ಸಿದ್ದರಾಮಯ್ಯ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಲ್ಲ: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅಂದರೆ, ಒಕ್ಕಲಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ ಎಂಬುದು ಅವರ ಮಾತಿನ ಅರ್ಥ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು/ಮಂಡ್ಯ (ಏ.18): ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅಂದರೆ, ಒಕ್ಕಲಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ ಎಂಬುದು ಅವರ ಮಾತಿನ ಅರ್ಥ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಸುದ್ದಿಗಾರರೊಡನೆ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ. ಅಂದರೆ, ಒಕ್ಕಲಿಗರಿಗೆ ಅವರ ಪಕ್ಷದ ಸಿಎಂ ಅವರಿಂದಲೇ ಅನ್ಯಾಯವಾಗಿದೆ ಎನ್ನುವುದು ಶಿವಕುಮಾರ್ ಮಾತಿನ ಅರ್ಥ. ಸಿದ್ದರಾಮಯ್ಯ ಯಾವತ್ತೂ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಿಲ್ಲ.
ಸಿಎಂ ಆಗಲು ತಮಗೆ ಅಡ್ಡಿಯಾಗುತ್ತಾರೆ ಎಂದು ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಎಂದು ಅವರು ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದ ರಾಜಕೀಯದಿಂದ ದೂರ ಹೋಗದಿದ್ದರೆ ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಈ ಹಿಂದೆ ಬೆದರಿಸಿದ್ದರು ಎಂದು ಅವರು ಹೇಳಿದರು. ಈಗ ಕಾಂಗ್ರೆಸ್‌ಗೆ ನಾನೇ ಟಾರ್ಗೆಟ್ ಆಗಿದ್ದೇನೆ. ರಾಹುಲ್ ಗಾಂಧಿ ಅವರ ಮುಕ್ಕಾಲು ಗಂಟೆ ಭಾಷಣದಿಂದ ರಾಜ್ಯದಲ್ಲಿ ಯಾವ ಪರಿವರ್ತನೆಯೂ ಆಗಲ್ಲ. ಮಂಡ್ಯದಲ್ಲಿ ನನ್ನ ಸೋಲು-ಗೆಲುವು ಡಿ.ಕೆ. ಶಿವಕುಮಾರ್ ಅವರ ಕೈಯ್ಯಲ್ಲಿ ಇದೆಯಾ?.
ಹಣದ ದುರಹಂಕಾರ, ದರ್ಪದಿಂದ ನಾನು ಸೋಲ್ತಿನಿ ಅಂತಾ ಹೇಳ್ತಿದ್ದಾರೆ. ಆದರೆ, ಹಣದಿಂದ ಮಂಡ್ಯದ ಜನರನ್ನು ಕೊಂಡುಕೊಳ್ಳಲು ಆಗಲ್ಲ ಎಂಬುದು ಡಿಕೆಶಿಗೆ ತಿಳಿದಿರಲಿ ಎಂದು ಹೇಳಿದರು. ಕೆರೆಗೋಡಿಗೆ ಭೇಟಿ: ಮಂಡ್ಯ ತಾಲೂಕಿನ ಕೆರೆಗೋಡು ಹಾಗೂ ಮರಿಲಿಂಗನದೊಡ್ಡಿ ಗ್ರಾಮದಲ್ಲಿ ಬುಧವಾರ ಅವರು ಕೇಸರಿ ಶಾಲು ಧರಿಸಿ ಪಕ್ಷದ ಪರ ಪ್ರಚಾರ ನಡೆಸಿದರು. ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸ್ತಂಭ ನಿರ್ಮಾಣದ ಸಂದರ್ಭದಲ್ಲಿ ಪೊಲೀಸರು ಹಾಕಿರುವ ಅಮಾಯಕರ ಮೇಲಿನ ಕೇಸುಗಳನ್ನು ತೆಗೆಸುವುದು ತಮ್ಮ ಜವಾಬ್ದಾರಿ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕೇಂದ್ರ ಸರ್ಕಾರ ಉದ್ಯಮಿಗಳಿಂದ ಹಫ್ತಾ ಸುಲಿಗೆ: ರಾಹುಲ್ ಗಾಂಧಿ ಗಂಭೀರ ಆರೋಪ
ಕೇಸರಿ ಶಾಲಿನಲ್ಲಿ ಮಿಂಚಿದ ಎಚ್‌ಡಿಕೆ: ಬುಧವಾರ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಗಮನ ಸೆಳೆದರು. ನಾನು ಮತ್ತು ನನ್ನ ಕುಟುಂಬ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಾನು ಟೀಕಿಸಿದ್ದೇನೆಯೇ ಹೊರತು ನಮ್ಮ ತಾಯಂದಿರ ಬಗ್ಗೆ ಎಂದಿಗೂ ಲಘುವಾಗಿ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 1.05 ಲಕ್ಷ ಸಾವಿರ ಕೋಟಿ ರು. ಸಾಲ ಮಾಡಿದೆ. ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ರಾಜ್ಯದ ಜನರ ತಲೆ ಮೇಲೆ ಸಾಲ ಹೊರಿಸಿದ್ದೆ ಸಾಧನೆಯಾಗಿದೆ ಎಂದು ದೂರಿದರು.