ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಎಂ.ಬಿ. ಪಾಟೀಲ್ ಹೇಳಿಕೆ ಗದ್ದಲ?
ಸ್ಪೀಕರ್ ಚುನಾವಣೆ ಸಂಬಂಧ ಚರ್ಚಿಸಲು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಂ.ಬಿ.ಪಾಟೀಲ್ ಹೇಳಿಕೆ ಬಗ್ಗೆ ತೀವ್ರ ಪರ-ವಿರೋಧ ಚರ್ಚೆಗಳಾಗುವ ನಿರೀಕ್ಷೆಯಿದೆ. ಸರ್ಕಾರ ಸಾಂಗವಾಗಿ ನಡೆಯಬೇಕಿರುವ ಹೊತ್ತಿನಲ್ಲಿ ಎಂ.ಬಿ.ಪಾಟೀಲ್ ಅನಗತ್ಯವಾಗಿ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿದ್ದಾರೆ.
ಬೆಂಗಳೂರು(ಮೇ.24): ವಿಧಾನಸಭೆ ಸಭಾಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಈ ವೇಳೆ ‘ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿರುದ್ಧ ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದೆ.
16ನೇ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಕಾಂಗ್ರೆಸ್ ಸದಸ್ಯರೂ ಸ್ಪೀಕರ್ ಚುನಾವಣೆಯಲ್ಲಿ ಯು.ಟಿ.ಖಾದರ್ ಪರ ಮತ ಚಲಾಯಿಸುವಂತೆ ಸೂಚಿಸಲು ಹಾಗೂ ವಿಪ್ ಜಾರಿಗೊಳಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
Party Rounds: ಸಂಪುಟ ವಿಸ್ತರಣೆ ವಿಚಾರ, ಎಲ್ಲೂ ತಾಳೆಯಾಗದ ಸಿದ್ದರಾಮಯ್ಯ- ಡಿಕೆಶಿ ಲೆಕ್ಕಾಚಾರ!
ಆದರೆ, ಸ್ಪೀಕರ್ ಚುನಾವಣೆ ಸಂಬಂಧ ಚರ್ಚಿಸಲು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಂ.ಬಿ.ಪಾಟೀಲ್ ಹೇಳಿಕೆ ಬಗ್ಗೆ ತೀವ್ರ ಪರ-ವಿರೋಧ ಚರ್ಚೆಗಳಾಗುವ ನಿರೀಕ್ಷೆಯಿದೆ. ಸರ್ಕಾರ ಸಾಂಗವಾಗಿ ನಡೆಯಬೇಕಿರುವ ಹೊತ್ತಿನಲ್ಲಿ ಎಂ.ಬಿ.ಪಾಟೀಲ್ ಅನಗತ್ಯವಾಗಿ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿದ್ದಾರೆ. ಇದು ಪ್ರತಿಪಕ್ಷಗಳ ಕೈಗೆ ಅಸ್ತ್ರ ನೀಡಿದಂತಾಗಿದೆ. ಜತೆಗೆ ಪಕ್ಷದಲ್ಲೂ ಒಡಕು ಉಂಟು ಮಾಡಿದಂತಾಗಿದೆ ಎಂದು ಶಿವಕುಮಾರ್ ಪರ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಯಿದೆ. ಹೀಗಾಗಿ ತೀವ್ರ ಆರೋಪ-ಪ್ರತ್ಯಾರೋಪಗಳಿಗೆ ಶಾಸಕಾಂಗ ಪಕ್ಷದ ಸಭೆ ವೇದಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನು ಬೆಳಗ್ಗೆ 11 ಗಂಟೆಗೆ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರು ಸ್ಪೀಕರ್ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಇದಕ್ಕೂ ಮೊದಲು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.