ಸಿದ್ದರಾಮಯ್ಯ ವಿಧಾನಸಭೆಗೆ ಪ್ರವೇಶ ಪಡೆದಾಗ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಕನಕಪುರ ಬಂಡೆ, ಟ್ರಬಲ್‌ ಶೂಟರ್‌, ಸಂಘಟನಾ ಚತುರ ಎಂಬೆಲ್ಲಾ ಅಭಿದಾನಗಳನ್ನು ಹೊಂದಿರುವ ಡಿ.ಕೆ.ಶಿವಕುಮಾರ್‌ ರಾಜಕೀಯಕ್ಕೆ ಪ್ರವೇಶಿಸಿದ್ದು ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಮೂಲಕ. 

ಬೆಂಗಳೂರು(ಮೇ.19): ರಾಜ್ಯದ ಪ್ರಮುಖ ಹಾಗೂ ಪ್ರಬಲ ರಾಜಕಾರಣಿಯಾಗಿ ನೇರ ನಡೆ, ನುಡಿಯ ವ್ಯಕ್ತಿಯೆಂದೇ ಹೆಸರುವಾಸಿ ಆಗಿರುವ ಸಿದ್ದರಾಮಯ್ಯ ಜನತಾ ಪರಿವಾರದ ಮೂಲಕ ಬೆಳಕಿಗೆ ಬಂದ ಪ್ರತಿಭೆ. 1978ರಲ್ಲಿ ಮೈಸೂರಿನ ತಾಲೂಕು ಮಂಡಳಿ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಿದ ಸಿದ್ದರಾಮಯ್ಯ 1980ರಲ್ಲಿ ಮೊದಲ ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದರಾದರೂ ಗೆಲುವು ಸಾಧ್ಯವಾಗಲಿಲ್ಲ. ಆದರೂ ಛಲಬಿಡದ ತ್ರಿವಿಕ್ರಮನಂತೆ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಲ್ಲದೇ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಹಳೆ ಮೈಸೂರು ಪ್ರಾಂತ್ಯದಲ್ಲಿ ಹೊಸ ನಾಯಕನಾಗಿ ಬೆಳೆಯಲು ಆರಂಭಿಸಿದರು.

ಸಿದ್ದರಾಮಯ್ಯ ಅವರು ವಿಧಾನಸಭೆಗೆ ಪ್ರವೇಶ ಪಡೆದಾಗ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಹೆಗಡೆಯವರು ಸಿದ್ದರಾಮಯ್ಯ ಅವರನ್ನು ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. 1985ರ ಮಧ್ಯಂತರ ಚುನಾವಣೆಯಲ್ಲಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವರಾದರು. ನಂತರ ಅಧಿಕಾರಕ್ಕೆ ಬಂದ ಎಸ್‌.ಆರ್‌. ಬೊಮ್ಮಾಯಿ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತೆ ಸಚಿವರಾದರು. ಸಾರಿಗೆ ಖಾತೆ ದೊರೆಯಿತು.

ಸಿದ್ದು- ಡಿಕೆಶಿ ಒಗ್ಗಟ್ಟು ಪ್ರದರ್ಶನ: ಒಟ್ಟಿಗೇ ಉಪಾಹಾರ, ಒಂದೇ ಕಾರು-ವಿಮಾನದಲ್ಲಿ ಪ್ರಯಾಣ..!

ಸತತ 2 ಸೋಲಿನ ಬಳಿಕ ಪುಟಿದೆದ್ದರು

ಕಾಂಗ್ರೆಸ್‌ ನಾಯಕ ರಾಜಶೇಖರ ಮೂರ್ತಿ ಅವರು 1989ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಕಹಿ ಉಣಿಸಿದರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. 1994ರಲ್ಲಿ ಜಯಭೇರಿ ಬಾರಿಸಿದ ಅವರು, ದೇವೇಗೌಡ ಅವರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗ ಹಣಕಾಸು ಸಚಿವರಾದರು. 1996ರಲ್ಲಿ ಜೆ.ಎಚ್‌.ಪಟೇಲ್‌ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಪಡೆದುಕೊಂಡರು.

ಜೆಡಿಎಸ್‌ನಿಂದ ಉಚ್ಚಾಟನೆ

1999ರಲ್ಲಿ ಜನತಾ ಪರಿವಾರ ಇಬ್ಭಾಗವಾಗಿ ಜೆಡಿಎಸ್‌ ಉದಯವಾಗಿತ್ತು. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರ ಹಿಂದೆ ಹೋಗದೆ ಎಚ್‌.ಡಿ. ದೇವೇಗೌಡ ಅವರ ಜತೆ ನಿಂತ ಸಿದ್ದರಾಮಯ್ಯ ಅವರಲ್ಲಿ ಮುಖ್ಯಮಂತ್ರಿಯಾಗುವ ಕನಸು ಚಿಗುರೊಡೆದಿತ್ತು. ಆದರೆ, 1999ರ ಚುನಾವಣೆಯಲ್ಲಿ ಮತ್ತೊಮ್ಮೆ ಸೋಲಿನ ರುಚಿ ಕಾಣಬೇಕಾಯಿತು. 2004ರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾದಾಗ ಮತ್ತೊಮ್ಮೆ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಬೇಕಾಯಿತು. ತಮಗೆ ಒದಗಿಬರಬೇಕಿದ್ದ ಮುಖ್ಯಮಂತ್ರಿ ಹುದ್ದೆಯನ್ನು ದೇವೇಗೌಡರು ಉದ್ದೇಶಪೂರ್ವಕವಾಗಿ ತಪ್ಪಿಸಿದರು ಎಂಬುದು ಸಿದ್ದರಾಮಯ್ಯ ಬೆಂಬಲಿಗರ ಆರೋಪವಾಗಿತ್ತು. ಇದು ಬೆಳೆಯುತ್ತಾ ಹೋಗಿ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ದೊಡ್ಡ ಕಂದಕ ನಿರ್ಮಾಣ ಮಾಡಿತು. ಈ ನಡುವೆ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಇಳಿದರು. ಪರಿಣಾಮ 2005ರಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಇದಾದ ನಂತರ ಎಬಿಪಿಜೆಡಿ ಎಂಬ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಪ್ರಯತ್ನವನ್ನು ಮಾಡಿದರು. ಅಂತಿಮವಾಗಿ 2006ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದರು. 2006ರಲ್ಲಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ವರುಣದಿಂದ ಸ್ಪರ್ಧೆ ಮಾಡಿ ಗೆದ್ದರು.

2009ರಲ್ಲಿ ರಾಜ್ಯದಲ್ಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿತ ದಾಳಿಗಳನ್ನು ನಡೆಸಿದ್ದರು. ಆ ವೇಳೆ ಗಣಿ ಧಣಿಗಳಿಗೆ ವಿಧಾನಸಭೆಯಲ್ಲಿ ಸವಾಲು ಹಾಕಿ ಬೆಂಗಳೂರಿನಿಂದ ಬಳ್ಳಾರಿವರೆಗೆ 320 ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್‌ ಪುಟಿದೇಳುವಂತೆ ಮಾಡಿದರು. 2013ರಲ್ಲಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೇರಿತು. ಆಗ ಸಿಎಂ ಆದ ಅವರು ಭಾಗ್ಯಗಳ ಹೆಸರಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಸ್ಪರ್ಧಿಸಿದರು. ಚಾಮುಂಡೇಶ್ವರಿಯಲ್ಲಿ ಅನಿರೀಕ್ಷಿತವಾಗಿ ಪರಾಭವಗೊಂಡ ಅವರು, ಬಾದಾಮಿಯಲ್ಲಿ ಅಲ್ಪಮತಗಳಿಂದ ಗೆಲುವು ಸಾಧಿಸಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತಾದರೂ ಒಂದೇ ವರ್ಷದಲ್ಲಿ ಅದು ಪತನವಾಯಿತು. ಬಳಿಕ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾದರು. ಕೊರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತೀಕ್ಷ$್ಣವಾಗಿ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆಗೂಡಿ ಸಂಘಟಿಸಿದರು.

ಇದು ಸಿದ್ದು ಜೀವನ, ಫ್ಯಾಮಿಲಿ

1948ರ ಆಗಸ್ಟ್‌ 12ರಂದು ಮೈಸೂರಿನ ವರುಣ ಹೋಬಳಿಯ ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಯ ಎರಡನೇ ಪುತ್ರನಾಗಿ ಸಿದ್ದರಾಮಯ್ಯ ಜನಿಸಿದರು. ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್‌ ವಕೀಲರಾಗಿ ಸೇರ್ಪಡೆಯಾಗಿ 1978ರವರೆಗೆ ಸ್ವಂತ ವಕೀಲ ವೃತ್ತಿ ಮಾಡಿದರು. 1978ರಲ್ಲಿ ರಾಜಕಾರಣಕ್ಕೆ ಅಧಿಕೃತ ಪ್ರವೇಶ ಪಡೆದ ಅವರು ಆನಂತರ ತಿರುಗಿ ನೋಡಿದ್ದಿಲ್ಲ.
ಸಿದ್ದರಾಮಯ್ಯ ಅವರು ಪಾರ್ವತಿ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳು. ಈ ಪೈಕಿ ಹಿರಿಯ ಮಗ ರಾಕೇಶ್‌ ಅನಾರೋಗ್ಯದಿಂದ 2016ರಲ್ಲಿ 38ನೇ ವಯಸ್ಸಿಗೆ ಮೃತಪಟ್ಟರು. ಎರಡನೇ ಮಗ ವೃತ್ತಿಯಲ್ಲಿ ವೈದ್ಯರಾಗಿದ್ದು, ಅಣ್ಣನ ಸಾವಿನ ಬಳಿಕ ರಾಜಕೀಯ ಪ್ರವೇಶಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲವು ಸಾಧಿಸಿದರು. ಈಗ ತಂದೆಗಾಗಿ ಕ್ಷೇತ್ರ ಬಿಟ್ಟುಕೊಟ್ಟು, ಅವರ ಗೆಲುವಿಗೆ ಕಾರಣರಾಗಿದ್ದಾರೆ. ಇನ್ನು ಹಿರಿಯ ಮಗ ದಿವಂಗತ ರಾಕೇಶ್‌ ಸಿದ್ದರಾಮಯ್ಯ ಅವರಿಗೆ ಪತ್ನಿ ಸ್ಮಿತಾ ಹಾಗೂ ಪುತ್ರ ಧವನ್‌, ಪುತ್ರಿ ತನ್ಮಯಿ ಎಂಬ ಮಕ್ಕಳಿದ್ದಾರೆ. ಸಿದ್ದರಾಮಯ್ಯ ಅವರು ಬಿಡುವಿನ ವೇಳೆಯಲ್ಲಿ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಅವರ ಮೊಮ್ಮಗ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.

ಪೂರ್ಣಾವಧಿ ಸಿಎಂ ಆದರೆ ಸಿದ್ದರಾಮಯ್ಯ ದಾಖಲೆ..!

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ರಾಜಕೀಯ ಒತ್ತಡ ನಡುವೆಯೂ ಸಿದ್ದರಾಮಯ್ಯ ಅವರು ಕುಟುಂಬಕ್ಕೆ ಸಮಯ ನೀಡುತ್ತಾರೆ. ಮೈಸೂರು ಸಮೀಪ ತೋಟದ ಮನೆ ಇದ್ದು, ಬಿಡುವಿನ ವೇಳೆಯಲ್ಲಿ ಅಲ್ಲಿ ವಿಶ್ರಾಂತಿ ಪಡೆಯುತ್ತಾರೆ.

ರಾಜಕೀಯ ಹಾದಿ

1980: ಮೊದಲ ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ. ಸೋಲು
1983: ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶ
1983: ಜನತಾ ಪಕ್ಷಕ್ಕೆ ಸೇರ್ಪಡೆ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ನೇಮಕ
1985: ಚಾಮುಂಡೇಶ್ವರಿ ಕ್ಷೇತ್ರದಿಂದ 2ನೇ ಬಾರಿ ಗೆಲುವು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ
1988: ಎಸ್‌.ಆರ್‌. ಬೊಮ್ಮಾಯಿ ಅವರ ಮಂತ್ರಿ ಮಂಡಲದಲ್ಲಿ ಸಾರಿಗೆ ಸಚಿವ
1989: ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು
1991: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸೋಲು
1992: ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರ್ಪಡೆ. ಜನತಾದಳದ ಕಾರ್ಯದರ್ಶಿಯಾಗಿ ನೇಮಕ
1994: ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ 3ನೇ ಬಾರಿ ಗೆಲುವು. ಎಚ್‌.ಡಿ. ದೇವೇಗೌಡ ಸಂಪುಟದಲ್ಲಿ ಹಣಕಾಸು ಸಚಿವ
1996: ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾದಾಗ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ
1999: ಜೆಡಿಎಸ್‌ ಸ್ಥಾಪನೆ. ರಾಜ್ಯಾಧ್ಯಕ್ಷರಾಗಿ ನೇಮಕ
1999: ವಿಧಾನಸಭೆ ಚುನಾವಣೆಯಲ್ಲಿ ಸೋಲು
2004: ಚಾಮುಂಡೇಶ್ವರಿಯಲ್ಲಿ 4ನೇ ಗೆಲುವು. ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿ
2005: ಜೆಡಿಎಸ್‌ನಿಂದ ಉಚ್ಚಾಟನೆ
2006: ಕಾಂಗ್ರೆಸ್‌ ಸೇರ್ಪಡೆ. ಉಪಚುನಾವಣೆಗೆ ಸ್ಪರ್ಧೆ. ಚಾಮುಂಡೇಶ್ವರಿ ಕ್ಷೇತ್ರದಿಂದ 5ನೇ ಗೆಲುವು
2008: ವರುಣ ಕ್ಷೇತ್ರದಲ್ಲಿ ಗೆಲುವು. 6ನೇ ಬಾರಿ ವಿಧಾನಸಭೆಗೆ ಪ್ರವೇಶ
2013: ವರುಣದಲ್ಲಿ ಮತ್ತೆ ಜಯಭೇರಿ. 7ನೇ ಬಾರಿ ವಿಧಾನಸಭೆಗೆ ಪ್ರವೇಶ
2013: ಮೇ 13ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
2018: ಚಾಮುಂಡೇಶ್ವರಿಯಲ್ಲಿ ಸೋಲು. ಬಾದಾಮಿಯಲ್ಲಿ ಗೆಲುವು. 8ನೇ ಬಾರಿ ವಿಧಾನಸಭೆ ಪ್ರವೇಶ
2018: ಕಾಂಗ್ರೆಸ್‌- ಜೆಡಿಎಸ್‌ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನೇಮಕ
2019: ವಿರೋಧ ಪಕ್ಷದ ನಾಯಕರಾಗಿ ನೇಮಕ
2023: ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ

ಅರಸು ನಂತರ 5 ವರ್ಷ ಪೂರೈಸಿದ ಮೊದಲ ಸಿಎಂ

ದಿವಂಗತ ದೇವರಾಜ ಅರಸು ನಂತರ ಕರ್ನಾಟಕ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ ಮೊದಲ ವ್ಯಕ್ತಿ ಸಿದ್ದರಾಮಯ್ಯ. 2013ರ ಮೇ 13ರಿಂದ 2018ರ ಮೇ 17ರವರೆಗೆ ಅವರು ಐದು ವರ್ಷ ಸಿಎಂ ಆಗಿದ್ದರು.

2 ಬಾರಿ ಉಪ ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರು ಎರಡು ಬಾರಿ ಉಪ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಜೆ.ಎಚ್‌.ಪಟೇಲ್‌ ಹಾಗೂ ಧರಂ ಸಿಂಗ್‌ ಅವರು ಸಿಎಂ ಆಗಿದ್ದಾಗ ಅವರು ಈ ಜವಾಬ್ದಾರಿ ನಿರ್ವಹಿಸಿದ್ದಾರೆ.

13 ಬಾರಿ ಬಜೆಟ್‌: ಹೆಗಡೆ ದಾಖಲೆ ಸರಿಗಟ್ಟಿದ್ದಾರೆ ಸಿದ್ದು

ರಾಜ್ಯದಲ್ಲಿ ಹೆಚ್ಚು ಬಾರಿ ಬಜೆಟ್‌ ಮಂಡನೆ ದಾಖಲೆ ಕರ್ನಾಟಕದಲ್ಲಿ ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿದೆ. ಈ ದಾಖಲೆಯಲ್ಲಿ ಸಿದ್ದರಾಮಯ್ಯ ಈಗಾಗಲೇ ಸರಿಗಟ್ಟಿದ್ದಾರೆ. ಇನ್ನೊಂದು ಬಜೆಟ್‌ ಮಂಡನೆ ಮಾಡಿದರೆ ಅತಿ ಹೆಚ್ಚು ಬಜೆಟ್‌ ಮಂಡನೆ ಮಾಡಿದ ಹಣಕಾಸು ಸಚಿವ ಎಂಬ ಕೀರ್ತಿಗೆ ಅವರು ಪಾತ್ರರಾಗಲಿದ್ದಾರೆ.

ನಾಟಿ ಕೋಳಿ ಸಾರು, ರಾಗಿ ಮುದ್ದೆ ಸಿದ್ದುಗೆ ಫೇವರಿಟ್‌

ಭೋಜನ ಪ್ರಿಯರಾಗಿರುವ ಸಿದ್ದರಾಮಯ್ಯ ಅವರಿಗೆ ಸಸ್ಯಾಹಾರ ಹಾಗೂ ಮಾಂಸಾಹಾರಗಳಲ್ಲಿ ಹಲವು ಪ್ರಿಯ ಖಾದ್ಯಗಳಿವೆ. ಬೋಂಡ ಸಾಂಬಾರ್‌, ನಾಟಿ ಕೋಳಿ ಸಾಂಬಾರ್‌, ರಾಗಿ ಮುದ್ದೆ ಎಂದರೆ ಬಲು ಇಷ್ಟ. ಸ್ನೇಹಿತರು, ಬಂಧುಗಳು, ಕಾರ್ಯಕರ್ತರ ಮನೆಗಳಿಗೆ ಹೋದರೆ ನಾಟಿಕೋಳಿ ಸಾರು- ಮುದ್ದೆ ಸವಿಯುತ್ತಾರೆ. ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಜನಾರ್ದನ ಹೋಟೆಲ್‌ನಲ್ಲಿ ಹಲವು ಬಾರಿ ದೋಸೆ ಸೇವಿಸಿದ್ದಾರೆ. ಇದರ ಜೊತೆಗೆ ಎಷ್ಟೇ ಒತ್ತಡದಲ್ಲಿದ್ದರೂ ನಿಯಮಿತವಾಗಿ ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಖ್ಯಾತ ಲೇಖಕರ ಕೃತಿಗಳು, ಸಾಹಿತ್ಯ ಕೃತಿಗಳು ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳ ಪುಸ್ತಕಗಳನ್ನು ಓದುತ್ತಾರೆ. ರಾಜಕೀಯ ಜಂಜಾಟಗಳ ನಡುವೆಯೂ ಸಿನಿಮಾ ನೋಡುವ ಹವ್ಯಾಸವನ್ನು ಉಳಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಡಿಕೆಶಿ ಡಿಸಿಎಂ

ಕನಕಪುರ ಬಂಡೆ, ಟ್ರಬಲ್‌ ಶೂಟರ್‌, ಸಂಘಟನಾ ಚತುರ ಎಂಬೆಲ್ಲಾ ಅಭಿದಾನಗಳನ್ನು ಹೊಂದಿರುವ ಡಿ.ಕೆ.ಶಿವಕುಮಾರ್‌ ರಾಜಕೀಯಕ್ಕೆ ಪ್ರವೇಶಿಸಿದ್ದು ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಮೂಲಕ. ಬೆಂಗಳೂರಿನ ಆರ್‌.ಸಿ.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿ ರಾಜಕೀಯ ಅಖಾಡಕ್ಕೆ ಧುಮುಕಿದರು. ಬಳಿಕ 1983ರಲ್ಲಿ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾದರು.

ಡಿಕೆಶಿ ತಮ್ಮ ಮೊದಲ ವಿಧಾನಸಭೆ ಚುನಾವಣೆ ಎದುರಿಸಿದ್ದು 1985ರಲ್ಲಿ. ಸಾತನೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆಗಿಳಿದಾಗ ಎದುರಾಳಿಯಾಗಿದ್ದವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ. ಆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್‌ ಸೋಲನ್ನು ಅನುಭವಿಸಿದರೂ ಜನತಾದಳದ ಬಲಿಷ್ಠ ಅಭ್ಯರ್ಥಿಯಾಗಿದ್ದ ದೇವೇಗೌಡರಿಗೆ ಪ್ರಬಲ ಪೈಪೋಟಿ ನೀಡಿದ್ದರು.

ಗೆದ್ದ ಒಂದೇ ವರ್ಷಕ್ಕೆ ಸಚಿವ:

ತಮ್ಮ 27ನೇ ವಯಸ್ಸಿನಲ್ಲಿ ಅಂದರೆ 1989ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಾತನೂರಿನಿಂದ ಕಣಕ್ಕಿಳಿದು ಜಯಭೇರಿ ಬಾರಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಶಿವಕುಮಾರ್‌ ಒಂದೇ ವರ್ಷದಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಸಚಿವ ಸಂಪುಟದಲ್ಲಿ ಬಂಧೀಖಾನೆ ಸಚಿವರಾಗಿ ನೇಮಕಗೊಂಡರು. 1994ರಲ್ಲಿ ಪಕ್ಷದ ಟಿಕೆಟ್‌ ಅನ್ನು ಶಿವಕುಮಾರ್‌ಗೆ ನೀಡುವುದನ್ನು ವಿರೋಧಿಸಲಾಗಿತ್ತು. ಆದರೂ ಧೃತಿಗೆಡದೆ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಜಯ ಗಳಿಸಿ ಗೆಲುವಿನ ನಾಗಾಲೋಟ ಮುಂದುವರೆಸಿದರು.

1999ರಲ್ಲಿ ವಿಧಾನಸಭೆಗೆ ಪುನರಾಯ್ಕೆಯಾದರು. ಎಸ್‌.ಎಂ.ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೇರಿದಾಗ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ಗೆ ‘ಶ್ಯಾಡೋ ಸಿಎಂ’ ಎಂಬ ಖ್ಯಾತಿಯೂ ದಕ್ಕಿತ್ತು. ಮಹಾರಾಷ್ಟ್ರದಲ್ಲಿ ವಿಲಾಸರಾವ್‌ ದೇಶಮುಖ್‌ ಸರ್ಕಾರವಿದ್ದ ಸಂದರ್ಭದಲ್ಲಿ ಬಹುಮತ ಸಾಬೀತುಪಡಿಸುವ ವೇಳೆ ಶಾಸಕರನ್ನು ಉಳಿಸಿಕೊಳ್ಳಲು ದೇಶಮುಖ್‌ ಅವರು ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಹಾಯ ಕೋರಿದ್ದರು. ಆಗ ಕೃಷ್ಣ ಅವರ ಸಂಪುಟ ಸದಸ್ಯರಾಗಿದ್ದ ಶಿವಕುಮಾರ್‌ ಮಹಾರಾಷ್ಟ್ರ ಕಾಂಗ್ರೆಸ್‌ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಚ್‌ನಲ್ಲಿ ಉಳಿಸಿಕೊಂಡಿದ್ದರು. ಅಂದು ವಿಲಾಸರಾವ್‌ ದೇಶಮುಖ್‌ ಸರ್ಕಾರ ವಿಶ್ವಾಸಮತವನ್ನು ಗೆದ್ದುಕೊಂಡಿತ್ತು.

10 ವರ್ಷ ಅಧಿಕಾರದಿಂದ ದೂರ:

2004ರಲ್ಲಿ ಡಿ.ಕೆ.ಶಿವಕುಮಾರ್‌ ಸಾತನೂರು ಕ್ಷೇತ್ರದಿಂದ 4ನೇ ಬಾರಿಗೆ ಆರಿಸಿ ಬಂದರೂ ಕಾಂಗ್ರೆಸ್‌ ಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾಯಿತು. ಅಂದು ಮೊದಲ ಬಾರಿಗೆ ರಾಜ್ಯದಲ್ಲಿ ಧರ್ಮಸಿಂಗ್‌ ನೇತೃತ್ವದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಡಿ.ಕೆ.ಶಿವಕುಮಾರ್‌ ಅವರ ಸಚಿವ ಸಂಪುಟ ಸೇರ್ಪಡೆಗೆ ದೇವೇಗೌಡರಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಸಚಿವ ಸ್ಥಾನ ತಪ್ಪಿಸಿಕೊಂಡ ಡಿ.ಕೆ. ಶಿವಕುಮಾರ್‌ ಅವರು ಸುಮಾರು 10 ವರ್ಷಗಳ ಕಾಲ ಅಧಿಕಾರದಿಂದ ದೂರವೇ ಉಳಿಯಬೇಕಾಯಿತು.

ಕ್ಷೇತ್ರ ಪುನರ್‌ ವಿಂಗಡಣೆಯಾಗಿದ್ದರಿಂದ ಸಾತನೂರು ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು. ಕನಕಪುರ ಕ್ಷೇತ್ರದಿಂದ 2008ರಲ್ಲಿ ಸ್ಪರ್ಧಿಸಿ ಡಿಕೆಶಿ ಆಯ್ಕೆಯಾದರು. ಆರ್‌.ವಿ.ದೇಶಪಾಂಡೆ ಅವರು ಕೆಪಿಸಿಸಿ ಅಧ್ಯಕ್ಷರಾದಾಗ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. 2013ರಲ್ಲಿ ಕನಕಪುರದಿಂದ ಡಿಕೆಶಿ ಪುನರಾಯ್ಕೆಯಾದರಾದರೂ ಹಲವು ತಿಂಗಳುಗಳ ಕಾಲ ಸಚಿವ ಸ್ಥಾನ ಸಿಕ್ಕಿರಲಿಲ್ಲ. 2014ರಲ್ಲಿ ಅವರು ಇಂಧನ ಸಚಿವರಾದರು.

2018ರಲ್ಲಿ ಡಿಕೆಶಿ ಕನಕಪುರದಿಂದ 3ನೇ ಬಾರಿಗೆ ವಿಜೇತರಾದರು. ಆಗ ಕಾಂಗ್ರೆಸ್‌ ಸರ್ಕಾರ ಪುನರಾಯ್ಕೆಯಾಗಲಿಲ್ಲ. ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ.ಶಿವಕುಮಾರ್‌ ಅವರು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರು ರಾಜ್ಯದಲ್ಲಿ ಹೆಚ್ಚು ಪ್ರಮಾಣದ ಚೆಕ್‌ ಡ್ಯಾಮ್‌ಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡುವ ಮೂಲಕ ಉತ್ತೇಜಿಸಿದ್ದರು.

ನಿಷ್ಠ ಕಾಂಗ್ರೆಸ್ಸಿಗ:

ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಸೇನಾನಿಯಾಗಿ ಕಾರ್ಯನಿರ್ವಹಿಸಿರುವ ಡಿ.ಕೆ.ಶಿವಕುಮಾರ್‌ ಅವರು ಯಾವುದೇ ಸಂದರ್ಭದಲ್ಲೂ ಯಾವುದೇ ಆಮಿಷಗಳಿಗೂ ಬಲಿಯಾಗದೇ ಪಕ್ಷ ನಿಷ್ಠೆಯನ್ನು ಬದಲಿಸಲಿಲ್ಲ. 2017ರಲ್ಲಿ ಹೈಕಮಾಂಡ್‌ ವಹಿಸಿದ್ದ ಜವಾಬ್ದಾರಿಯ ಮೇರೆಗೆ ಗುಜರಾತ್‌ ಕಾಂಗ್ರೆಸ್‌ ಶಾಸಕರನ್ನು ರಕ್ಷಿಸಿಟ್ಟುಕೊಂಡಿದ್ದ ಅವರು ಅದಕ್ಕಾಗಿ ಭಾರೀ ಬೆಲೆಯನ್ನೇ ತೆರಬೇಕಾಯಿತು. ಆದರೂ ವಿಚಲಿತರಾಗಲಿಲ್ಲ. ಐ.ಟಿ, ಇ.ಡಿ. ದಾಳಿಗಳು ನಡೆದು ಜೈಲಿಗೂ ಹೋಗಬೇಕಾಯಿತು. ಈ ಸಂದರ್ಭದಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಜೈಲಿಗೆ ಭೇಟಿ ಕೊಟ್ಟು ಡಿ.ಕೆ.ಶಿವಕುಮಾರ್‌ ಅವರಿಗೆ ಸಾಂತ್ವನ ಹೇಳಿದ್ದು, ಅವರ ಪಕ್ಷ ನಿಷ್ಠೆಗೆ ಸಿಕ್ಕ ಗೌರವ.

ಒಲಿದ ಕೆಪಿಸಿಸಿ ಚುಕ್ಕಾಣಿ:

ಡಿ.ಕೆ.ಶಿವಕುಮಾರ್‌ ಅವರು ಜೈಲಿನಲ್ಲಿದ್ದಾಗ ಜನರು ಬೀದಿಗಿಳಿದು ಮಾಡಿದ ಹೋರಾಟ ಹಾಗೂ ಅವರು ಜೈಲಿನಿಂದ ಬಂದ ಬಳಿಕ ಶಿವಕುಮಾರ್‌ ಅವರಿಗೆ ಸಿಕ್ಕಿದ ಸ್ವಾಗತ ಅವರ ನಿಷ್ಠಾವಂತ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ್‌ ಅವರು ಮಾಡಿದ ತ್ಯಾಗ, ಅನುಭವಿಸಿದ ಸಂಕಷ್ಟಗಳು ಮತ್ತು ಪಕ್ಷ ನಿಷ್ಠೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ 2020 ಮಾ.11ರಂದು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಗುರುತಿಸಿತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತಂದು ಮತ್ತೊಂದು ಉನ್ನತ ಹುದ್ದೆಗೆ ಏರಿದ್ದಾರೆ.

ರಾಜಕೀಯ ಹಾದಿ

1981: ಎನ್‌ಎಸ್‌ಯುಐ ಮೂಲಕ ರಾಜಕಾರಣಕ್ಕೆ
1983: ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
1985: ಸಾತನೂರು ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧೆ. ಎಚ್‌.ಡಿ.ದೇವೇಗೌಡ ವಿರುದ್ಧ ಸೋಲು
1987: ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿ.ಪಂ. ಸದಸ್ಯರಾಗಿ ಆಯ್ಕೆ
1989: ಸಾತನೂರು ಶಾಸಕರಾಗಿ ಮೊದಲ ಬಾರಿ ಗೆಲುವು
1991: 29 ವರ್ಷಕ್ಕೇ ಎಸ್‌.ಬಂಗಾರಪ್ಪ ಸಂಪುಟದಲ್ಲಿ ಬಂಧೀಖಾನೆ ಸಚಿವ
1994: ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು. 2ನೇ ಬಾರಿ ಶಾಸಕ
1999: ಸಾತನೂರಲ್ಲಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಗೆಲುವು. 3ನೇ ಬಾರಿ ಶಾಸಕ.
1999: ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿ ನೇಮಕ
2002: ಕನಕಪುರ ಲೋಕಸಭಾ ಉಪಚುನಾವಣೆಗೆ ಸ್ಪರ್ಧೆ. ಎಚ್‌.ಡಿ.ದೇವೇಗೌಡ ವಿರುದ್ಧ ಸೋಲು
2004: ಸಾತನೂರಲ್ಲಿ ಮತ್ತೆ ಜಯಭೇರಿ. 4ನೇ ಬಾರಿ ವಿಧಾನಸಭೆಗೆ ಪ್ರವೇಶ
2008: ಕನಕಪುರದಿಂದ ಸ್ಪರ್ಧಿಸಿ ಗೆಲುವು. 5ನೇ ಬಾರಿ ಶಾಸಕ
2008: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ
2013: ಕನಕಪುರದಿಂದ ಮತ್ತೆ ಗೆಲುವು. 6ನೇ ಬಾರಿ ವಿಧಾನಸಭೆಗೆ
2014: ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಮಂತ್ರಿ
2018: ಕನಕಪುರದಿಂದ ಜಯಭೇರಿ. 7ನೇ ಬಾರಿ ಶಾಸಕ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ
2019: ಜಾರಿ ನಿರ್ದೇಶನಾಲಯದಿಂದ ಬಂಧನ
2019: 48 ದಿನ ತಿಹಾರ್‌ ಜೈಲು ವಾಸ ಮುಗಿಸಿ ಬಿಡುಗಡೆ
2020: ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
2023: ಕನಕಪುರದಲ್ಲಿ ದಾಖಲೆ ಅಂತರದ ಗೆಲುವು. 8ನೇ ಬಾರಿ ಶಾಸಕ

ಇಬ್ಬರ ಮುಂದಿನ ಅಣ್ಣ, 3 ಮಕ್ಕಳ ನೆಚ್ಚಿನ ಅಪ್ಪ

ರಾಮನಗರ ಜಿಲ್ಲೆ ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪ್ರಥಮ ಪುತ್ರರಾಗಿ 1962ರ ಮೇ 15ರಂದು ಜನಿಸಿದವರು ಡಿ.ಕೆ.ಶಿವಕುಮಾರ್‌. ಡಿ.ಕೆ.ಸುರೇಶ್‌ ಹಾಗೂ ಡಿ.ಕೆ.ಮಂಜುಳಾ ಅವರು ಡಿಕೆಶಿ ಅವರ ಒಡಹುಟ್ಟಿದವರು. ತಂದೆ ನಿಧನರಾಗಿದ್ದು, ತಾಯಿ ಗೌರಮ್ಮ ಅವರು ದೊಡ್ಡಾಲಹಳ್ಳಿಯ ಮನೆಯಲ್ಲಿ ವಾಸವಾಗಿದ್ದಾರೆ. ಮೈಸೂರು ಮೂಲದ ಉಷಾ ಅವರನ್ನು ವಿವಾಹವಾಗಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಐಶ್ವರ್ಯ, ಆಭರಣ ಮತ್ತು ಆಕಾಶ್‌ ಕೆಂಪೇಗೌಡ ಎಂಬ ಮೂವರು ಮಕ್ಕಳಿದ್ದಾರೆ. ಹಿರಿಯ ಪುತ್ರಿ ಐಶ್ವರ್ಯ ಅವರು ಎಸ್‌.ಎಂ.ಕೃಷ್ಣ ಅವರ ಮೊಮ್ಮಗ ಆಗಿರುವ ಹಾಗೂ ಪ್ರಸಿದ್ಧ ಉದ್ಯಮಿ ಕಾಫಿಡೇ ಸಿದ್ಧಾಥ್‌ರ್‍ ಅವರ ಪುತ್ರರಾಗಿರುವ ಅಮತ್ರ್ಯ ಹೆಗ್ಡೆ ಜತೆ ವಿವಾಹವಾಗಿದ್ದಾರೆ. ಜತೆಗೆ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಆಭರಣ ಹಾಗೂ ಆಕಾಶ್‌ ವ್ಯಾಸಂಗ ಮಾಡುತ್ತಿದ್ದಾರೆ. ಡಿಕೆಶಿ ಅವರ ಸೋದರ ಡಿ.ಕೆ. ಸುರೇಶ್‌ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ 2ನೇ ಬಾರಿಗೆ ಸಂಸದರಾಗಿದ್ದಾರೆ. ಡಿಕೆಶಿ ಅವರ ರಾಜಕಾರಣ ಹಾಗೂ ಉದ್ದಿಮೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಪ್ರತಿದಿನವೂ ಒಂದು ಗಂಟೆ ದೇವರ ಪೂಜೆ

ದೇವರನ್ನು ಹೆಚ್ಚಾಗಿ ನಂಬುವ ಡಿ.ಕೆ.ಶಿವಕುಮಾರ್‌ ನಿತ್ಯ 1 ಗಂಟೆ ಮನೆಯ ದೇವರ ಕೊಠಡಿಯಲ್ಲಿ ಪೂಜೆಯಲ್ಲಿ ತೊಡಗುತ್ತಾರೆ. ನೊಣವಿನಕೆರೆ ಕಾಡು ಸಿದ್ದೇಶ್ವರ ಮಠ, ಸಾತನೂರಿನ ಕಬ್ಬಾಳಮ್ಮ ಹಾಗೂ ಕನಕಪುರದ ಮನೆ ದೇವರು ಕೆಂಕೇರಮ್ಮ ದೇವಾಲಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಅವರ ಬೆಂಗಳೂರಿನ ನಿವಾಸಕ್ಕೆ ‘ಕೆಂಕೇರಿ’ ಎಂದು ಹೆಸರಿಟ್ಟಿದ್ದಾರೆ.

ಆಗ ಮಾಂಸಾಹಾರಿ, ಈಗ ಶುದ್ಧ ಸಸ್ಯಾಹಾರಿ

ಮಾಂಸಾಹಾರ ಪ್ರಿಯರಾಗಿದ್ದ ಡಿ.ಕೆ.ಶಿವಕುಮಾರ್‌ ಕೆಲ ವರ್ಷಗಳಿಂದ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ. ಯಾವುದೇ ಸಮಯದಲ್ಲೂ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಅವರು ಮಾಂಸಾಹಾರ ತ್ಯಜಿಸಲು ನೊಣವಿನಕೆರೆ ಅಜ್ಜಯ್ಯ ಮಠದ ಗುರುಗಳ ಸಲಹೆ ಕಾರಣ ಎಂದು ಅವರೇ ಇತ್ತೀಚೆಗೆ ಹೇಳಿಕೊಂಡಿದ್ದರು.

ಎಲ್ಲ ಕೆಲಸಕ್ಕೂ ಈ ಅಜ್ಜಯ್ಯನ ಅಪ್ಪಣೆಗೆ ಕಾಯ್ತಾರೆ ಡಿಕೆಶಿ, ಅವರ ಮಹಾತ್ಮೆ ಏನು?

ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು

ಡಿ.ಕೆ.ಶಿವಕುಮಾರ್‌ ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. ಈ ಬಾರಿ ಕರ್ನಾಟಕ ವಿಧಾನಸಭೆಗೆ ಆರಿಸಿಬಂದವರಲ್ಲಿ ಡಿಕೆಶಿ ಅವರಷ್ಟುಆಸ್ತಿ ಯಾರ ಬಳಿಯೂ ಇಲ್ಲ. ಅವರು 1413 ಕೋಟಿ ರು. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಶಿವಕುಮಾರ್‌ ಹೆಸರು ಬಂದಿದ್ದು ಹೇಗೆ?

ಡಿ.ಕೆ.ಶಿವಕುಮಾರ್‌ ಅವರ ತಂದೆ-ತಾಯಿಗೆ ಮದುವೆಯಾದ ಮೂರು ವರ್ಷದ ಬಳಿಕವೂ ಸಂತಾನಭಾಗ್ಯ ಇರಲಿಲ್ಲ. ಈ ವೇಳೆ ಶಿವಾಲದಪ್ಪ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದರು. ಶಿವನ ಅನುಗ್ರಹದ ಫಲವಾಗಿಯೇ ಮಗ ಜನಿಸಿದ್ದಾನೆ ಎಂಬ ಕಾರಣಕ್ಕೆ ಶಿವಕುಮಾರ್‌ ಎಂಬ ಹೆಸರು ನಾಮಕರಣ ಮಾಡಿದರು.