ತಲೆತಿರುಕನಂತೆ ಮಾತಾಡೋದು ಸಿದ್ದರಾಮಯ್ಯ ಸ್ವಭಾವ: ಬಿ.ಎಸ್.ಯಡಿಯೂರಪ್ಪ ಟೀಕೆ
- ತಲೆತಿರುಕನಂತೆ ಮಾತಾಡೋದು ಸಿದ್ದರಾಮಯ್ಯ ಸ್ವಭಾವ: ಬಿ.ಎಸ್.ಯಡಿಯೂರಪ್ಪ ಟೀಕೆ
- ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆಂಬ ಹೇಳಿಕೆ ಸಿದ್ದರಾಮಯ್ಯ ಯೋಗತೆ ತೋರಿಸುತ್ತದೆ ಎಂದ ಮಾಜಿ ಸಿಎಂ
- ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರಿಗೆ ಜನರ ಪರವಾಗಿ ಅಭಿನಂದಿಸುತ್ತೆನೆ: ಬಿಎಸ್‌ವೈ
ಶಿವಮೊಗ್ಗ (ಸೆ.29) : ಶಾಂತಿಗೆ ಭಂಗ, ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಪಿಎಫ್‌ಐ ಸೇರಿ ಐದು ಸಂಘಟನೆಗಳನ್ನು ಬಿಜೆಪಿ ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ಹಲವು ಹೋರಾಟಗಳು ನಡೆದಿದ್ದವು. ಅದರ ಫಲವಾಗಿ ಇದೀಗ ಜಯ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಿದ್ದರಾಮಯ್ಯಗಿಂತ ಯಡಿಯೂರಪ್ಪ ತುಂಬಾ ಹಠಮಾರಿ: ಎಂ.ಬಿ ಪಾಟೀಲ್
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಸೇರಿ ಐದು ಸಂಘಟನೆಗಳನ್ನು ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ತುಂಬಾ ಹಿಂದೆಯೇ ಈ ಕೆಲಸವಾಗಬೇಕಿತ್ತು. ಆದರೆ ಈಗಲಾದರೂ ಆಗಿರುವುದು ಸ್ವಾಗತಾರ್ಹ ಎಂದರು.
ಸಿದ್ದರಾಮಯ್ಯ ತಲೆತಿರುಕ:
ಸಿದ್ದರಾಮಯ್ಯ ಅವರು ಯಾವಾಗಲೂ ತಲೆತಿರುಕನ ತರ ಮಾತನಾಡುವುದು ಸ್ವಾಭಾವಿಕ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಕಲ್ಪನೆಯೇ ಇಲ್ಲ. ಇಡೀ ದೇಶದಲ್ಲಿ ಹಿಂದುಗಳ ಸಂಘಟನೆ ಮಾಡುತ್ತ ಪ್ರಾಮಾಣಿಕ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ಬಗ್ಗೆ ನೂರಕ್ಕೆ ತೊಂಬತ್ತು ಜನ ಒಳ್ಳೆ ಮಾತನಾಡುತ್ತಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಆರ್‌ಎಸ್‌ಎಸ್ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಯೋಗ್ಯತೆ ತೋರಿಸುತ್ತದೆ. ಅವರೇನೇ ಮಾತನಾಡಿದರು ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಗುರವಾಗಿ ಮಾತನಾಡಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಾರೆ ಎಂದು ಕುಟುಕಿದರು.
ಬೊಮ್ಮಾಯಿ ಹಿಂಬಾಗಿಲಿನಿಂದ ಬಂದ ಸಿಎಂ: ಸಿದ್ದರಾಮಯ್ಯ
ಪಿಎಫ್‌ಐನಿಂದ ಏನೇನು ಅನಾಹುತವಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊಲೆಗಳನ್ನೂ ಮಾಡಿದ್ದಾರೆ. ಅವರ ವಿರುದ್ಧ ಏನೇನು ಕ್ರಮ ಕೈಗೊಳ್ಳಬೇಕೋ ತೆಗೆದುಕೊಳ್ಳುತ್ತಾರೆ. ಪಿಎಫ್ ಐ ಸೇರಿದಂತೆ ಬೇರೆ ಸಂಘಟನೆಗಳು ಬೇರೆ ಯಾವ ರೂಪದಲ್ಲೂ ತಲೆ ಎತ್ತಲು ಬಿಡುವುದಿಲ್ಲ. ಹಾಗೇನಾದರೂ ತಲೆ ಎತ್ತುವ ಕೆಲಸವನ್ನು ಮಾಡಿದರೆ ತಕ್ಕ ಶಾಸ್ತಿಯನ್ನು ಪ್ರಧಾನಿ ಹಾಗೂ ಗೃಹ ಸಚಿವರು ಮಾಡಲಿದ್ದಾರೆ ಎಂದರು.