: ಹಳೆ ಮೈಸೂರು ಭಾಗದಲ್ಲಿ ಯಾವ ಪಕ್ಷಕ್ಕೆ ನಷ್ಟ?
ಬಾದಾಮಿಯಿಂದ ಓಡಾಟ ಮಾಡೋದು ಕ್ಷೇತ್ರ ಸುತ್ತೋದು ಸ್ವಲ್ಪ ಕಷ್ಟ
ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವುದೇ ಪಾರ್ಟಿ ಒಳಗೆ ತಿಕ್ಕಾಟಕ್ಕೆ ಕಾರಣ
ಕೋಲಾರದ ಆರು ವಿಧಾನಸಭೆಗಳಲ್ಲಿ ಬಿಜೆಪಿ ಕಳೆದ ಬಾರಿ ಶೂನ್ಯ ಸಾಧನೆ
ವಿಶ್ಲೇಷಣೆ - ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜ.10): ನಾನು ಚಾಮುಂಡೇಶ್ವರಿಯಲ್ಲಿ ಸೋಲುತ್ತೇನೆ ಎಂದು ಬಾದಾಮಿಯಿಂದ ಸ್ಪರ್ಧಿಸುತ್ತಿಲ್ಲ. ಆ ಜಿಲ್ಲೆಯ ಮೇಲೆ ಪ್ರಭಾವ ಬೀಳಲಿ ಮತ್ತು ರಾಜಕೀಯವಾಗಿ ಪಕ್ಷಕ್ಕೆ ಲಾಭ ಆಗಲಿ ಎಂದು ಬಾದಾಮಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ 2018 ರಲ್ಲಿ ಈ ರೀತಿ ರಾಜಕೀಯ ಸಮಜಾಯಿಷಿ ನೀಡಿದ್ದರು. ಬಳಿಕ ಚಾಮುಂಡೇಶ್ವರಿಯಲ್ಲಿ ಜಿಟಿ ದೇವೆಗೌಡ ವಿರುದ್ಧ ಸೋತಿದ್ದ ಸಿದ್ದರಾಮಯ್ಯ ಅಲ್ಪ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದು ಈಗ ಇತಿಹಾಸ. ಈ ಬಾರಿಯೂ ಸಿದ್ದರಾಮಯ್ಯ ಅದೇ ರೀತಿ ಮತ್ತೆ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಬಾದಾಮಿಯಿಂದ ಓಡಾಟ ಮಾಡೋದು ಕ್ಷೇತ್ರ ಸುತ್ತೋದು ಸ್ವಲ್ಪ ಕಷ್ಟ. ಹೀಗಾಗಿ ಬೆಂಗಳೂರು ಸುತ್ತ ಮುತ್ತ ಕ್ಷೇತ್ರ ಇದ್ದರೆ ಒಳ್ಳೆಯದು ಎನ್ನುವ ಕಾರಣಕ್ಕೆ ಕೋಲಾರದಿಂದ ಸ್ಪರ್ಧೆ ಮಾಡ್ತೇನೆ ಎನ್ನುವ ಸಿದ್ದ ಉತ್ತರ ನೀಡಿದ್ದಾರೆ. ಅಲ್ಲದೇ ಪ್ಲಾನ್ ಪ್ರಕಾರ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಗೆಲುವು ಸುಲಭವೆ? ಸಿದ್ದರಾಮಯ್ಯ ಸ್ಪರ್ಧೆಯಿಂದ ಜೆಡಿಎಸ್ ಬಿಜೆಪಿಗೆ ಆಗುವ ನಷ್ಟ ಏನು ಲಾಭ ಏನು?
ಸಿದ್ದರಾಮಯ್ಯ ಕೋಲಾರ ಕ್ಷೇತ್ರ ಆಯ್ಕೆ ಯಾಕೆ?
ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಅವರ ಆಪ್ತ ಬಳಗ ಬಿಂಬಿಸುತ್ತಿದೆ. ಇದು ಪಾರ್ಟಿ ಒಳಗೆ ತಿಕ್ಕಾಟಕ್ಕೆ ಕಾರಣವಾಗಿದ್ದರೂ ಹೋದಲ್ಲಿ ಬಂದಲ್ಲಿ ನನಗೆ ಆಶಿರ್ವಾದ ಮಾಡಿ ಎನ್ನುವ ಸಿದ್ದರಾಮಯ್ಯರ ಮಾತಿನ ಶೈಲಿ ಒಳ ಅರ್ಥ ನಾನು ಸಿಎಂ ಅಭ್ಯರ್ಥಿ ಎಂದು ತೋರಿಸಿಕೊಳ್ಳುವ ಪ್ರಯತ್ನ ಎನ್ನೋದು ಯಾರಿಗಾದರೂ ಅರ್ಥವಾಗದೇ ಇರದು. ಅದೇನೆ ಇರಲಿ. ಸಿದ್ದರಾಮಯ್ಯ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ. ಸಿದ್ದರಾಮಯ್ಯ ಬಳಿ ದಲಿತ, ಹಿಂದುಳಿದ ವರ್ಗಗಳ ಮತಗಳಿವೆ. ಒಕ್ಕಲಿಗರಿಗೆ ದೇವೆಗೌಡ, ಲಿಂಗಾಯತರಿಗೆ ಯಡಿಯೂರಪ್ಪ ಇದ್ದ ಹಾಗೆ ಕುರುಬರಿಗೆ ಸಿದ್ದರಾಮಯ್ಯ ಎನ್ನೋದರಲ್ಲಿ ಪ್ರಶ್ನೆಯೇ ಇಲ್ಲ. ಹೀಗಾಗಿ ಹೊಸ ಕ್ಷೇತ್ರ ಹುಡುಕುವಾಗ ಸಿದ್ದರಾಮಯ್ಯ ಒಂದಿಷ್ಟು ಜಾತಿ ಲೆಕ್ಕಾಚಾರ ಮಾಡಿ ಕೋಲಾರದ ಕಡೆ ಮುಖ ಮಾಡಿದಂತಿದೆ. ವರುಣಾದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಇದ್ದದ್ದು ನಿಜ. ಆದರೆ ಮಗನ ರಾಜಕೀಯ ಭವಿಷ್ಯದ ಕಾರಣಕ್ಕೆ ಸಿದ್ದು ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ: ಟಗರಿಗೆ ಒಲಿಯಲಿದೆಯಾ ಚಿನ್ನದ ನಾಡು ?
ಜಾತಿ ಸಮುದಾಯ ಲೆಕ್ಕಾಚಾರ ಏನು?
ಕೋಲಾರದಲ್ಲಿ ಜಾತಿವಾರು ಲೆಕ್ಕಾಚಾರ ನೋಡಿದರೆ ಒಕ್ಕಲಿಗ ಸಮುದಾಯದ 40 ಸಾವಿರ, ಕುರುಬ ಸಮುದಾಯದ 28 ಸಾವಿರ, SC-STಯ 62 ಸಾವಿರ ಹಾಗೂ ಇತರೆ 39 ಸಾವಿರ ಮತದಾರರು ಇದ್ದಾರೆ. ಜಾತಿ ಲೆಕ್ಕಾಚಾರ ನೋಡಿದಾಗ ಸಹಜವಾಗಿ ಆ ಪೈಕಿ ಸಿದ್ದರಾಮಯ್ಯ ಗೆಲುವಿಗೆ ಅನುಕೂಲ ಆಗುವ ಜಾತಿ ಫ್ಯಾಕ್ಟರ್ ಇದೆ. ಮುಸ್ಲಿಂ ಸಮುದಾಯದ ಪರ ಸದಾ ಬ್ಯಾಟ್ ಮಾಡುವ ಸಿದ್ದರಾಮಯ್ಯ, ಅವರ ಮತಗಳ ಮೇಲೆ ನಂಬಿಕೆ ಇದೆ. ಇನ್ನು ಕುರುಬ ಸಮುದಾಯದ 25 ಸಾವಿರ ಮತಗಳು ಇವೆ. ಅವರು ತನ್ನ ಕೈಬಿಡಲ್ಲ ಎನ್ನುವ ವಿಶ್ವಾಸ ಇದೆ. ದಲಿತರ ವೋಟ್‌ಗಳು ಕಾಂಗ್ರೆಸ್ ಜೊತೆ ನಿಲ್ಲಲಿದೆ ಎನ್ನುವ ನಂಬಿಕೆಯೂ ಅವರಿಗಿದೆ. ಇನ್ನು ಒಕ್ಕಲಿಗರು ಸಿದ್ದರಾಮಯ್ಯರನ್ನು ಅಷ್ಟು ಇಷ್ಟ ಪಡೆದೆ ಇದ್ದರೂ ಹಾಲಿ ಶಾಸಕ ಶ್ರೀನಿವಾಸ್ ಗೌಡ ಮೂಲಕ ಒಂದಿಷ್ಟು ಒಕ್ಕಲಿಗರ ಮತ ಸೆಳೆಯಬಹದು ಎನ್ನುವ ವಿಶ್ವಾಸವಿದೆ. ಹೀಗಾಗಿ ಸಿದ್ದರಾಮಯ್ಯ ಕೋಲಾರ ತನಗೆ ಅನುಕೂಕರ ಕ್ಷೇತ್ರ ಎಂದು ಭಾವಿಸಿ ಸ್ಪರ್ಧೆಗೆ ಅಧಿಕೃತ ಘೋಷಣೆ ಮಾಡಿದಂತಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹಿನ್ನಡೆ?
ಹಾಗೆ ನೋಡಿದರೆ ಬಿಜೆಪಿ ಕೋಲಾರ ಚಿಕ್ಕಬಳ್ಳಾಪುರ ಭಾಗದಲ್ಲಿ ಗಳಿಸೋದು ಏನೂ ಇಲ್ಲ. ಕಳೆದುಕೊಳ್ಳೋದೂ ಖಂಡಿತಾ ಏನೂ ಇಲ್ಲ. ಆದರೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಇನ್ನಿಲ್ಲದ ಶ್ರಮ ಹಾಕುತ್ತಿರುವ ಬಿಜೆಪಿಗೆ ಸಿದ್ದರಾಮಯ್ಯ ಸ್ಪರ್ಧೆಯಿಂದ ತಕ್ಕ ಮಟ್ಟಿಗೆ ಹಿನ್ನಡೆಯಂತೂ ಹೌದು. ಕೋಲಾರದಲ್ಲಿ ಸದ್ಯ ಬಿಜೆಪಿ ಸಾಧನೆ ಶೂನ್ಯ. ಕೋಲಾರದ ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ ಕಳೆದ ಬಾರಿ ಶೂನ್ಯ ಸಾಧನೆ. ಕಾಂಗ್ರೆಸ್ ಐದು ಕ್ಷೇತ್ರದಲ್ಲಿ ಗೆದ್ದಿದೆ. ಜೆಡಿಎಸ್ ಇಂದ ಶ್ರೀನಿವಾಸ್ ಗೌಡ ಒಬ್ಬರೇ ಗೆದ್ದಿರೋದು. ಕೋಲಾರದಲ್ಲಿ ಕಾಂಗ್ರೆಸ್ ಸಂಘಟನೆ ಬಲವಾಗಿದೆ. ಮತ್ತು ಜಾತಿ ಸಮೀಕರಣವೂ ಕಾಂಗ್ರೆಸ್‌ಗೆ ಅನುಕೂಲ ಆಗುವ ಹಾಗಿದೆ. ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅಂತ ನಾಯಕರೇ ಅಲ್ಲಿಗೆ ಹೋಗಿ ಸ್ಪರ್ಧೆ ಮಾಡೋದ್ರಿಂದ ಅದು ಪಕ್ಕದ ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೂ ಪ್ರಭಾವ ಬೀರಬಹುದು. ಕುರುಬರು ಒಟ್ಟಾಗಿ ಕಾಂಗ್ರೆಸ್‌ಗೆ ಜೊತೆ ನಿಲ್ಲಬಹುದು. ಬಿಜೆಪಿಯಿಂದ ಕುರುಬ ಸಮುದಾಯದ ವರ್ತೂರು ಪ್ರಕಾಶ್ ಸ್ಪರ್ಧಿಸುತ್ತಾರೆ. ಅವರು ಗೆಲ್ಲಬಹುದು ಎನ್ನುವ ಒಂದು ಲೆಕ್ಕಾಚಾರ ಇತ್ತು. ಕಳೆದ ಬಾರಿ ನಮ್ಮ ಕಾಂಗ್ರೆಸ್ ಇಂದ ಸ್ಪರ್ಧೆ ಮಾಡಿ 35 ಸಾವಿರ ಮತ ಪಡೆದಿದ್ದರು ವರ್ತೂರು. ಆದರೆ ಈ ಬಾರಿ ಪ್ರಶ್ನಾತೀತ ಕುರುಬ ನಾಯಕನೇ ಅಲ್ಲಿ ಸ್ಪರ್ಧೆ ಮಾಡ್ತಾ ಇರೋದ್ರಿಂದ ಕುರುಬ ಸಮುದಾಯ ಸಿದ್ದರಾಮಯ್ಯ ಜೊತೆ ನಿಲ್ಲುವ ಸಾಧ್ಯತೆಯೆ ಹೆಚ್ಚು. ಜೊತೆಗೆ ಸಿದ್ದರಾಮಯ್ಯ ಸ್ಪರ್ಧೆಯಿಂದ ಬಿಜೆಪಿ ಸಂಘಟನೆ ಬಲಗೊಳಿಸಲು ದಾರಿ ಕಠಿಣವಾಯಿತು. ಹಳೆ ಮೈಸೂರು ಭಾಗದಲ್ಲಿ ದಲಿತ, ಮುಸ್ಲಿಮ್, ಹಿಂದುಳಿದ ವರ್ಗಗಳ ಸಮುದಾಯ ಹೆಚ್ಚಿದೆ. ಹಳೆ ಮೈಸೂರು ಭಾಗದಲ್ಲಿ ಈ ಸಮುದಾಯದ ಸಾಂಪ್ರದಾಯಿಕ ವೋಟ್ ಕಾಂಗ್ರೆಸ್ ಜೊತೆ ಇಲ್ಲಿ ತನಕ ನಿಂತಿದೆ. ಹೀಗಾಗಿ ಬಿಜೆಪಿಗೆ ಈ ಬಾರಿ ಸಿದ್ದರಾಮಯ್ಯ ಅಡ್ಡಗಾಲು.
ಸಿದ್ದು ಕೋಲಾರ ಸ್ಪರ್ಧೆಯ ಲೆಕ್ಕಾಚಾರ ಏನು?: ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಪೆಟ್ಟು?
ಜೆಡಿಎಸ್ ಲೆಕ್ಕಾಚಾರ ಏನು?
ನೈಜವಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ವರಿ ಮಾಡ್ಕೊ ಬೇಕಿರೋದು ಜೆಡಿಎಸ್. ಕೋಲಾರ- ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಎರಡು ಲೋಕಸಭಾ ಕ್ಷೇತ್ರಗಳಿಂದ ಎರಡು ವಿಧಾನಸಭೆ ಕ್ಷೇತ್ರಗಳನ್ನು ಗೆದ್ದಿದೆ. ಎರಡು ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಎರಡೇ ಸ್ಥಾನ ಗೆದ್ದಿರೋದು. ಈಗ ಸಿದ್ದರಾಮಯ್ಯ ಅವರೇ ಕೋಲಾರ ಜಿಲ್ಲೆಯಿಂದ ಸ್ಪರ್ಧಿಸಿದಾಗ ಸಹಜವಾಗಿಯೇ ಬಿರುಸಿನ ಸ್ಪರ್ಧೆಗೆ ಕಾರಣವೂ ಆಗಬಹುದು. ಜೊತೆಗೆ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ದಳಪತಿ ಕುಮಾರಸ್ವಾಮಿ ಒಳತಂತ್ರ ಹೆಣೆಯಲೂಬಹುದು. ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಬೇಕು ಎನ್ನೋದು ಜೆಡಿಎಸ್ ಗೆ ಮಾತ್ರವಲ್ಲ ಬಿಜೆಪಿಗೆ ಇರುವ ಬಯಕೆಯೂ ಹೌದಲ್ಲವೇ..?
ಸಿದ್ದರಾಮಯ್ಯ ವಿರುದ್ಧ ಒಳಸಂಚು ನಡೆಯಬಹುದೇ?
2013 ರಲ್ಲಿ ಜಿ.ಪರಮೇಶ್ವರನ್ನು ಸೋಲಿಸಿದ್ದ ಆರೋಪ ಸಿದ್ದರಾಮಯ್ಯ ಮೇಲೆ ಇದೆ. ಆ ಆರೋಪ ಬಲಗೊಳ್ಳಲು ಕಾರಣ 2013 ರಲ್ಲಿ ಜಿ ಪರಮೇಶ್ವರ ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಆಗಿದ್ದರು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದು ಆಗಷ್ಟೇ ಏಳು ವರ್ಷ ಕಳೆದಿತ್ತು. ಹೀಗಾಗಿ ಕಾಂಗ್ರೆಸ್‌ನಲ್ಲಿ ಪರಮೇಶ್ವರಗೆ ಸಿಎಂ ಹುದ್ದೆಯ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಜೊತೆಗೆ ಅವರು ಅದೇ ವೇಳೆ ಕೆಪಿಸಿಸಿ ಅಧ್ಯಕ್ಷ ಕೂಡ ಆಗಿದ್ದರು. ಕಾಂಗ್ರೆಸ್ ರಿವಾಜಿನ ಪ್ರಕಾರ ಯಾರು ಕೆಪಿಸಿಸಿ ಅಧ್ಯಕ್ಷ ಆಗಿರ್ತಾರೊ ಅವರು ಸಿಎಂ ಅಭ್ಯರ್ಥಿ ಕೂಡ ಆಗಿರ್ತಾರೆ ಎನ್ನೋದು ಅಲಿಖಿತ ನಿಯಮವೂ ಹೌದು. ಆದರೆ ಕೊರಟಗೆರೆಯಲ್ಲಿ ಜಿ ಪರಮೇಶ್ವರ ಅಚ್ಚರಿಯಾಗಿ ಸೋತರು. ಪಕ್ಷ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈಗಲೂ ಚಿತ್ರಣ ಹಾಗೆ ಇದೆ.
ಸಿದ್ದರಾಮಯ್ಯ ಸ್ಪರ್ಧೆ: ಕೋಲಾರದಲ್ಲಿ ಮುಸ್ಲಿಮರು, ಒಕ್ಕಲಿಗರೇ ನಿರ್ಣಾಯಕರು..!
ಮುಖ್ಯಮಂತ್ರಿ ಗಾದಿಗೆ ಮುಸುಕಿನ ಗುದ್ದಾಟ:
ಹಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಕುರ್ಚಿ ಕದನ ಜೋರಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ನಿನ್ನೆ ಸಿದ್ದರಾಮಯ್ಯ ಕೋಲಾರದಲ್ಲಿ ಕ್ಷೇತ್ರ ಘೋಷಣೆ ಮಾಡಿದ್ರೆ, ಸಂಜೆ ಡಿಕೆ ಶಿವಕುಮಾರ್ ಬಳಿ ಮಾಧ್ಯಮದವರು ಈ ಬಗ್ಗೆ ಕೇಳಿದಾಗ 'ನನಗೆ ಆ ಬಗ್ಗೆ ಮಾಹಿತಿಯೇ ಇಲ್ಲ,' ಎಂದು ಬಿಟ್ಟರು. ಅಲ್ಲಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಇಷ್ಟು ದಿನ ಇದ್ದ ಮುಸುಕಿನ ಗುದ್ದಾಟ ಈಗ ಮತ್ತು ಆಗಾಗ ಬಹಿರಂಗವಾಗಿ ವ್ಯಕ್ತವಾಗುತ್ತಲೇ ಇರುತ್ತದೆ. ಈ ಮಧ್ಯೆ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವಂತಿದೆ. ಸಿದ್ದರಾಮಯ್ಯ ಕೋಲಾರಕ್ಕೆ ಹೋಗುವ ಮುನ್ನ ಮುನಿಯಪ್ಪ ನಿವಾಸಕ್ಕೆ ಹೋಗಿ ಒಂದು ಟೀ ಕುಡಿದು ಜೊತೆಗೆ ಕಾರಿನಲ್ಲಿ ಹೋದಾಕ್ಷಣ ಎಲ್ಲವೂ ಸರಿ ಆಗಿದೆ ಎನ್ನುವ ಅರ್ಥ ಅಲ್ಲ. ಮುನಿಯಪ್ಪಗೆ ಸಿದ್ದರಾಮಯ್ಯ ಮೇಲಿನ ಸಿಟ್ಟಿಗಿಂತ ಹೆಚ್ಚು ಸಿಟ್ಟು ರಮೇಶ್ ಕುಮಾರ್ ಮೇಲೆ ಇದೆ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ತಾನು ಸೋಲಲು ಸಿದ್ದರಾಮಯ್ಯ ಆಪ್ತ ರಮೇಶ್ ಕುಮಾರ್ ಕಾರಣ. ಅದೇ ರಮೇಶ್ ಕುಮಾರ್ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಮುನಿಯಪ್ಪಗೆ ಸಿದ್ದರಾಮಯ್ಯ ಮೇಲೆ ಇರುವ ನಿಜ ಸಿಟ್ಟು.
ಅದರಲ್ಲೂ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಬಿಟ್ಟು ಕ್ಷೇತ್ರಕ್ಕೆ ಹೋಗ್ತಿದ್ದಾರೆ. ಒಕ್ಕಲಿಗ ಮತಗಳು ನಿರ್ಣಾಯಕ ಎನ್ನುವ ಕೋಲಾರದಲ್ಲಿ ಸ್ಪರ್ಧೆ ಮಾಡ್ತಿದ್ದಾರೆ. ಸಿಎಂ ಕುರ್ಚಿ ಕದನದಲ್ಲಿ ವಿಪಕ್ಷಗಳ ಜೊತೆ ಸ್ವಪಕ್ಷದ ಕೆಲವರು ಕೈ ಜೋಡಿಸಬಹುದೇ ಎನ್ನುವ ಕಲ್ಪನೆ ಮಾಡಿಕೊಂಡಾಗ ಜಿ.ಪರಮೇಶ್ವರ ನೆನಪಾಗುತ್ತಾರೆ.