ಶಿವಮೊಗ್ಗ ಸ್ಪೋಟ: ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ಗಂಭೀರ ಆರೋಪ..!
ಇಡೀ ರಾಜ್ಯವನ್ನೇ ಬಿಚ್ಚೆಬೀಳಿಸಿದ ಶಿವಮೊಗ್ಗ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಹಾಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.
ಬೆಂಗಳೂರು, (ಜ.23): ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸಂಭವಿಸಿರುವ ದುರಂತ ಪ್ರಕರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಹೊಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರ ಕುಮ್ಮಕ್ಕು ಕಾರಣ ಎಂದು ದೂರಿದರು.
ಶಿವಮೊಗ್ಗ ದುರಂತದ ಭಯಾನಕ ದೃಶ್ಯಗಳಿವು..
ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ ? ಎಂದು ಪ್ರಶ್ನಿಸಿದರು.
ಇದು ಅಕ್ರಮ ಮನೆ, ಜಮೀನು ಸಕ್ರಮ ಮಾಡುವುದಲ್ಲ. ಹಾಗಾದರೆ ಗಣಿ ಇಲಾಖೆಯ ಕಾನೂನು ಇರುವುದೇಕೆ? ಎಂದು ಮುಖ್ಯಮಂತ್ರಿಗಳ ಹೇಳಿಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರಲಿ, ಅದರಲ್ಲಿ ಯಾವುದೇ ಪಕ್ಷದವರು ಭಾಗಿಯಾಗಿರಲಿ. ಸರ್ಕಾರ ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.
ಶಿವಮೊಗ್ಗ ಕ್ರಷರ್ ಗಣಿ ಸ್ಫೋಟದ ಹಿಂದಿನ ಕಾರಣ ಏನು..?
ಸಿಎಂ, ಉಸ್ತುವಾರಿ ಸಚಿವರೇ ಹೊಣೆ
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸಂಭವಿಸಿರುವ ದುರಂತ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದೆ. ಆಂದ್ರದಿಂದ ಪರವಾನಿಗೆ ಇಲ್ಲದೆ ಜಿಲಿಟಿನ್ ಮತ್ತು ಡೈನಮೇಟ್ ತರಲಾಗಿತ್ತು. ಇದು ಮೊದಲ ಅಪರಾಧ. ತಂದಿದ್ದನ್ನು ಸುರಕ್ಷಿತವಾದ ಜಾಗದಲ್ಲಿ ಇಡದೇ ಹೋಗಿದ್ದಿದು ಎರಡನೇ ಅಪರಾಧ. ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯ ಈ ದುರಂತದಲ್ಲಿ ಎದ್ದು ಕಾಣುತ್ತಿದೆ ಎಂದರು.
'ಶಿವಮೊಗ್ಗ ಕಲ್ಲು ಕ್ವಾರಿ ಮಾಫಿಯಾ ಹಿಂದಿದ್ದವರ ಹೆಸರನ್ನು ಸಿಎಂ ಎದುರು ಬಾಯ್ಬಿಡುವೆ'
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರೇ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಡೆ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲಿಯೇ ಪರವಾನಿಗೆ ಇಲ್ಲದೆ ಯದ್ವಾತದ್ವಾ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದರೆ ಇದು ಜಿಲ್ಲಾಡಳಿತರ ವೈಫಲ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರು ಇದರ ಹೊಣೆ ಹೊರಬೇಕು ಎಂದು ಹೇಳಿದರು.