ಸಿದ್ದರಾಮಯ್ಯ ಸರ್ಕಾರ ರಿಯಲ್ ಎಸ್ಟೇಟ್ ಸರ್ಕಾರವೆಂದು ಆರ್. ಅಶೋಕ್ ಆರೋಪಿಸಿದ್ದಾರೆ. ಭೂಸ್ವಾಧೀನದಿಂದ ದೆಹಲಿಗೆ ಹಣ ಕಳಿಸಲಾಗುತ್ತಿದೆಯೆಂದೂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆಯೆಂದೂ ಹೇಳಿದರು. ಬಿಡದಿ ಟೌನ್‌ಶಿಪ್ ಯೋಜನೆ ರೈತವಿರೋಧಿಯೆಂದು ಸಂಸದ ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಕೃಷಿ ಭೂಮಿ ನಾಶವಾಗುತ್ತಿದ್ದು, ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ರಾಮನಗರ (ಮೇ 16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಖಾಲಿಯಾಗುತ್ತದೆ. ಆಗ ಮತ್ತೆ ಯಾರು ಬಂದು ಕೋತ್ಕೋತಾರೋ ನೋಡಬೇಕು. ಮತ್ತೊಂದೆಡೆ ಸಿದ್ದರಾಮಯ್ಯನೇ ಕುರ್ಚಿ ಎತ್ತಿಕೊಂಡು ಮೈಸೂರು ಕಡೆಗೆ ಹೋಗಬಹುದೋ.., ಏನೋ ನೋಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಸರ್ಕಾರವಾಗಿದೆ. ದೆಹಲಿಗೆ ಎಟಿಎಂ ರೀತಿ‌ಹಣ‌ ಕಳಿಸೋಕೆ ಹೊರಟಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸ್ಕೀಮ್ ಮಾಡಿಕೊಂಡಿದ್ದಾರೆ. ಇಬ್ಬರು 30 ತಿಂಗಳು ಅಂತಾ. ಸಿದ್ದರಾಮಯ್ಯ ಸೀಟು ಬಿಟ್ಟುಕೊಡದಿದ್ದರೆ ಡಿ.ಕೆ. ಶಿವಕುಮಾರ್ ಸುಮ್ಮನಿರೊಲ್ಲ ಎಂದು ಗೊತ್ತಿದೆ. ಹೀಗಾಗಿ, ಸಿದ್ದರಾಮಯ್ಯ ಚೇರ್ ತಗೊಂಡ್ ಹೋಗ್ ಹೋಗ್ ಅಂತಾ ಮೈಸೂರಿನ‌ ಕಡೆ ಹೋಗಬಹುದು. ಅಕ್ಟೋಬರ್‌ಗೆ ಇವರ ಯೋಗ್ಯತೆ ಗೊತ್ತಾಗಲಿದೆ. ಎಲ್ಲರೂ ಬುತ್ತಿ‌ ಕಟ್ಕೊಂಡು ಪಾದಯಾತ್ರೆ ಮಾಡುತ್ತಾ ವಿಧಾನಸೌಧಕ್ಕೆ ಬನ್ನಿ. ಅಲ್ಲಿಗೆ ಬಂದು ಎಲ್ಲ ರೈತರೂ ಬೆಂಗಳೂರಲ್ಲೂ ಪ್ರತಿಭಟನೆ ಮಾಡಿ ಎಂದು ಕರೆ ನೀಡಿದರು.

ಕಾಂಗ್ರೆಸ್‌ನವರಿಗೆ ಎರೆಹುಳು‌ ಹಾಕಿ‌ ಹೇಗೆ ಮೀನ್ ಹಿಡಿಯೋದು ಅಂತಾ 60 ವರ್ಷದಿಂದ ‌ಚೆನ್ನಾಗಿ ಗೊತ್ತು. ಇಲ್ಲಿನ ಭೂಮಿಗೆ ಚಿನ್ನದ‌ ಬೆಲೆ‌ ಬರುತ್ತೆ ಅಂತಾರೆ. ಇನ್ನು ಅಶೋಕ್ ಅಂದರೆ ‌ಬೆಂಗಳೂರು.. ಬೆಂಗಳೂರು ಅಂತಾರೆ. ಮೊದಲು ನಮ್ಮ ಕುಟುಂಬ ಇಲ್ಲೇ ಇತ್ತು. ನಮ್ಮ ತಂದೆ 65 ಎಕರೆ ಜಮೀನು ಕೊಟ್ಟರು. ಹೆಚ್ಎಂಟಿ ಅವರಿಗೆ ಒಂದು ಸಾವಿರಕ್ಕೆ ಒಂದು ಎಕರೆ ಭೂಮಿ ಕೊಟ್ಟಿದ್ದಾರೆ. ನಮ್ಮ ತಂದೆಗೆ ಹಣ ಬಂದಮೇಲೆ ದಿನಾಲೂ ಹಬ್ಬ‌ ಮಾಡಿದರು. ಜಮೀನು‌ ಕೊಟ್ಟ ಮೇಲೆ ಬಂದ ಹಣವನ್ನು ನೋಡಿ ಎಲ್ಲ ನೆಂಟರು, ಫ್ರೆಂಡ್ಸೂ ಬಂದು ಸೇರಿಕೊಂಡರು. ನಮ್ಮಲ್ಲೂ ಅದೇ ಆಗಿದ್ದು ಎಂದು ಹೇಳಿದರು.

ಬಿಡದಿ ಟೌನ್ ಶಿಪ್‌ ಅಂದರೆ ಕುಮಾರಸ್ವಾಮಿ ಅಂತಾರೆ. 2006ರಲ್ಲಿ ಕುಮಾರಸ್ವಾಮಿ ಮಾಡಿದ್ದು, 20 ವರ್ಷ ಆಯ್ತು. ಅದಕ್ಕೆ‌ ಬೆಲೆಯೇ ಇಲ್ಲ. ನಂತರ 10 ವರ್ಷ ಆದಮೇಲೆ ಬೋರ್ಡ್‌ನಲ್ಲಿ ಅದಕ್ಕೆ‌ ಬೆಲೆಯೇ ಇಲ್ಲದಂತೆ ಮಾಡಿದರು. ಪುನಃ ನಾನು ಹೋಮ್ ಮಿನಿಸ್ಟರ್ ಆದಾಗ ಯಾವತ್ತಾದರೂ ಬಂದಿದ್ದೀನಾ ನಿಮ್ಮೂರಿಗೆ? ಜಮೀನು ಕೊಡಿ ಅಂತಾ ಬಂದಿದ್ನಾ? ಇಡೀ ದಿನ ಕುಮಾರಸ್ವಾಮಿ ಅವರನ್ನ ಬೈಕೋತೀರಿ. ಹಾಗಾದರೆ ‌ಕುಮಾರಸ್ವಾಮಿ ಅವರು ಮಾಡಿದ ನೋಟಿಫಿಕೇಷನ್ ಯಾಕೆ ಮುಂದುವರಿಸ್ತೀರಿ? ಅಲ್ಲಿ 3 ಸಾವಿರ‌ ಎಕರೆ ಸರ್ಕಾರಿ ಭೂಮಿ ಇದೆ. ಅದನ್ನ‌ಹೊಡೆಯೋಕೆ ಸ್ಕೀಮ್ ಇದು. ಸಾವಿರಾರು ಕೋಟಿ‌ ಬರುತ್ತದೆ ಅದರಲ್ಲಿ, ಅಂತಾ ಸ್ಕೆಚ್ ಹಾಕೊಂಡಿದ್ದಾರೆ. ಈಗ ಇದೇ 3ಸಾವಿರ ಎಕರೆ ಬಗ್ಗೆ ದಾಖಲೆ ಕೇಳಿದರೆ ಸಿದ್ದರಾಮಯ್ಯ ಕೊಡ್ತಾರಾ? ಎಮದು ಪ್ರಶ್ನೆ ಮಾಡದರು.

ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಭೂಸ್ವಾದೀನಕ್ಕೆ ರೈತರ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಸಂಸದ ಸಿ.ಎನ್. ಮಂಜುನಾಥ್ ಅವರು, ನಾನು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ದೇವೇಗೌಡರೂ ಪತ್ರ ಬರೆದಿದ್ದಾರೆ. 9,600 ಎಕರೆ ಇದು ಕೃಷಿ ಭೂಮಿ. ರೇಷ್ಮೆಯಲ್ಲಿ ರಾಮನಗರ ಮೊದಲ ಸ್ಥಾನದಲ್ಲಿ ಇತ್ತು. ಈಗ 2ನೇ ಸ್ಥಾನಕ್ಕೆ ಬಂದಿದೆ. ರೈತ ಈ ದೇಶದ ಬೆನ್ನೆಲುಬು. ಈ ಬೆನ್ನೆಲುಬನ್ನ ಮುರಿಯಬಾರದು. ರೈತರೇ ಬೇಡ ಅಂದಾಗ ಈ ಟೌನ್ ಶಿಪ್ ಯಾಕೆ ಬೇಕು? ಇದರಿಂದ ಏನು ಅನುಕೂಲ ಆಗೊಲ್ಲ. ಈಗಾಗಲೆ ಬೆಂಗಳೂರಿನಲ್ಲಿ ಸೈಟುಗಳು, ಅಪಾರ್ಟ್ಮೆಂಟ್ ಗಳು, ಇಂಡಸ್ಟ್ರಿಯಲ್ ಪಾರ್ಕ್ ಎಲ್ಲಾ ಖಾಲಿ ಇದೆ. ಬಿಡಿದಿ , ಹಾರೋಹಳ್ಳಿಯಲ್ಲೂ ಇಂಡಸ್ಟ್ರಿಯಲ್ ಪಾರ್ಕ್ ಖಾಲಿ ಇದೆ. ಹಿಂದೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾದ ರೈತರ ವಿರೋಧ ಮಾಡಿದ್ದರು. ಇದನ್ನ ಕೂಡಲೇ ಕೈ ಬಿಡಬೇಕು ಅಂತ ಆಗ್ರಹಿಸುತ್ತೇವೆ ಎಂದರು.