ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವಿನ ಹಗ್ಗ-ಜಗ್ಗಾಟದಿಂದಾಗಿ ಮೊದಲ ಹಂತದಲ್ಲಿ ಕೇವಲ ಎಂಟು ಮಂದಿ ಮಾತ್ರ ಸಂಪುಟ ಸೇರ್ಪಡೆಯಾಗಿರುವುದರಿಂದ ಈ ಬಾರಿ ಕನಿಷ್ಠ 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅರ್ಹರ ಆಯ್ಕೆ ಬಗ್ಗೆ ಚರ್ಚಿಸಲು ಉಭಯ ನಾಯಕರು ದೆಹಲಿಗೆ ತೆರಳಲಿದ್ದು, ಮತ್ತೊಂದು ಸುತ್ತಿನ ಹೈವೋಲ್ಟೇಜ್‌ ಸರಣಿ ಸಭೆ ನಡೆಯುವ ನಿರೀಕ್ಷೆಯಿದೆ.

ಬೆಂಗಳೂರು(ಮೇ.24): ಸಚಿವಾಕಾಂಕ್ಷಿಗಳ ಮೇರೆ ಮೀರುತ್ತಿರುವ ಒತ್ತಡದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೊದಲ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಲು ಬುಧವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವಿನ ಹಗ್ಗ-ಜಗ್ಗಾಟದಿಂದಾಗಿ ಮೊದಲ ಹಂತದಲ್ಲಿ ಕೇವಲ ಎಂಟು ಮಂದಿ ಮಾತ್ರ ಸಂಪುಟ ಸೇರ್ಪಡೆಯಾಗಿರುವುದರಿಂದ ಈ ಬಾರಿ ಕನಿಷ್ಠ 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅರ್ಹರ ಆಯ್ಕೆ ಬಗ್ಗೆ ಚರ್ಚಿಸಲು ಉಭಯ ನಾಯಕರು ದೆಹಲಿಗೆ ತೆರಳಲಿದ್ದು, ಮತ್ತೊಂದು ಸುತ್ತಿನ ಹೈವೋಲ್ಟೇಜ್‌ ಸರಣಿ ಸಭೆ ನಡೆಯುವ ನಿರೀಕ್ಷೆಯಿದೆ.

ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಎಂ.ಬಿ. ಪಾಟೀಲ್‌ ಹೇಳಿಕೆ ಗದ್ದಲ?

ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದ ಜತೆಗೆ ಉಭಯ ನಾಯಕರ ಆಪ್ತರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವೂ ಅಡಕವಾಗಿರುವುದರಿಂದ ಆಯ್ಕೆ ಕಗ್ಗಂಟಾಗುತ್ತಿದೆ. ಕಳೆದ ಬಾರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಕೆಲ ನಿರ್ದಿಷ್ಟಹೆಸರುಗಳ ಬಗ್ಗೆ ಪಟ್ಟು ಹಿಡಿದಿದ್ದರಿಂದ 28 ಮಂದಿಯ ಬದಲಾಗಿ ಕೇವಲ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ತೀರ್ಮಾನ ಮಾಡಲಾಗಿತ್ತು.

ಈ ಬಾರಿ ಇಂತಹ ಗೊಂದಲ ಉಂಟಾಗದಿರಲಿ ಎಂಬ ಕಾರಣಕ್ಕೆ ರಾಜ್ಯಕ್ಕೆ ಮಂಗಳವಾರವೇ ಆಗಮಿಸಿರುವ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಉಭಯ ನಾಯಕರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ. ಇಷ್ಟಾಗಿಯೂ ಈ ಉಭಯ ನಾಯಕರು ತಮ್ಮದೇ ಆದ ಪಟ್ಟಿಯೊಂದಿಗೆ ಹೈಕಮಾಂಡ್‌ ಬಳಿ ತೆರಳುವುದು ಬಹುತೇಕ ಖಚಿತ. ಈ ಎರಡು ಪಟ್ಟಿಗಳ ಜತೆಗೆ ಹೈಕಮಾಂಡ್‌ ತನ್ನ ಬಯಕೆಯ ಕೆಲವರನ್ನು ಸೇರಿಸಿ ಅಂತಿಮ ಪಟ್ಟಿಸಿದ್ಧಪಡಿಸುವ ಅಗ್ನಿಪರೀಕ್ಷೆ ಎದುರಿಸಬೇಕಿದೆ.

ಮೂಲಗಳ ಪ್ರಕಾರ, ಈ ಬಾರಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಇರುವ ಕಾರಣ ಮೊದಲ ಹಂತದ ನಾಯಕತ್ವಕ್ಕೆ ಬದಲಾಗಿ ಎರಡನೇ ಹಂತದ ಶಾಸಕರಿಗೆ ಸಚಿವ ಸ್ಥಾನ ನೀಡಿ ಭವಿಷ್ಯದಲ್ಲೂ ಪಕ್ಷವನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಹೈಕಮಾಂಡ್‌ ಹೊಂದಿದೆ. ಈ ಹಿನ್ನೆಲೆಯಲ್ಲಿ ಹಿರಿಯರಾದ ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ್‌, ಟಿ.ಬಿ.ಜಯಚಂದ್ರ, ಶಾಮನೂರು ಶಿವಶಂಕರಪ್ಪ ಅಂತಹÜವರನ್ನು ಸಂಪುಟದಿಂದ ಹೊರಗಿಡುವ ಉದ್ದೇಶವಿದೆ. ಆದರೆ, ಈ ಬಗ್ಗೆ ಸದರಿ ನಾಯಕರನ್ನು ಮನವೊಲಿಸಿ ಅನಂತರವೇ ಈ ಕಟು ನಿರ್ಧಾರ ಕೈಗೊಳ್ಳಬೇಕು ಎಂಬ ಚಿಂತನೆಯಿದೆ.

ಒಂದು ವೇಳೆ ಇದು ನಿಜವಾದಲ್ಲಿ ಸಂಪುಟಕ್ಕೆ ಕೆಲ ಅಚ್ಚರಿಯ ಹೆಸರುಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಆದರೆ, ಈ ಹಿರಿಯರು ಹೈಕಮಾಂಡ್‌ನಲ್ಲೂ ಪ್ರಭಾವಿಗಳಾಗಿರುವ ಕಾರಣ ಅಂತಿಮ ನಿರ್ಧಾರ ಏನಾಗಲಿದೆ ಎಂಬುದು ಸ್ಪಷ್ಟವಿಲ್ಲ. ಈ ಮೂಲಗಳ ಪ್ರಕಾರ ಬುಧವಾರ ಸಂಜೆ ದೆಹಲಿಗೆ ತೆರಳುವ ಉಭಯ ನಾಯಕರು ಗುರುವಾರ ಸಂಜೆಯ ವೇಳೆಗೆ ಪಟ್ಟಿಅಖೈರುಗೊಳಿಸಲಿದ್ದಾರೆ.

ಸಿದ್ದರಾಮಯ್ಯ ಸಸ್ಯಹಾರ ರಹಸ್ಯ, ಮತ್ತೆ ಪಟ್ಟಕ್ಕೇರಲು ಕಾರಣವಾಯ್ತಾ ಧರ್ಮಸ್ಥಳದಲ್ಲಿ ಎಸಗಿದ ತಪ್ಪಿನ ಪ್ರಾಯಶ್ಚಿತ!

ಒಂದು ಬಾರಿ ಈ ಪಟ್ಟಿ ಅಖೈರಾದ ನಂತರ ಸಚಿವರಿಗೆ ಖಾತೆ ಹಂಚಿಕೆ ವಿಚಾರವನ್ನು ಸಹ ಹೈಕಮಾಂಡ್‌ ಸಮ್ಮುಖದಲ್ಲೇ ತೀರ್ಮಾನವಾಗಲಿದೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ತಮ್ಮ ಆಪ್ತರಿಗೆ ನಿರ್ದಿಷ್ಟಖಾತೆ ಹಂಚಿಕೆ ಮಾಡುವ ಕುರಿತು ತೀವ್ರ ಪೈಪೋಟಿಯಿದೆ. ಹೀಗಾಗಿ ಖಾತೆ ಹಂಚಿಕೆ ವಿಚಾರದಲ್ಲೂ ಕಿಡಿ ಹಾರುವ ಸಾಧ್ಯತೆಯಿದೆ.

ಸಂಭವನೀಯ ಸಚಿವರು

ಕೃಷ್ಣ ಬೈರೇಗೌಡ/ಎಂ.ಕೃಷ್ಣಪ್ಪ
ಬೈರತಿ ಸುರೇಶ್‌
ದಿನೇಶ್‌ ಗುಂಡೂರಾವ್‌/ಆರ್‌.ವಿ.ದೇಶಪಾಂಡೆ
ಮಧು ಬಂಗಾರಪ್ಪ/ಬಿ.ಕೆ.ಹರಿಪ್ರಸಾದ್‌
ಶಿವಾನಂದ ಪಾಟೀಲ್‌
ಶಿವರಾಜ ತಂಗಡಗಿ
ಕೆ.ಎನ್‌.ರಾಜಣ್ಣ
ಬಸವರಾಜ ರಾಯರೆಡ್ಡಿ
ಲಕ್ಷ್ಮೇ ಹೆಬ್ಬಾಳಕರ
ಲಕ್ಷ್ಮಣ ಸವದಿ
ರಾಘವೇಂದ್ರ ಹಿಟ್ನಾಳ್‌
ಎಚ್‌.ಕೆ.ಪಾಟೀಲ್‌/ ಜಿ.ಎಸ್‌.ಪಾಟೀಲ್‌
ರಹೀಂ ಖಾನ್‌
ಎಚ್‌.ಸಿ.ಮಹದೇವಪ್ಪ/ ನರೇಂದ್ರಸ್ವಾಮಿ
ಈಶ್ವರ್‌ ಖಂಡ್ರೆ
ಚೆಲುವರಾಯಸ್ವಾಮಿ
ಎಸ್‌.ಎಸ್‌.ಮಲ್ಲಿಕಾರ್ಜುನ್‌
ವಿನಯ್‌ ಕುಲಕರ್ಣಿ
ಸಂತೋಷ್‌ ಲಾಡ್‌
ವಿಧಾನಪರಿಷತ್‌ನಿಂದ
ಸಲೀಂ ಅಹಮದ್‌/ ದಿನೇಶ್‌ ಗೂಳಿಗೌಡ