ರಾಜ್ಯ ಚುನಾವಣಾ ಫಲಿತಾಂಶದ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ನೆಲೆಯೂರಿದಂತಾಗಿದೆ. ಅದರ ಜತೆಗೆ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಈ ಗೆಲುವು ಬಿಜೆಪಿಯೇತರ ಪಕ್ಷಗಳಿಗೆ ಚೇತೋಹಾರಿಯಾಗಿದ್ದು, ಹೊಸ ಹುಮ್ಮಸ್ಸಿನೊಂದಿಗೆ ಚುನಾವಣೆ ಎದುರಿಸಲು ಸಹಕಾರಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು(ಮೇ.21): ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮದ ಮೂಲಕ ಬಿಜೆಪಿ ವಿರೋಧಿ ಪಕ್ಷಗಳು ಶಕ್ತಿ ಪ್ರದರ್ಶನ ನಡೆಸಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಈ ಸಮಾರಂಭವನ್ನು ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯನ್ನಾಗಿಸಿಕೊಂಡವು.
ರಾಜ್ಯ ಚುನಾವಣಾ ಫಲಿತಾಂಶದ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ನೆಲೆಯೂರಿದಂತಾಗಿದೆ. ಅದರ ಜತೆಗೆ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಈ ಗೆಲುವು ಬಿಜೆಪಿಯೇತರ ಪಕ್ಷಗಳಿಗೆ ಚೇತೋಹಾರಿಯಾಗಿದ್ದು, ಹೊಸ ಹುಮ್ಮಸ್ಸಿನೊಂದಿಗೆ ಚುನಾವಣೆ ಎದುರಿಸಲು ಸಹಕಾರಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ನಡುವೆ ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ 8 ಜನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವಿರೋಧ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ದಾರಿ ಮಾಡಿಕೊಟ್ಟಿತ್ತು. ವಿವಿಧ ರಾಜ್ಯಗಳ ಬಿಜೆಪಿಯೇತರ ಪಕ್ಷಗಳ ಮುಖ್ಯಮಂತ್ರಿಗಳು, ಹಲವು ಪಕ್ಷಗಳ ಪ್ರಮುಖರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾಂಗ್ರೆಸ್ 5 ಗ್ಯಾರಂಟಿ ಈಡೇರಿಕೆಗೆ, ಸಾಲದ ಬಡ್ಡಿಗಿಂತ ಕಡಿಮೆ ಹಣ ಸಾಕು: ಸಿಎಂ ಸಿದ್ದರಾಮಯ್ಯ
17 ಪಕ್ಷಗಳ ನಾಯಕರು ಭಾಗಿ:
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿ ಯಾದವ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಸಿಪಿಎಂನ ಪ್ರಮುಖ ಸೀತಾರಾಂ ಯಚೂರಿ, ಸಿಪಿಐನ ಡಿ. ರಾಜಾ, ಐಯುಎಂಎಲ್‌ನ ಅಬ್ದುಲ್ ಸಂದಾನಿ, ಆರ್‌ಎಲ್‌ಡಿಯ ಜಯಂತ್ ಚೌಧರಿ, ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್, ಪಿಡಿಪಿಯ ಮೆಹಬೂಬಾ ಮುಫ್ತಿ, ಜೆಡಿಯುನ ಲಲ್ಲನ್ ಸಿಂಗ್, ಟಿಎಂಸಿಯ ಡಾ. ಕಾಕೋಲಿ ಘೋಷ್ ದಸ್ತಿದಾರ್, ಸಿಪಿಐ (ಎಂಎಲ್)ನ ದೀಪಾಂಕರ್ ಭಟ್ಟಾಚಾರ್ಯ, ವಿಸಿಕೆ ಪಕ್ಷದ ಡಾ. ತಿರುಮವಲ್ಲವನ್, ಶಿವಸೇನಾ ಸಂಸದರಾದ ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ, ಚಲನಚಿತ್ರ ನಟ ಹಾಗೂ ಎಂಎನ್‌ಎಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅವರ ಜತೆಗೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖು ಕೂಡ ಪ್ರಮಾಣ ವಚನಕ್ಕೆ ಸಾಕ್ಷಿಯಾದರು.
ಶಿವಸೇನಾ (ಯುಟಿ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಕಾರ್ಯಕ್ರಮಕ್ಕೆ ಪಾಲ್ಗೊಳ್ಳದಿದ್ದರೂ, ಅವರ ಪ್ರತಿನಿಧಿಯಾಗಿ ಪಕ್ಷದ ಸಂಸದರನ್ನು ಕಳುಹಿಸಿದ್ದರು.
ಕೈ ಎತ್ತಿ ಒಗ್ಗಟ್ಟು ಪ್ರದರ್ಶನ:
ಪ್ರಮಾಣ ವಚನ ಕಾರ್ಯಕ್ರಮ ಆರಂಭಕ್ಕೂ ಮುನ್ನ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲರನ್ನೂ ಖುದ್ದು ಭೇಟಿಯಾಗಿ ಅವರ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದರು. ಅದರಲ್ಲೂ ಶರದ್ ಪವಾರ್, ನಿತೀಶ್ ಕುಮಾರ್, ಎಂ.ಕೆ. ಸ್ಟಾಲಿನ್ ಬಳಿ ಸುಮಾರು 5 ನಿಮಿಷಗಳ ಬಳಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಎಲ್ಲ ಮುಖಂಡರು ವೇದಿಕೆ ಮುಂಭಾಗ ಬಂದು ಕೈ ಎತ್ತಿ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಮತ್ತೊಮ್ಮೆ ಪ್ರದರ್ಶನ
ಪ್ರಮಾಣ ವಚನ ಕಾರ್ಯಕ್ರಮ ಒಂದೆಡೆ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವೂ ನಡೆಯಿತು. ಕಾರ್ಯಕ್ರಮಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ 1 ಲಕ್ಷಕ್ಕೂ ಹೆಚ್ಚಿನ ಜನರು ಆಗಮಿಸಿ ತಮ್ಮ ನೆಚ್ಚಿನ ನಾಯಕರ ಪ್ರಮಾಣ ವಚನ ಕಣ್ತುಂಬಿಕೊಂಡರು. ಆ ಮೂಲಕ ವಿಧಾನಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದ ಜನರು ಕಾಂಗ್ರೆಸ್ ಜತೆಗಿದ್ದಾರೆ ಎಂಬ ಸಂದೇಶವನ್ನು ಮತ್ತೆ ಸಾರಿದಂತಾಗಿದೆ. ಅಲ್ಲದೆ, ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಜಯಕಾರ ಹಾಕುವ ಮೂಲಕ ಕಾಂಗ್ರೆಸ್‌ನ ಸಿಎಂ ಆಯ್ಕೆ ಸಮರ್ಥವಾಗಿದೆ ಎಂಬುದನ್ನು ಜನರು ಅನುಮೋದಿಸಿದಂತಿತ್ತು.
ಸಿದ್ದರಾಮಯ್ಯಗೆ ರಾಹುಲ್ ಆಲಿಂಗನ
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಸಿದ್ದರಾಮಯ್ಯ ಎಲ್ಲ ಪಕ್ಷಗಳ ಮುಖಂಡರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮಾತನಾಡಿಸುತ್ತಾ ಬಂದರು. ಮೊದಲಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಿಸಿ, ನಂತರ ರಾಹುಲ್ ಗಾಂಧಿ ಬಳಿ ಬಂದಾಗ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡು ರಾಹುಲ್ ಗಾಂಧಿ ಶುಭ ಕೋರಿದರು.
ಖರ್ಗೆ ಕಾಲಿಗೆರಗಿದ ಡಿಕೆಶಿ
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಪಕ್ಷದ ನಾಯಕರಿಗೆ ಹಸ್ತಲಾಘವ ಮಾಡಿದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.
ಒಂದೇ ಕಾರಲ್ಲಿ ಆಗಮನ
ಕಂಠೀರವ ಕ್ರೀಡಾಂಗಣಕ್ಕೆ ಕಾಂಗ್ರೆಸ್ ವರಿಷ್ಠರು ಒಂದೇ ಕಾರಿನಲ್ಲಿ ಆಗಮಿಸಿದರು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಒಂದೇ ಕಾರಿನಲ್ಲಿ ಆಗಮಿಸಿದರು. ಸಿದ್ದರಾಮಯ್ಯ ಅವರಿಗಿಂತ ಮೊದಲೇ ಡಿ.ಕೆ. ಶಿವಕುಮಾರ್ ವೇದಿಕೆಗೆ ಬಂದು ನಡೆದ ಸಿದ್ಧತೆಯನ್ನು, ಆಗಮಿಸಿದ ಗಣ್ಯರನ್ನು ವಿಚಾರಿಸಿದರು. ಕಾಂಗ್ರೆಸ್ ವರಿಷ್ಠರು ಆಗಮಿಸಿದ ಸಂದರ್ಭದಲ್ಲಿಯೇ ಸಿದ್ದರಾಮಯ್ಯ ಅವರು ಕಂಠೀರವ ಕ್ರೀಡಾಂಗಣಕ್ಕೆ ಬಂದರು.
ಪ್ರಮಾಣ ವಚನಕ್ಕೆ ತಾರಾ ಮೆರುಗು
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಚಲನಚಿತ್ರ ತಾರೆಯರು ಪಾಲ್ಗೊಂಡಿದ್ದರು. ಪ್ರಮುಖವಾಗಿ ನಟರಾದ ಶಿವರಾಜಕುಮಾರ್, ಪತ್ನಿ ಗೀತಾ ಶಿವರಾಜಕುಮಾರ್, ಮಾಜಿ ಸಂಸದೆ, ನಟಿ ರಮ್ಯಾ, ದುನಿಯಾ ವಿಜಯ್, ನಿಶ್ವಿಕಾ ನಾಯ್ಡು, ರಾಜೇಂದ್ರ ಸಿಂಗ್ ಬಾಬು, ಉಮಾಶ್ರೀ, ಸಾಧು ಕೋಕಿಲ ಸೇರಿ ಹಲವು ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ಸಿಎಂ ಆದ ದಿನವೇ ಶುಭಸೂಚನೆ: ರಾಜ್ಯ ವಿವಿಧೆಡೆ ಭರ್ಜರಿ ಮಳೆ
ರೇಷ್ಮೆ ಶಾಲು ಹೊದಿಸಿ ಸನ್ಮಾನ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಮಿಳುನಾಡು ಸಿಎಂ ರೇಷ್ಮೆ ಶಾಲು ಹೊದಿಸಿ, ಕಂಚಿ ಕಾಮಾಕ್ಷಿ ದೇವಿ ಭಾವಚಿತ್ರ ನೀಡುವ ಮೂಲಕ ಸನ್ಮಾನಿಸಿದರು.
ತಾತನಿಗೆ ಮೊಮ್ಮಗ ಸಾಥ್
ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಗ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಮತ್ತೋರ್ವ ಪುತ್ರ ರಾಕೇಶ್ ಮಗ ಧವನ್ ಪಾಲ್ಗೊಂಡಿದ್ದರು. ಅದರಲ್ಲಿ ಧವನ್ ಎಲ್ಲರ ಕೇಂದ್ರಬಿಂದುವಾಗಿದ್ದರು. ಅಲ್ಲದೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ, ಸಂಸದ ಡಿ.ಕೆ. ಸುರೇಶ್ ಧವನ್ ಅವರನ್ನು ಹತ್ತಿರಕ್ಕೆ ಕರೆದು ಆತ್ಮಿಯವಾಗಿ ಮಾತನಾಡಿಸಿದ್ದು ವಿಶೇಷವಾಗಿತ್ತು.
