ವೇಣುಗೋಪಾಲ್‌ ಅವರ ನಿವಾಸದಲ್ಲಿ ಉಪಾಹಾರ ಸೇವಿಸಿದ ಬಳಿಕ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಆಗಮಿಸಿದರು. ಈ ವೇಳೆ ಇಬ್ಬರ ಕೈ ಎತ್ತಿ ಹಿಡಿದ ಖರ್ಗೆ ಅವರು ಸ್ಫೂರ್ತಿ ತುಂಬಿದರು. ಈ ಫೋಟೋವನ್ನು ಬಿಡುಗಡೆ ಮಾಡಿ ಸಂಧಾನ ಯಶಸ್ವಿ ಹಾಗೂ ಒಗ್ಗಟ್ಟಿನ ಸಂದೇಶ ಸಾರಲಾಯಿತು. 

ಬೆಂಗಳೂರು(ಮೇ.19): ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಕೆಯ ರಾಜೀ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿ, ಕಾರಲ್ಲಿ ಒಟ್ಟಿಗೆ ಪ್ರಯಾಣಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಬ್ಬರೂ ನಾಯಕರ ಕೈ ಎತ್ತಿ ಫೋಟೋಗೆ ಪೋಸ್‌ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಅಲ್ಲದೆ, ಇಬ್ಬರೂ ಜೊತೆಯಲ್ಲೇ ಬೆಂಗಳೂರಿಗೆ ವಾಪಸಾದರು. ತನ್ಮೂಲಕ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆಗೆ ಕಳೆದ 4 ದಿನಗಳಿಂದ ದೆಹಲಿಯಲ್ಲಿ ನಡೆದಿದ್ದ ಹೈಡ್ರಾಮಾ ಸುಖಾಂತ್ಯಗೊಂಡಿತು. ಬುಧವಾರ ತಡರಾತ್ರಿ ಸೋನಿಯಾ ಅವರ ಮಧ್ಯಸ್ಥಿಕೆ ಮೂಲಕ ಸಂಧಾನ ಯಶಸ್ವಿಗೊಳಿಸಿದ ಕಾಂಗ್ರೆಸ್‌ ನಾಯಕರು ಗುರುವಾರ ಬೆಳಗ್ಗೆಯೇ ಉಭಯ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿದರು.

ಎಲ್ಲ ಕೆಲಸಕ್ಕೂ ಈ ಅಜ್ಜಯ್ಯನ ಅಪ್ಪಣೆಗೆ ಕಾಯ್ತಾರೆ ಡಿಕೆಶಿ, ಅವರ ಮಹಾತ್ಮೆ ಏನು?

ಇದಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಗುರುವಾರ ಬೆಳಗ್ಗೆ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರನ್ನೂ ಒಟ್ಟಿಗೆ ತಮ್ಮ ನಿವಾಸಕ್ಕೆ ಉಪಾಹಾರಕ್ಕೆ ಆಹ್ವಾನಿಸಿದ್ದರು. ಸುಮಾರು 10 ಗಂಟೆ ವೇಳೆಗೆ ಒಬ್ಬರ ಬಳಿಕ ಒಬ್ಬರು ವೇಣುಗೋಪಾಲ್‌ ನಿವಾಸಕ್ಕೆ ಆಗಮಿಸಿ ಒಂದೇ ಟೇಬಲ್‌ನಲ್ಲಿ ಮುಖಾಮುಖಿಯಾಗಿ ಕೂತು ಉಪಾಹಾರ ಸೇವಿಸಿದರು. ಈ ವೇಳೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಕೂಡ ಹಾಜರಿದ್ದರು. ಈ ವೇಳೆ ಇಬ್ಬರ ನಡುವೆ ಕೆಲ ಮಾತುಕತೆಯೂ ನಡೆಯಿತು ಎಂದು ತಿಳಿದು ಬಂದಿದೆ.

ಕೈ ಹಿಡಿದು ಎತ್ತಿ ಸ್ಫೂರ್ತಿ ತುಂಬಿದ ಖರ್ಗೆ:

ವೇಣುಗೋಪಾಲ್‌ ಅವರ ನಿವಾಸದಲ್ಲಿ ಉಪಾಹಾರ ಸೇವಿಸಿದ ಬಳಿಕ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಆಗಮಿಸಿದರು. ಈ ವೇಳೆ ಇಬ್ಬರ ಕೈ ಎತ್ತಿ ಹಿಡಿದ ಖರ್ಗೆ ಅವರು ಸ್ಫೂರ್ತಿ ತುಂಬಿದರು. ಈ ಫೋಟೋವನ್ನು ಬಿಡುಗಡೆ ಮಾಡಿ ಸಂಧಾನ ಯಶಸ್ವಿ ಹಾಗೂ ಒಗ್ಗಟ್ಟಿನ ಸಂದೇಶ ಸಾರಲಾಯಿತು. ನಂತರ ಮಧ್ಯಾಹ್ನ 3 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಒಟ್ಟಿಗೇ ಹೊರಟ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಸಂಜೆ 5.30ರ ವೇಳೆಗೆ ಬೆಂಗಳೂರು ತಲುಪಿದರು.